ಆಮ್ಲಜನಕ ಸಾಂದ್ರಕ ಅಕ್ರಮ ಮಾರಾಟ: ಉದ್ಯಮಿ ನವನೀತ್ ಕಲ್ರಾರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ದೆಹಲಿ ನ್ಯಾಯಾಲಯ

ಸಾಕೇತ್ ನ್ಯಾಯಾಲಯದ ಮೆಟ್ರೊಪಾಲಿಟನ್ ನ್ಯಾಯಾಧೀಶೆ ಆಕಾಂಕ್ಷಾ ಗಾರ್ಗ್‌ ಅವರು ಕಲ್ರಾರನ್ನು ಪೊಲೀಸ್ ವಶಕ್ಕೆ ಒಪ್ಪಿಸಲು ನಿರಾಕರಿಸಿದರು.
Navneet Kalra
Navneet Kalra

ಆಮ್ಲಜನಕ ಸಾಂದ್ರಕ ಅಕ್ರಮ ಮಾರಾಟ ಪ್ರಕರಣದಲ್ಲಿ ಉದ್ಯಮಿ ನವನೀತ್ ಕಲ್ರಾ ಅವರನ್ನು ದೆಹಲಿಯ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಕಲ್ರಾ ಅವರನ್ನು ಪೊಲೀಸ್‌ ವಶಕ್ಕೆ ಒಪ್ಪಿಸಲು ಸಾಕೇತ್‌ ನ್ಯಾಯಾಲಯದ ಮೆಟ್ರೊಪಾಲಿಟನ್‌ ನ್ಯಾಯಾಧೀಶೆ ಆಕಾಂಕ್ಷಾ ಗರ್ಗ್‌ ನಿರಾಕರಿಸಿದ್ದಾರೆ.

ಆರೋಪಿಯನ್ನು ಪೊಲೀಸ್‌ ವಶದಲ್ಲಿಟ್ಟುಕೊಳ್ಳುವ ಮೂಲಕ ತನಿಖಾ ಸಂಸ್ಥೆ ಏನನ್ನು ಸಾಧಿಸಬೇಕೋ ಅದನ್ನು ಈಗಾಗಲೇ ಗಣನೀಯವಾಗಿ ಸಾಧಿಸಿದೆ. ಪೊಲೀಸ್‌ ವಶ ವಿಸ್ತರಿಸುವುದರಿಂದ ಯಾವುದೇ ಫಲಪ್ರದ ಉದ್ದೇಶ ಈಡೇರಿಸಿದಂತಾಗದು. ಅಲ್ಲದೆ ಕಲ್ರಾ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರೂ ಅಥವಾ ಅವರಿಗೆ ಜಾಮೀನು ನೀಡಿದರೂ ಅವರ ವಿಚಾರಣೆ ನಡೆಸಲು ತನಿಖಾ ಸಂಸ್ಥೆಗೆ ಯಾವುದೇ ಅಡೆತಡೆ ಇರುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Also Read
ಆಮ್ಲಜನಕ ಸಾಂದ್ರಕ ಅಕ್ರಮ ದಾಸ್ತಾನು ಪ್ರಕರಣ: ಉದ್ಯಮಿ ನವನೀತ್ ಕಲ್ರಾ ಬಂಧನ

ಹೆಚ್ಚುವರಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅತುಲ್ ಶ್ರೀವಾಸ್ತವ ಅವರು ಕಲ್ರಾ ಅವರನ್ನು ಇನ್ನೂ ಐದು ದಿನಗಳ ಕಾಲ ಪೊಲೀಸ್‌ ವಶಕ್ಕೆ ಒಪ್ಪಿಸಬೇಕೆಂದು ಕೋರಿದ್ದರು. ಹಿರಿಯ ವಕೀಲ ವಿಕಾಸ್‌ ಪಹ್ವಾ “ಕಲ್ರಾ ಅವರು ಪೊಲೀಸ್‌ ವಶಕ್ಕೆ ಒಪ್ಪಿಸುವುದನ್ನು ಬಲವಾಗಿ ವಿರೋಧಿಸಿದರು. ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಗಳು ಲ್ಯಾಪ್‌ಟಾಪ್‌ನಲ್ಲಿ ಲಭ್ಯವಿದ್ದು ಕಲ್ರಾ ಅವರ ಉಪಸ್ಥಿತಿ ಅಗತ್ಯ ವಿರುವುದಿಲ್ಲ ಎಂದರು.

ಇದೇ ವೇಳೆ ಮತ್ತೊಬ್ಬ ವಕೀಲ ವಿನೀತ್‌ ಮೆಹ್ತಾ ಅವರು “ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರು ಕೂಡ ಅಂತಹ 500 ಆಮ್ಲಜನಕ ಸಾಧನಗಳನ್ನು ಆಮದು ಮಾಡಿಕೊಂಡಿದ್ದಾರೆ ಎಂದರು. ಆಗ ಅತುಲ್‌ ಶ್ರೀವಾಸ್ತವ ಮಧ್ಯಪ್ರವೇಶಿಸಿ “ಸಲ್ಮಾನ್‌ ಖಾನ್‌ ಅವರು ಆಮ್ಲಜನಕ ಸಾಂದ್ರಕಗಳನ್ನು ಆಮದು ಮಾಡಿಕೊಂಡಿರುವುದು ದಾನ ಮಾಡಲು, ಮಾರಾಟಕ್ಕಾಗಿ ಅಲ್ಲ” ಎಂದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ರಾ ಅವರು ಜಾಮೀನು ಅರ್ಜಿ ಕೂಡ ಸಲ್ಲಿಸಿದ್ದು ಈ ಮನವಿಯ ವಿಚಾರಣೆ ಶನಿವಾರ (ಮೇ 22) ನಡೆಯಲಿದೆ.

ಉದ್ಯಮಿ ಕಲ್ರಾ ಒಡೆತನದ ದೆಹಲಿಯ ಖಾನ್‌ ಚಾಚಾ ಮತ್ತಿತರ ರೆಸ್ಟೋರೆಂಟ್‌ಗಳಲ್ಲಿ ಆಮ್ಲಜನಕ ಸಾಂದ್ರಕಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಪೊಲೀಸರು ಭಾನುವಾರ ಸಂಜೆ ಬಂಧಿಸಿದ್ದರು. ಗುರುಗ್ರಾಮದ ತಮ್ಮ ಭಾವಮೈದುನನ ತೋಟದ ಮನೆಯಿಂದ ಕಲ್ರಾ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ನ್ಯಾಯಾಲಯ ಉದ್ಯಮಿಯನ್ನು ಮೂರು ದಿನಗಳ ಕಾಲ ಪೊಲೀಸ್‌ ವಶಕ್ಕೆ ಒಪ್ಪಿಸಿತ್ತು. ಕಲ್ರಾ ಅವರಿಗೆ ಯಾವುದೇ ಮಧ್ಯಂತರ ಪರಿಹಾರ ಒದಗಿಸಲು ದೆಹಲಿ ಹೈಕೋರ್ಟ್‌ ನಿರಾಕರಿಸಿದ ನಂತರ ಅವರ ಬಂಧನಕ್ಕೆ ದೆಹಲಿ ಪೊಲೀಸರು ಮುಂದಾಗಿದ್ದರು. ಕಲ್ರಾ ಅವರನ್ನು ಜೂನ್ 3 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದೆ.

Related Stories

No stories found.
Kannada Bar & Bench
kannada.barandbench.com