ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಕಪಿಲ್ ಸಿಬಲ್ ವಿರುದ್ಧದ ಪ್ರಕರಣ ವರ್ಗಾವಣೆ: ದೆಹಲಿ ಹೈಕೋರ್ಟ್‌ನಿಂದ ನೋಟಿಸ್ ಜಾರಿ

ಕಳೆದ ವರ್ಷ ಕಪಿಲ್ ಸಿಬಲ್, ಪ್ರಮೀಳಾ ಸಿಬಲ್ ಮತ್ತು ಅವರ ಟಿವಿ ನೆಟ್‌ವರ್ಕ್ ಕಂಪೆನಿಯ ವಿರುದ್ಧ ಐಪಿಸಿ ಸೆಕ್ಷನ್ 420 ಮತ್ತು 120B ಅಡಿ ಹಿರಿಯ ಪತ್ರಕರ್ತೆ ಬರ್ಖಾ ದತ್‌ ದೂರು ದಾಖಲಿಸಿದ್ದರು.
Kapil Sibal and Barkha Dutt
Kapil Sibal and Barkha Dutt

ಕಾಂಗ್ರೆಸ್ ಮುಖಂಡ, ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ವಕೀಲ ಕಪಿಲ್ ಸಿಬಲ್ ವಿರುದ್ಧ ಹಿರಿಯ ಪತ್ರಕರ್ತೆ ಬರ್ಖಾ ದತ್ ದಾಖಲಿಸಿರುವ ಕ್ರಿಮಿನಲ್ ಪ್ರಕರಣವನ್ನು ಸಂಸದರು/ಶಾಸಕರ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ (ಬರ್ಖಾ ದತ್ ವರ್ಸಸ್ ಅನಲಾಗ್ ಮೀಡಿಯಾ).

ಪಟಿಯಾಲ ಹೌಸ್ ಕೋರ್ಟ್‌ನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಕಚೇರಿ ಟಿಪ್ಪಣಿ ಕಳುಹಿಸಿದ ಬಳಿಕ ನ್ಯಾಯಮೂರ್ತಿ ಅನೂಪ್ ಜೆ ಭಂಭಾನಿ ನೇತೃತ್ವದ ಏಕಸದಸ್ಯ ಪೀಠವು ಪ್ರಕರಣದ ವರ್ಗಾವಣೆ ಮನವಿಗೆ ಸಂಬಂಧಿಸಿದಂತೆ ಬರ್ಖಾ ದತ್‌ಗೆ ನೋಟಿಸ್ ಜಾರಿಗೊಳಿಸಿದೆ. ನವೆಂಬರ್ 2ಕ್ಕೆ ವಿಚಾರಣೆ ನಡೆಯಲಿದೆ.

ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 420 ಮತ್ತು 120B ಅಡಿ ಕಪಿಲ್ ಸಿಬಲ್, ಪ್ರಮೀಳಾ ಸಿಬಲ್ ಮತ್ತು ಅವರ ಟಿವಿ ನೆಟ್‌ವರ್ಕ್ ಕಂಪೆನಿ ಅನಲಾಗ್ ಮೀಡಿಯಾ ವಿರುದ್ಧ ಕಳೆದ ವರ್ಷ ಬರ್ಖಾ ದತ್ ದೂರು ದಾಖಲಿಸಿದ್ದರು.

ಅನಲಾಗ್ ಮೀಡಿಯಾದ ಸುದ್ದಿ ವಾಹಿನಿಯಾದ ತಿರಂಗಾ ಟಿವಿಯನ್ನು ಅಕಾಲಿಕವಾಗಿ ಮುಚ್ಚಿದ್ದರಿಂದ ಬರ್ಖಾ ದೂರು ದಾಖಲಿಸಿದ್ದರು.

ಸಲಹೆಗಾರ ಸಂಪಾದಕಿ ಮತ್ತು ನಿರೂಪಕಿಯಾಗಿ ನೇಮಕಗೊಂಡಿದ್ದ ಬರ್ಖಾ ದತ್ ಅವರು “ಖಂಡಿತವಾಗಿಯೂ ಚಾನೆಲ್ ಅನ್ನು ವೃತ್ತಿಪರ ಸಂಸ್ಥೆಯಾಗಿ ಮುನ್ನಡೆಸುವ ಯಾವುದೇ ಉದ್ದೇಶವಿರಲಿಲ್ಲ” ಎಂದಿದ್ದರು.

2019ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚಾನೆಲ್ ಅನ್ನು ಕಾಂಗ್ರೆಸ್‌ನ ಪ್ರಚಾರ ಯಂತ್ರದ ಭಾಗವಾಗಿಸುವ ಗುರಿಯನ್ನು ಹೊಂದಲಾಗಿತ್ತು ಎಂದು ಬರ್ಖಾ ಆರೋಪಿಸಿದ್ದರು.

“ಸದರಿ ಉದ್ದೇಶ ವಿಫಲವಾದ ಹಿನ್ನೆಲೆಯಲ್ಲಿ ದೂರುದಾರರು ಸೇರಿದಂತೆ ಉದ್ಯೋಗಿಗಳನ್ನು ನೀಡಿದ್ದ ಭರವಸೆಗೆ ವಿರುದ್ಧವಾಗಿ ವ್ಯವಸ್ಥಿತವಾಗಿ ಹೊರದಬ್ಬಲಾಯಿತು" ಎಂದು ಹೇಳಿದ್ದರು.

2019ರ ಲೋಕಸಭಾ ಚುನಾವಣೆಯ ಬಳಿಕವೂ ಚಾನೆಲ್ ಮುನ್ನಡೆಸುವ ಕುರಿತು ನೀಡಲಾಗಿದ್ದ ಭರವಸೆ ಹಾಗೂ ಒಪ್ಪಂದ ಕಟ್ಟುಪಾಡುಗಳನ್ನು ಉಲ್ಲಂಘಿಸಿಲಾಗಿದೆ ಎಂದು ಬರ್ಖಾ ದತ್‌ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ. ಪಟಿಯಾಲ ಹೌಸ್ ಕೋರ್ಟ್‌ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎದುರು ದೂರು ದಾಖಲಿಸಲಾಗಿತ್ತು. ಸದರಿ ಪ್ರಕರಣವನ್ನು ಸಕ್ಷಮ ನ್ಯಾಯಾಲಯವಾದ ರೋಸ್ ಅವೆನ್ಯೂನಲ್ಲಿರುವ ಸಂಸದರು/ಶಾಸಕರ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು.

Also Read
“ನಾನು ಬಿರುನುಡಿದರೆ ಅದರ ಹಿಂದೆ ಯಾವುದೇ ಉದ್ದೇಶ ಇರುವುದಿಲ್ಲ”: ನ್ಯಾ.ಅರುಣ್ ಮಿಶ್ರಾ ಅವರ ವಿವಾದಾತ್ಮಕ ಹೇಳಿಕೆಗಳು

ಇದಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸುವಂತೆ ದೆಹಲಿ ಹೈಕೋರ್ಟ್‌ಗೆ ಪಟಿಯಾಲ ಹೌಸ್ ಕೋರ್ಟ್‌ನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಕಚೇರಿ ಟಿಪ್ಪಣಿ ರವಾನಿಸಿದ್ದರು. ಸಂಸದರು/ಶಾಸಕರ ವಿಶೇಷ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆ ವಿಚಾರವು ಅಂತರ ಸೆಷನ್ಸ್ ವಿಭಾಗೀಯ ವರ್ಗಾವಣೆಯಾಗಿದ್ದು, ಇದನ್ನು ಹೈಕೋರ್ಟ್ ಮಾತ್ರ ಮಾಡಲು ಸಾಧ್ಯ ಎಂದು ಪಟಿಯಾಲ ಹೌಸ್ ಕೋರ್ಟ್‌ನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹೇಳಿದ್ದರು.

ಪ್ರಕರಣವು ಸಮನ್ಸ್‌ ಪೂರ್ವ ಹಂತದಲ್ಲಿದ್ದು, ವಕೀಲರಾದ ರಾಘವ್ ಅವಸ್ಥಿ ಮತ್ತು ಮುಖೇಶ್ ಶರ್ಮಾ ಅರ್ಜಿದಾರರನ್ನು ಪ್ರತಿನಿಧಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com