

ತಮ್ಮ ವ್ಯಕ್ತಿತ್ವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ದೂರಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ಟಾಲಿವುಡ್ ನಟ ಪವನ್ ಕಲ್ಯಾಣ್ ಸಲ್ಲಿಸಿದ್ ಅರ್ಜಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಮೆಟಾ, ಗೂಗಲ್ ಮತ್ತು ಎಕ್ಸ್‌ಗೆ ದೆಹಲಿ ಹೈಕೋರ್ಟ್ ಶುಕ್ರವಾರ ಸೂಚಿಸಿದೆ.
ಪವನ್ ಕಲ್ಯಾಣ್ ಅವರ ದೂರುಗಳನ್ನು ಒಂದು ವಾರದೊಳಗೆ ನಿರ್ಧರಿಸುವಂತೆ ನ್ಯಾಯಮೂರ್ತಿ ಮನ್‌ಮೀತ್ ಪ್ರೀತಮ್ ಸಿಂಗ್ ಅರೋರಾ ಮಧ್ಯಸ್ಥ ವೇದಿಕೆಗಳಿಗೆ ಆದೇಶಿಸಿದರು.
ಅರ್ಜಿದಾರರು ವ್ಯಕ್ತಿತ್ವ ಉಲ್ಲಂಘನೆಯ ವಿವರಗಳನ್ನು ಮಧ್ಯಸ್ಥ ವೇದಿಕೆಗಳಿಗೆ ಎರಡು ದಿನಗಳಲ್ಲಿ ಸಲ್ಲಿಸಬೇಕು. ಮಧ್ಯಸ್ಥ ಕಂಪೆನಿಗಳು ಒಂದು ವಾರದೊಳಗೆ ಕ್ರಮ ಕೈಗೊಳ್ಳಬೇಕು. ಆಕ್ಷೇಪಗಳಿದ್ದರೆ ಮಧ್ಯಸ್ಥ ವೇದಿಕೆಗಳು ಅರ್ಜಿದಾರರೊಂದಿಗೆ ಮಾತುಕತೆ ನಡೆಸಬಹುದು ಎಂದು ನ್ಯಾಯಾಲಯ ವಿವರಿಸಿದೆ. ಡಿಸೆಂಬರ್ 22 ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.
ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಇ- ವಾಣಿಜ್ಯ ಸಂಸ್ಥೆಗಳಲ್ಲಿನ ಹಲವು ಜಾಲತಾಣಗಳಲ್ಲಿ ವಿವಿಧ ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳು ತಮ್ಮ ಅನುಮತಿ ಇಲ್ಲದೆ ತಮ್ಮ ವ್ಯಕ್ತಿತ್ವದ ಅಂಶಗಳನ್ನು ವಾಣಿಜ್ಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ ಎಂದು ಪವನ್ ಆರೋಪಿಸಿದ್ದರು.
ಪವನ್ ಕಲ್ಯಾಣ್ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಜೆ ಸಾಯಿ ದೀಪಕ್, ಅಜಯ್ ದೇವಗನ್ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ಆದೇಶದಂತೆ ತಾನು ಮಧ್ಯಸ್ಥ ಕಂಪೆನಿಗಳಿಗೆ ಪತ್ರ ಬರೆದಿದ್ದರೂ ತೃಪ್ತಿದಾಯಕ ಪ್ರತಿಕ್ರಿಯೆ ಸಿಗಲಿಲ್ಲ ಮತ್ತು ಉಲ್ಲಂಘನೆಯ ಅನೇಕ ವಸ್ತುವಿಷಯಗಳು ಆನ್‌ಲೈನ್‌ನಲ್ಲಿಯೇ ಉಳಿದಿವೆ ಎಂದರು.