

ಗಾಯಕ ಸಿಧು ಮೂಸೆವಾಲಾ ಮತ್ತು ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾತಕಿ ಅನ್ಮೋಲ್ ಬಿಷ್ಣೋಯ್‌ನನ್ನು ದೆಹಲಿ ನ್ಯಾಯಾಲಯ 11 ದಿನ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಶಕ್ಕೆ ನೀಡಿದೆ.
ಪಟಿಯಾಲ ಹೌಸ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪ್ರಶಾಂತ್ ಶರ್ಮಾ ಈ ಆದೇಶ ಹೊರಡಿಸಿದ್ದಾರೆ. ಎನ್‌ಐಎ 15 ದಿನಗಳವರೆಗೆ ವಶಕ್ಕೆ ಕೇಳಿತ್ತು.
ಜೈಲಿನಲ್ಲಿರುವ ಮತ್ತೊಬ್ಬ ಕುಖ್ಯಾತ ಪಾತಕಿ ಲಾರೆನ್ಸ್ ಬಿಷ್ಣೋಯ್ ಸಹೋದರನಾಗಿರುವ ಅನ್ಮೋಲ್ ಬಿಷ್ಣೋಯ್ 2022 ರ ಮೇ ತಿಂಗಳಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ, ಕಳೆದ ವರ್ಷ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ, ನಟ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಗುಂಡು ಹಾರಿಸಿದ ಘಟನೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಇದೆ.
ಅನ್ಮೋಲ್ 2022ರಲ್ಲಿ ನಕಲಿ ಪಾಸ್‌ಪೋರ್ಟ್ ಬಳಸಿ ದೇಶದಿಂದ ಪಲಾಯನ ಮಾಡಿದ್ದ. ನಕಲಿ ದಾಖಲೆ ಬಳಸಿ ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಅಮೆರಿಕ ವಲಸೆ ಮತ್ತು ಸುಂಕಾಧಿಕಾರಿಗಳು ಆತನನ್ನು ನವೆಂಬರ್ 2024ರಲ್ಲಿ ಬಂಧಿಸಿ ಅಯೋವಾದ ಕೌಂಟಿ ಜೈಲಿನಲ್ಲಿ ಇರಿಸಿದ್ದರು.
ಭಾರತಕ್ಕೆ ಗಡಿಪಾರು ಮಾಡುವುದನ್ನು ತಪ್ಪಿಸುವುದಕ್ಕಾಗಿ ಅನ್ಮೋಲ್ ಆಶ್ರಯ ಕೋರಿ ಅರ್ಜಿ ಸಲ್ಲಿಸಿದ್ದ. ಆದರೆ ಅಮೆರಿಕದ ಗೃಹ ಇಲಾಖೆ ಆತನನ್ನು ನವೆಂಬರ್ 18, 2025ರಂದು ಭಾರತಕ್ಕೆ ಗಡಿಪಾರು ಮಾಡಿತು.