ನ್ಯಾಯಾಂಗ ಬಂಧನದಲ್ಲಿರುವ ಕವಿತಾ ವಿಚಾರಣೆ ನಡೆಸಲು ಸಿಬಿಐಗೆ ಅನುಮತಿಸಿದ ನ್ಯಾಯಾಲಯ
K Kavitha and CBIK Kavitha (FB)

ನ್ಯಾಯಾಂಗ ಬಂಧನದಲ್ಲಿರುವ ಕವಿತಾ ವಿಚಾರಣೆ ನಡೆಸಲು ಸಿಬಿಐಗೆ ಅನುಮತಿಸಿದ ನ್ಯಾಯಾಲಯ

ಕವಿತಾ ಅವರು ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತು ಪ್ರಕರಣದ ಮುಂದಿನ ತನಿಖೆ ವೇಳೆ ಸಾಕ್ಷ್ಯಾಧಾರಗಳನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ಮನವಿ ಮಾಡಿತು.

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ವಿಚಾರಣೆ ನಡೆಸಲು ಕೋರಿದ್ದ ಕೇಂದ್ರೀಯ ತನಿಖಾ ದಳದ (ಸಿಬಿಐ) ಮನವಿಯನ್ನು ದೆಹಲಿ ನ್ಯಾಯಾಲಯ ಶುಕ್ರವಾರ ಪುರಸ್ಕರಿಸಿದೆ.

ಕವಿತಾ ಅವರನ್ನು ನ್ಯಾಯಾಂಗ ಬಂಧನದ ವೇಳೆ ಪ್ರಶ್ನಿಸಲು ಅನುಮತಿ ನೀಡುವಂತೆ ಕೋರಿ ಸಿಬಿಐ ಸಲ್ಲಿಸಿದ ಮನವಿಗೆ ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ಸಂಕೀರ್ಣದಲ್ಲಿರುವ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಸಮ್ಮತಿಸಿದರು.

ಕವಿತಾ ಅವರು ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತು ಪ್ರಕರಣದ ಮುಂದಿನ ತನಿಖೆ ವೇಳೆ ಸಾಕ್ಷ್ಯಾಧಾರಗಳನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ಮನವಿ ಮಾಡಿತು.

ಆಮ್ ಆದ್ಮಿ ಪಕ್ಷಕ್ಕೆ (ಎಪಿಪಿ) ಕಿಕ್‌ಬ್ಯಾಕ್ ರೂಪದಲ್ಲಿ ₹ 100 ಕೋಟಿ ಲಂಚ ನೀಡಲಾಗಿದೆ ಎಂದು ಕವಿತಾ ಅವರ ಅಕೌಂಟೆಂಟ್ ಬುಚ್ಚಿ ಬಾಬು ಅವರು ಪೋನ್‌ನಲ್ಲಿ ಹರಿದಾಡಿರುವ ಸಂದೇಶಗಳು ಮತ್ತು ಭೂ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳ ಕುರಿತು ಕವಿತಾ ಅವರ ವಿಚಾರಣೆ ನಡೆಸಬೇಕಾಗಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿರುವ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ ಡಿ) ಕವಿತಾ ಅವರನ್ನು ಬಂಧಿಸಿತ್ತು. ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಮತ್ತೊಂದೆಡೆ ಇ ಡಿ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕವಿತಾ ಅವರು ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯ ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿದ್ದು, ಏಪ್ರಿಲ್ 8ರಂದು ಪ್ರಕರಣದ ತೀರ್ಪು ಹೊರಬೀಳುವ ಸಾಧ್ಯತೆಯಿದೆ.

Related Stories

No stories found.
Kannada Bar & Bench
kannada.barandbench.com