ಟೂಲ್‌ಕಿಟ್‌ ಪ್ರಕರಣ: ದಿಶಾ ರವಿಯನ್ನು ಮೂರು ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದ ದೆಹಲಿ ನ್ಯಾಯಾಲಯ

ಐದು ದಿನಗಳ ಪೊಲೀಸ್‌ ವಶದ ಅವಧಿ ಮುಗಿದ ಹಿನ್ನೆಲೆಯಲ್ಲಿ ದಿಶಾ ರವಿ ಅವರನ್ನು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಆಕಾಶ್‌ ಜೈನ್‌ ಅವರ ಮುಂದೆ ಪ್ರಸ್ತುತಪಡಿಸಲಾಯಿತು. ಈ ವೇಳೆ ಅವರು ಆದೇಶ ಹೊರಡಿಸಿದರು.
Disha Ravi
Disha Ravi

ರೈತರ ಪ್ರತಿಭಟನೆಗಳ ಕುರಿತ ಮಾಹಿತಿಯ ಟೂಲ್‌ಕಿಟ್‌ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಬಂಧಿತರಾಗಿರುವ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ಶುಕ್ರವಾರ ದೆಹಲಿ ನ್ಯಾಯಾಲಯವು ಮೂರು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ದಿಶಾ ರವಿ ಅವರ ಐದು ದಿನಗಳ ಪೊಲೀಸ್‌ ವಶದ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಅವರನ್ನು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಆಕಾಶ್‌ ಜೈನ್‌ ಅವರ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ನ್ಯಾಯಾಲಯವು ಮೇಲಿನಂತೆ ಆದೇಶ ಹೊರಡಿಸಿತು.

ವಿಚಾರಣೆಯ ಸಂದರ್ಭದಲ್ಲಿ ದಿಶಾ ಹಾರಿಕೆಯ ಉತ್ತರ ನೀಡಿದ್ದು, ಸಹ ಆರೋಪಿಗಳಾದ ಶಂತನು ಮುಲುಕ್‌ ಮತ್ತು ನಿಕಿತಾ ಜೇಕಬ್‌ ಮೇಲೆ ಆಪಾದನೆ ವರ್ಗಾಯಿಸಿದ್ದಾರೆ ಎಂದು ಹೆಚ್ಚುವರಿ ಸರ್ಕಾರಿ ಅಭಿಯೋಜಕ ಇರ್ಫಾನ್‌ ಅಹ್ಮದ್‌ ನ್ಯಾಯಾಲಯಕ್ಕೆ ವಿವರಿಸಿದರು. ಫೆಬ್ರುವರಿ 22ರಂದು ವಿಚಾರಣೆಗೆ ಹಾಜರಾಗುವಂತೆ ಶಂತನುಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಅಹ್ಮದ್‌ ತಿಳಿಸಿದರು.

Also Read
ದಿಶಾ ಪ್ರಕರಣ: ತನಿಖೆಗೆ ಅಡ್ಡಿಯಾಗದಂತೆ ಸಂಪಾದಕೀಯ ನಿಯಂತ್ರಣ ಸಾಧಿಸಲು ಚಾನೆಲ್‌ ಸಂಪಾದಕರಿಗೆ ದೆಹಲಿ ಹೈಕೋರ್ಟ್‌ ಸೂಚನೆ

ಕಾನೂನಿನ ಪ್ರಕಾರ ಪ್ರಕರಣದ ಡೈರಿಯನ್ನು ಸೂಕ್ತ ರೀತಿಯಲ್ಲಿ ಸಲ್ಲಿಸಲಾಗಿಲ್ಲ. ಇದರಿಂದ ಅದನ್ನು ತಿರುಚುವ ಆತಂಕವನ್ನು ದಿಶಾ ಪರ ವಕೀಲ ಸಿದ್ಧಾರ್ಥ್‌ ಅಗರ್ವಾಲ್‌ ವ್ಯಕ್ತಪಡಿಸಿದ್ದು, ಅವರನ್ನು ಬಿಡುಗಡೆ ಮಾಡುವಂತೆ ಕೋರಿದರು. ಪ್ರಕರಣದ ಡೈರಿಯನ್ನು ಪುಟಗಳಾಗಿ ವಿಂಗಡಿಸದೆ, ಅಧಿಕ ಪ್ರಮಾಣದಲ್ಲಿ ನೀಡಲಾಗಿದೆ. ಡೈರಿಯ ನಿರ್ವಹಣೆಯ ಅಸಮರ್ಪಕತೆಯ ಕಾರಣಕ್ಕಾಗಿಯೇ ನನ್ನನ್ನು ಬಿಡುಗಡೆಗೊಳಿಸಬೇಕಾಗುತ್ತದೆ ಎಂದರು.

“ಡೈರಿ ಒದಗಿಸುವ ವಿಧಾನಕ್ಕೆ ನಾನು ಆಕ್ಷೇಪ ವ್ಯಕ್ತಪಡಿಸಿದ್ದೇನೆ. ಇದು ಕಾನೂನಿನ ಪ್ರಕಾರ ನಿರ್ವಹಿಸಿದ ಪ್ರಕರಣದ ಡೈರಿಯಲ್ಲ. ಈ ನೆಲೆಯಲ್ಲಿ ನನ್ನನ್ನು ಬಿಡುಗಡೆ ಮಾಡಬೇಕು” ಎಂದು ಕೋರಿದ್ದಾರೆ. ಇದೇ ವೇಳೆ ಸೆಷನ್ಸ್‌ ನ್ಯಾಯಾಲಯದಲ್ಲಿ ದಿಶಾ ರವಿ ಅವರ ಜಾಮೀನು ಅರ್ಜಿಯ ವಿಚಾರಣೆ ನಾಳೆ ನಡೆಯಲಿದೆ ಎನ್ನುವ ಮಾಹಿತಿಯನ್ನು ಸರ್ಕಾರಿ ಅಭಿಯೋಜಕ ಇರ್ಫಾನ್‌ ಅಹ್ಮದ್‌ ನ್ಯಾಯಾಲಯಕ್ಕೆ ನೀಡಿದರು. ವಿಡಿಯೋ ಕಾನ್ಫರೆನ್ಸ್‌ ಮೂಲಕ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಅವರು ವಿಚಾರಣೆಯಲ್ಲಿ ಭಾಗವಹಿಸಿದ್ದರು.

Related Stories

No stories found.
Kannada Bar & Bench
kannada.barandbench.com