ಬಿಆರ್‌ಎಸ್‌ ನಾಯಕಿ ಕವಿತಾ ಏಪ್ರಿಲ್ 9ರವರೆಗೆ ನ್ಯಾಯಾಂಗ ಬಂಧನಕ್ಕೆ: ದೆಹಲಿ ನ್ಯಾಯಾಲಯದ ಆದೇಶ

ತೆಲಂಗಾಣದಲ್ಲಿ ನೆಲೆ ಕಂಡುಕೊಳ್ಳುವ ಸಲುವಾಗಿ ಜಾರಿ ನಿರ್ದೇಶನಾಲಯವನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಬಿಆರ್‌ಎಸ್‌ ನಾಯಕಿ ದೂರಿದ್ದಾರೆ.
 ಕೆ ಕವಿತಾ ಮತ್ತು ಇ ಡಿ
ಕೆ ಕವಿತಾ ಮತ್ತು ಇ ಡಿ ಕೆ ಕವಿತಾ (ಫೇಸ್‌ಬುಕ್‌)

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ನಾಯಕಿ ಕೆ ಕವಿತಾ ಅವರನ್ನು ದೆಹಲಿಯ ವಿಶೇಷ ನ್ಯಾಯಾಲಯವು ಏಪ್ರಿಲ್ 9ರವರೆಗೆ ನ್ಯಾಯಾಂಗ ಬಂಧನದಲ್ಲಿರಿಸಿದೆ.

ಕವಿತಾ ಅವರನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಜಾರಿ ನಿರ್ದೇಶನಾಲಯ (ಇ ಡಿ) ಕೋರಿತು. ರೌಸ್ ಅವೆನ್ಯೂ ನ್ಯಾಯಾಲಯ ಸಂಕೀರ್ಣದಲ್ಲಿರುವ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಕಾವೇರಿ ಬವೇಜಾ ಮಂಗಳವಾರ ಈ ಆದೇಶ ಹೊರಡಿಸಿದ್ದಾರೆ.

ಕವಿತಾ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದು, ಅವರನ್ನು ಬಿಡುಗಡೆ ಮಾಡಿದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಮತ್ತು ಸಾಕ್ಷ್ಯ ತಿರುಚುವ ಎಲ್ಲಾ ಸಾಧ್ಯತೆಗಳಿವೆ ಎಂದು ಇ ಡಿ ವಾದಿಸಿತು.

ಅಬಕಾರಿ ನೀತಿ ಪ್ರಕರಣದಲ್ಲಿ ಕವಿತಾ ಅವರ ಪಾತ್ರದ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದ್ದು ಇ ಡಿ ಅಪರಾಧದ ತನಿಖೆ ಮುಂದುವರೆಸಿದ್ದು ಹಗರಣಕ್ಕೆ ಸಂಬಂಧಿಸಿದ ಉಳಿದ ವ್ಯಕ್ತಿಗಳನ್ನು ಪತ್ತೆ ಹಚ್ಚುತ್ತಿದೆ. ಅಗತ್ಯವಿದ್ದರೆ ಹೆಚ್ಚಿನ ವಿಚಾರಣೆಗಾಗಿ ಕವಿತಾ ಅವರನ್ನು ತನ್ನ ವಶಕ್ಕೆ ನೀಡುವಂತೆ ಕೋರುವುದಾಗಿ ಇ ಡಿ ಈ ಸಂದರ್ಭದಲ್ಲಿ ಹೇಳಿತು.

ತೆಲಂಗಾಣದಲ್ಲಿ ನೆಲೆ ಪಡೆಯುವುದಕ್ಕಾಗಿ ಇ ಡಿಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಬಿಆರ್‌ಎಸ್‌ ನಾಯಕಿ ದೂರಿದ್ದಾರೆ.

ಮಾರ್ಚ್ 15ರ ಸಂಜೆ ಹೈದರಾಬಾದ್‌ನ ಕವಿತಾ ಅವರ ನಿವಾಸದಲ್ಲಿ ಶೋಧ ನಡೆಸಿದ್ದ ಇ ಡಿ ತಂಡ ಅದಾದ ಕೆಲವೇ ಗಂಟೆಗಳಲ್ಲಿ ಅವರನ್ನು ಬಂಧಿಸಿತ್ತು. ರೌಸ್‌ ಅವೆನ್ಯೂ ನ್ಯಾಯಾಲಯ ಮಾರ್ಚ್ 16 ರಂದು ಅವರನ್ನು ಇ ಡಿ ವಶಕ್ಕೆ ನೀಡಿತ್ತು. ನಿನ್ನೆ, ಸುಪ್ರೀಂ ಕೋರ್ಟ್ ಅವರಿಗೆ ತುರ್ತು ಪರಿಹಾರ ಒದಗಿಸಲು ನಿರಾಕರಿಸಿತ್ತು. ಜಾಮೀನಿಗಾಗಿ ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಲು ಸೂಚಿಸಿತ್ತು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಎಎಪಿ ಸಂಸದ ಸಂಜಯ್ ಸಿಂಗ್ ಮತ್ತು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೆರೆವಾಸ ಅನುಭವಿಸುತ್ತಿದ್ದಾರೆ.

Related Stories

No stories found.
Kannada Bar & Bench
kannada.barandbench.com