
ಉದ್ಯಮಿ ಗೌತಮ್ ಅದಾನಿ ಅವರ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (ಎಇಎಲ್) ವಿರುದ್ಧ ಮಾನಹಾನಿಕರ ವಸ್ತುವಿಷಯ ಪ್ರಕಟಿಸದಂತೆ ಪತ್ರಕರ್ತರು ಹಾಗೂ ಹೋರಾಟಗಾರರಾದ ಪರಂಜಯ್ ಗುಹಾ ಠಾಕೂರ್ತಾ, ರವಿ ನಾಯರ್, ಅಬೀರ್ ದಾಸ್‌ಗುಪ್ತಾ, ಆಯಸ್ಕಾಂತ್ ದಾಸ್, ಆಯುಷ್ ಜೋಶಿ ಮತ್ತಿತರರಿಗೆ ದೆಹಲಿ ನ್ಯಾಯಾಲಯ ಶನಿವಾರ ಏಕಪಕ್ಷೀಯ ಮಧ್ಯಂತರ ಮಧ್ಯಂತರ ಆದೇಶವ ಹೊರಡಿಸಿದೆ [ಅದಾನಿ ಎಂಟರ್ಪ್ರೈಸಸ್ ಮತ್ತು ಪರಂಜಯ್ ಗುಹಾ ಠಾಕೂರ್ತಾ ಇನ್ನಿತರರ ನಡುವಣ ಪ್ರಕರಣ].
ರೋಹಿಣಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಅನುಜ್ ಕುಮಾರ್ ಸಿಂಗ್ ಅವರು ಆನ್‌ಲೈನ್‌ನಲ್ಲಿ ಪ್ರಸಾರವಾಗಿದ್ದ ಅವಹೇಳನಕಾರಿ ವಸ್ತುವಿಷಯವನ್ನು 5 ದಿನಗಳಲ್ಲಿ ತೆಗೆದುಹಾಕುವಂತೆ ಆದೇಶಿಸಿದರು.
ಕೆಲ ಪತ್ರಕರ್ತರು ಮತ್ತು ಹೋರಾಟಗಾರರು ಭಾರತ ವಿರೋಧಿ ಹಿತಾಸಕ್ತಿಗಳೊಂದಿಗೆ ಸೇರಿಕೊಂಡು ಕಂಪನಿ ಮತ್ತು ಬ್ರ್ಯಾಂಡ್ ಇಂಡಿಯಾ ವರ್ಚಸ್ಸಿಗೆ, ಬ್ರಾಂಡ್ ಈಕ್ವಿಟಿ ಹಾಗೂ ವಿಶ್ವಾಸಾರ್ಹತೆಗೆ ಭಾರೀ ಹಾನಿ ಉಂಟುಮಾಡಿದ್ದಾರೆ ಎಂದು ಗೌತಮ್ ಅದಾನಿಯವರ ಕಂಪನಿ ಮಾನನಷ್ಟ ಮೊಕದ್ದಮೆ ಹೂಡಿತ್ತು.
ಭಾರತ ವಿರೋಧಿ ಹಿತಾಸಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡ ಪತ್ರಕರ್ತರು ಮತ್ತು ಕಾರ್ಯಕರ್ತರು ಭಾರತದ ಮೂಲಸೌಕರ್ಯ ಮತ್ತು ಇಂಧನ ಭದ್ರತೆಗೆ ನಿರ್ಣಾಯಕ ಸಂಸ್ಥೆಯಾಗಿರುವ ಅದಾನಿ ಎಂಟರ್‌ಪ್ರೈಸಸ್‌ನ ಮೂಲಸೌಕರ್ಯ ಮತ್ತು ಇಂಧನ ಯೋಜನೆಗಳನ್ನು ನಿರಂತರವಾಗಿ ಗುರಿಯಾಗಿಸಿಕೊಂಡಿದ್ದು ಈ ಯೋಜನೆಗಳಿಗೆ ದುರುದ್ದೇಶಪೂರ್ವಕವಾಗಿ ಅಡ್ಡಿಪಡಿಸಿದ್ದಾರೆ ಎಂದು ಸಂಸ್ಥೆ ಆರೋಪಿಸಿತು.
ಪತ್ರಕರ್ತರು ಮತ್ತು ಹೋರಾಟಗಾರರ ಈ ಕ್ರಿಯೆಗಳಿಂದಾಗಿ ಆಸ್ಟ್ರೇಲಿಯಾದ ಪ್ರಮುಖ ಮೂಲಸೌಕರ್ಯ ಮತ್ತು ಇಂಧನ ಯೋಜನೆಗಳು ದೊರೆಯುವುದು ವಿಳಂಬವಾಗಿ ಹಣಕಾಸು ನಷ್ಟ ಉಂಟಾಯಿತು. ಪದೇ ಪದೆ ಎಇಎಲ್‌ನ ಜಾಗತಿಕ ವರ್ಚಸ್ಸಿಗೆ ಕಳಂಕ ತರುವ ಯತ್ನಗಳಿಂದಾಗಿ ನಿಧಿ ಸಂಗ್ರಹಿಸುವ ತನ್ನ ಸಾಮರ್ಥ್ಯಕ್ಕೆ ಅಡ್ಡಿಯುಂಟಾಗಿದ್ದು ಅಭಿವೃದ್ಧಿಯನ್ನು ವರ್ಷಗಳ ಹಿಂದಕ್ಕೆ ತಳ್ಳಿತು ಎಂದ ಅದು ಅದಾನಿ ಸಂಸ್ಥೆಗಳ ಷೇರು ಮೌಲ್ಯದಲ್ಲಿ ಶೇ 90ರಷ್ಟು ಕುಸಿತ ಉಂಟಾಗಲಿದೆ ಮತ್ತು ಸಾಲದ ಸುಳಿಯಲ್ಲಿ ಸಿಲುಕಲಿದೆ ಎಂದು ಹಿಂಡನ್ ಬರ್ಗ್ ನೀಡಿದ್ದ ವರದಿಯನ್ನು ಕೂಡ ಇದೇ ವೇಳೆ ಪ್ರಸ್ತಾಪಿಸಿತು.
ಪರಂಜಯ್ ಡಾಟ್ ಇನ್, ಅದಾನಿ ವಾಚ್ ಡಾಟ್ ಆರ್ಗ್ ಹಾಗೂ ಅದಾನಿ ಫೈಲ್ಸ್ ಡಾಟ್ ಕಾಂ ಡಾಟ್ ಎಯು ಜಾಲತಾಣಗಳಲ್ಲಿ ಪ್ರಕಟವಾದ ಲೇಖನಗಳು ಎಇಎಲ್ ಕಂಪೆನಿ ಮತ್ತು ಅದರ ಅಧ್ಯಕ್ಷ ಗೌತಮ್ ಅದಾನಿ ಅವರನ್ನು ಪದೇ ಪದೇ ಗುರಿಯಾಗಿಸಿಕೊಂಡಿವೆ ಎಂದು ದೂರಿತು.
ವಾದಗಳನ್ನು ಪರಿಗಣಿಸಿದ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ಕೋರಿ ಎಇಎಲ್ ಮಂಡಿಸಿದ್ದ ವಾದ ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ತೀರ್ಪು ನೀಡಿತು. ಆದರೂ ಸಂವಿಧಾನದ ಅಡಿಯಲ್ಲಿ ಒದಗಿಸಲಾದ ಮತ್ತು ವಿಧಿ 19 (1) (ಎ) ನಲ್ಲಿ ಪ್ರತಿಪಾದಿಸಲಾದ ವಾಕ್ ಸ್ವಾತಂತ್ರ್ಯದ ಪವಿತ್ರ ತತ್ವದ ಬಗ್ಗೆಯೂ ತನಗೆ ಅರಿವಿದೆ ಎಂದು ಅದು ಇದೇ ವೇಳೆ ತಿಳಿಸಿತು. ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಪರವಾಗಿ ಹಿರಿಯ ವಕೀಲ ಜಗದೀಪ್ ಶರ್ಮಾ ಮತ್ತವರ ತಂಡ ವಾದ ಮಂಡಿಸಿತು.