ಲಾಲು, ಕುಟುಂಬದ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣ: ನಿತ್ಯ ವಿಚಾರಣೆ ನಡೆಸಲಿರುವ ದೆಹಲಿ ನ್ಯಾಯಾಲಯ

ಅಕ್ಟೋಬರ್ 13ರಿಂದ ವಿಚಾರಣೆ ಆರಂಭವಾಗಲಿದೆ ಎಂದು ನ್ಯಾಯಾಧೀಶ ವಿಶಾಲ್ ಗೋಗ್ನೆ ಹೇಳಿದರು.
Lalu Prasad Yadav and Family
Lalu Prasad Yadav and Family
Published on

ಉದ್ಯೋಗಕ್ಕಾಗಿ ಜಮೀನು ಪಡೆದ ಹಗರಣಕ್ಕೆ ಸಂಬಂಧಿಸಿದಂತೆ ಲಾಲು ಪ್ರಸಾದ್ ಯಾದವ್, ಅವರ ಪುತ್ರರಾದ ತೇಜಸ್ವಿ ಯಾದವ್, ತೇಜ್ ಪ್ರತಾಪ್ ಯಾದವ್, ಪತ್ನಿ ರಾಬ್ಡಿ ದೇವಿ, ಪುತ್ರಿಯರಾದ ಮಿಸಾ ಭಾರತಿ ಹಾಗೂ ಹೇಮಾ ಯಾದವ್ ಸೇರಿದಂತೆ ಅವರ ಕುಟುಂಬದ ಹಲವುಸದಸ್ಯರ ವಿರುದ್ಧ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ನಿತ್ಯ ವಿಚಾರಣೆ ನಡೆಸುವುದಾಗಿ ದೆಹಲಿ ನ್ಯಾಯಾಲಯ ಕಳೆದ ವಾರ ಹೇಳಿದೆ.

ಸೆಪ್ಟೆಂಬರ್ 20ರಂದು ಹೊರಡಿಸಿದ ಆದೇಶದಲ್ಲಿ, ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೋಗ್ನೆ, ಆರೋಪಿಗಳಿಗೆ ಪ್ರಕರಣದ ದಾಖಲೆಗಳ ಪ್ರತಿಗಳನ್ನು ನೀಡುವ ವಿಚಾರವಾಗಿ ಪ್ರತಿದಿನ ವಿಚಾರಣೆ ನಡೆಸುವುದಾಗಿ ಹೇಳಿದರು.

Also Read
ಉದ್ಯೋಗಕ್ಕಾಗಿ ಭೂಮಿ ಹಗರಣ: ವಿಚಾರಣೆ ಮುಂದೂಡುವಂತೆ ಲಾಲು ಮಾಡಿದ್ದ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ವಿಚಾರಣೆ ಅಕ್ಟೋಬರ್ 13ರಿಂದ ಆರಂಭವಾಗಲಿದೆ.

"ಮುಂದಿನ ವಿಚಾರಣಾ ದಿನದಿಂದ, ಸಿಆರ್ ಪಿಸಿ ಸೆಕ್ಷನ್ 207ಕ್ಕೆ ಸಂಬಂಧಿಸಿದಂತೆ ಆರೋಪಿಗಳು ಎತ್ತಿರುವ ಯಾವುದೇ ಆತಂಕ ಅಥವಾ ಆಕ್ಷೇಪಣೆಗಳನ್ನು ಪರಿಹರಿಸಲು ಪ್ರಕರಣವನ್ನು ನಿತ್ಯದ ಆಧಾರದ ಮೇಲೆ ಕೈಗೆತ್ತಿಕೊಳ್ಳಲಾಗುತ್ತದೆ. ಒದಗಿಸಲಾದ ದಾಖಲೆಗಳ ಸ್ಪಷ್ಟ ಪ್ರತಿ ಪೂರೈಸದಿರುವ ಬಗ್ಗೆ ಆರೋಪಿಗಳ ಯಾವುದೇ ಸಂಭಾವ್ಯ ದೂರುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವುದಕ್ಕಾಗಿ, ಇ ಡಿ‌ ಪರ ವಕೀಲರು ಮತ್ತು ಆರೋಪಿಗಳ ಪರ ವಕೀಲರು, ತನಿಖಾಧಿಕಾರಿ ಜೊತೆಗೆ, ನ್ಯಾಯಾಲಯದ ಅಧಿಕಾರಿಗಳು (ಅಹಲ್ಮದ್‌) ಅವರ ಸಮ್ಮುಖದಲ್ಲಿ ಮೂಲ ನ್ಯಾಯಾಲಯದ ದಾಖಲೆ ಪರಿಶೀಲಿಸಲು ಸ್ವಾತಂತ್ರ್ಯ ಹೊಂದಿರುತ್ತಾರೆ" ಎಂದು ನ್ಯಾಯಾಲಯ ಹೇಳಿದೆ.

ಜಾರಿ ನಿರ್ದೇಶನಾಲಯ (ಇ ಡಿ) ಸಲ್ಲಿಸಿದ ಎರಡನೇ ಆರೋಪಪಟ್ಟಿಗೆ ಸಂಬಂಧಿಸಿದಂತೆ ಸಮನ್ಸ್ ಜಾರಿ ಮಾಡುವಾಗ ನ್ಯಾಯಾಧೀಶ ಗೋಗ್ನೆ ಆದೇಶ ಹೊರಡಿಸಿದ್ದು, ಪ್ರಕರಣದಲ್ಲಿ ಇನ್ನೂ ಏಳು ಜನರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.

ಇ ಡಿ ಪ್ರಕಾರ, 2004 ಮತ್ತು 2009ರ ನಡುವೆ ಲಾಲು ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ, ಭಾರತೀಯ ರೈಲ್ವೆಯಲ್ಲಿ ಗ್ರೂಪ್ ಡಿ ಉದ್ಯೋಗಗಳಿಗೆ ಆಯ್ಕೆಯಾದ ಜನರು ಉದ್ಯೋಗ ಪಡೆದದ್ದಕ್ಕೆ ಪ್ರತಿಯಾಗಿ ಲಾಲೂ ಅವರ ಕುಟುಂಬದ ಸದಸ್ಯರಿಗೆ ಅಥವಾ ಸಂಬಂಧಿತ ಸಂಸ್ಥೆಗಳಿಗೆ ಭೂಮಿ ನೀಡುವಂತೆ ಸೂಚಿಸಲಾಗಿತ್ತು.

Also Read
ಉದ್ಯೋಗಕ್ಕಾಗಿ ಭೂಮಿ ಹಗರಣ: ವಿಚಾರಣೆಗೆ ತಡೆ ನೀಡಲು ಕೋರಿದ್ದ ಲಾಲು ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

ಪಾಟ್ನಾ, ದೆಹಲಿ ಹಾಗೂ ಗಾಜಿಯಾಬಾದ್‌ನಲ್ಲಿ ಅನೇಕ ಜಮೀನನ್ನು ಭಾರೀ ರಿಯಾಯಿತಿ ಅಥವಾ ನಾಮಮಾತ್ರ ದರದಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ತನಿಖಾ ಸಂಸ್ಥೆ ಹೇಳಿಕೊಂಡಿತ್ತು.

ಇ ಡಿ ಪ್ರಕಾರ, ಈ ಜಮೀನುಗಳನ್ನು ನಂತರ ರಾಬ್ಡಿ ದೇವಿ, ಮಿಸಾ ಭಾರತಿ, ಹೇಮಾ ಯಾದವ್, ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ ಸೇರಿದಂತೆ ಯಾದವ್ ಕುಟುಂಬದ ವಿವಿಧ ಸದಸ್ಯರ ಕೈಗೆ ಬಂದಿದ್ದು ಅದು ಅಪರಾಧದ ಗಳಿಕೆಗೆ ಸಮಾನವಾಗಿದೆ ಎಂದಿತ್ತು.

Kannada Bar & Bench
kannada.barandbench.com