

ಈಸ್ಟರ್ನ್ ಬುಕ್ ಕಂಪನಿ (ಇಬಿಸಿ) ಪ್ರಕಟಿತ ಕೆಂಪು-ಕಪ್ಪು ಮುಖಪುಟ ಹೊಂದಿರುವ ಕೈಪಿಡಿ ಆವೃತ್ತಿಯಾದ "ದ ಕಾನ್‌ಸ್ಟಿಟ್ಯೂಷನ್ ಆಫ್ ಇಂಡಿಯಾ" ಪುಸ್ತಕವನ್ನು ರೂಪಾ ಪಬ್ಲಿಕೇಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಪ್ರಕಟಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಪ್ರಕರಣವನ್ನು ದೆಹಲಿ ಹೈಕೋರ್ಟ್ ಈಚೆಗೆ ಮಧ್ಯಸ್ಥಿಕೆಗೆ ವಹಿಸಿದೆ [ಇಬಿಸಿ ಪಬ್ಲಿಷಿಂಗ್ ಪ್ರೈವೇಟ್ ಲಿಮಿಟೆಡ್ ಮತ್ತು ರೂಪಾ ಪಬ್ಲಿಕೇಷನ್ಸ್ ನಡುವಣ ಪ್ರಕರಣ].
ನ್ಯಾಯಮೂರ್ತಿ ಮನ್‌ಮೀತ್ ಪ್ರೀತಮ್ ಸಿಂಗ್ ಅರೋರಾ ಅವರು ವ್ಯಾಜ್ಯವನ್ನು ದೆಹಲಿ ಹೈಕೋರ್ಟ್ ಮಧ್ಯಸ್ಥಿಕೆ ಮತ್ತು ಸಂಧಾನ ಕೇಂದ್ರಕ್ಕೆ ಉಲ್ಲೇಖಿಸಿದ್ದಾರೆ.
“ಕಕ್ಷಿದಾರರ ಒಪ್ಪಿಗೆಯೊಂದಿಗೆ ಪ್ರಕರಣವನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ವಹಿಸಲಾಗುತ್ತಿದೆ. ಪ್ರಕರಣಕ್ಕೆ ಹಿರಿಯ ಮಧ್ಯಸ್ಥಿಕೆದಾರರನ್ನು ನಿಯೋಜಿಸುವಂತೆ ಸಂಘಟನಾ ಕಾರ್ಯದರ್ಶಿಯವರನ್ನು ಕೋರಲಾಗಿದೆ. ಮಧ್ಯಸ್ಥಿಕೆ ಕೇಂದ್ರದ ಮುಂದೆ ಪ್ರಕರಣ ಪಟ್ಟಿ ಮಾಡಿ” ಎಂದು ಎಂದು ನ್ಯಾಯಾಲಯ ನವೆಂಬರ್ 6 ರಂದು ನೀಡಿರುವ ಆದೇಶದಲ್ಲಿ ತಿಳಿಸಲಾಗಿದೆ. ನವೆಂಬರ್ 20ರಂದು ಮಧ್ಯಸ್ಥಿಕೆ ಕೇಂದ್ರದ ಮುಂದೆ ಹಾಜರಾಗಲು ಕಕ್ಷಿದಾರರಿಗೆ ಸೂಚಿಸಲಾಗಿದೆ.
ಇಬಿಸಿಯ ಉತ್ಪನ್ನವು ಅನನ್ಯತೆ ಹೊಂದಿದೆ ಎಂಬ ಕಾರಣಕ್ಕೆ ಅದೇ ಮಾದರಿಯ ಸಂವಿಧಾನ ಕೈಪಿಡಿ ಆವೃತ್ತಿಯನ್ನು ರೂಪಾ ಪಬ್ಲಿಕೇಷನ್ಸ್ ಪ್ರಕಟಿಸದಂತೆ ಅಥವಾ ಮಾರಾಟ ಮಾಡದಂತೆ ಕೆಲ ದಿನಗಳ ಹಿಂದೆ ದೆಹಲಿ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿತ್ತು.
ಏಕಪಕ್ಷೀಯ ಆದೇಶ ರದ್ದುಗೊಳಿಸುವಂತೆ ಕೋರಿ ರೂಪಾ ಅರ್ಜಿ ಸಲ್ಲಿಸಿತ್ತು ಈ ಅರ್ಜಿಗೆ ಪ್ರತಿಕ್ರಿಯಿಸುವಂತೆ ಇಬಿಸಿಗೆ ನವೆಂಬರ್ 6ರಂದು ನ್ಯಾಯಾಲಯ ಸೂಚಿಸಿದೆ. ಈ ಪ್ರಕರಣದ ವಿಚಾರಣೆ ಡಿಸೆಂಬರ್ 17ರಂದು ನಡೆಯಲಿದೆ.
ತಾನು 2009ರಿಂದ ಸಂವಿಧಾನದ ಕೈಪಿಡಿ ಆವೃತ್ತಿ ಪ್ರಕಟಿಸುತ್ತಿದ್ದೇನೆ. ಇದರಲ್ಲಿ ಕೆಂಪು ಕಪ್ಪು ಬಣ್ಣದ ವಿನ್ಯಾಸ ಇದ್ದು ಅಕ್ಷರ ಶೈಲಿ, ಚಿನ್ನದ ಅಚ್ಚು ʼಬೈಬಲ್ ಕಾಗದʼ ಹಾಗೂ ನಿರ್ದಿಷ್ಟ ವಿನ್ಯಾಸ ಇದರದ್ದಾಗಿದೆ. ತನ್ನ ಪ್ರಮುಖ ಪುಸ್ತಕಗಳಲ್ಲಿ ಒಂದಾದ ಈ ಕೃತಿ ಅಪಾರ ಸಹೃದಯರನ್ನು ಗಳಿಸಿದ್ದು ವಕೀಲರು, ನ್ಯಾಯಾಧೀಶರು, ರಾಜಕಾರಣಿಗಳು ಹಾಗೂ ಸಾರ್ವಜನಿಕರು ದೊಡ್ಡಮಟ್ಟದಲ್ಲಿ ಪುಸ್ತಕ ಖರೀದಿಸಿದ್ದಾರೆ. ಆದರೆ ಆನ್‌ಲೈನ್ ಮತ್ತು ಆಫ್‌ಲೈನ್ ಚಾನೆಲ್‌ಗಳ ಮೂಲಕ ರೂಪಾ ಪಬ್ಲಿಕೇಷನ್ಸ್ ಮಾರಾಟ ಮಾಡಿದ ಪುಸ್ತಕ ತಾನು ಮುದ್ರಿಸಿದ್ದ ಮುಖಪುಟವನ್ನು ಅನುಕರಿಸಿತ್ತು ಎಂದು ಇಬಿಸಿ ದೂರಿತ್ತು.
ರೂಪಾ ಕಂಪನಿಯು ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಇತರ ಆನ್‌ಲೈನ್ ತಾಣಗಳು, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪಟ್ಟಿ ಮಾಡಲು ತನ್ನ ವಿನ್ಯಾಸ ಮತ್ತು ಪ್ರಸ್ತುತಿ ಶೈಲಿಯನ್ನು ಅನುಕರಿಸುತ್ತಿದೆ ಎಂದು ಇಬಿಸಿ ವಾದಿಸಿತ್ತು.
ತನ್ನ ಆವೃತ್ತಿ ಹಾಗೂ ಇಬಿಸಿ ಕೃತಿ ಒಂದೇ ರೀತಿಯದ್ದಾಗಿದೆ, ಆದರೆ ಅಗ್ಗದ ದರದಲ್ಲಿ ದೊರೆಯುತ್ತದೆ ಎಂಬ ರೂಪಾ ಪಬ್ಲಿಕೇಷನ್ಸ್ ಹೇಳಿಕೆಯಿಂದ ಖರೀದಿದಾರರು ಮನಸ್ಸು ಬದಲಿಸಿದ ಪರಿಣಾಮ ಇಬಿಸಿಗೆ 18,000 ಪ್ರತಿಗಳ ಮಾರಾಟ ಕೈತಪ್ಪಿತು ಎಂದು ಅದು ಅಳಲು ತೋಡಿಕೊಂಡಿತ್ತು.
ಕೆಂಪು-ಕಪ್ಪು ಮುಖಪುಟ ಹೋಲುವ ಕೈಪಿಡಿ ಆವೃತ್ತಿಯಾದ "ದ ಕಾನ್‌ಸ್ಟಿಟ್ಯೂಷನ್ ಆಫ್ ಇಂಡಿಯಾ" ಪುಸ್ತಕ ಪ್ರಕಟಿಸದಂತೆ ರೂಪಾ ಪಬ್ಲಿಕೇಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಕಳೆದ ಸೆಪ್ಟೆಂಬರ್‌ನಲ್ಲಿ ಹೈಕೋರ್ಟ್ ತಡೆ ನೀಡಿತ್ತು. ರೂಪಾ ಉತ್ಪನ್ನ ಮೇಲ್ನೋಟಕ್ಕೆ ವಂಚಿಸುವ ಹೋಲಿಕೆ ಒಳಗೊಂಡಿದ್ದು ಗ್ರಾಹಕರಲ್ಲಿ ಗೊಂದಲ ಮೂಡುವ ಸಾಧ್ಯತೆ ಇದೆ ಎಂದು ಅದು ಹೇಳಿತ್ತು.
ಗ್ರಾಹಕರಲ್ಲಿ ಗೊಂದಲ ಮೂಡುವುದರ ಜೊತೆಗೆ ಇಬಿಸಿಗೆ ಸರಿಪಡಿಸಲಾಗದಷ್ಟು ಹಾನಿ ಉಂಟಾಗುವ ಸಾಧ್ಯತೆ ಇದೆ ಎಂದ ನ್ಯಾಯಾಲಯ ರೂಪಾ ಪಬ್ಲಿಕೇಷನ್ಸ್ ಮತ್ತು ಅದರ ಸಹವರ್ತಿಗಳು ವಿವಾದಿತ ವಿನ್ಯಾಸ ಅನುಕರಿಸದಂತೆ ನಿರ್ಬಂಧಿಸಿತ್ತು. ಜೊತೆಗೆ ಇನ್ನೂ ಮಾರಾಟವಾಗದೆ ಇರುವ ಪುಸ್ತಕಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಹಾಗೂ ಇ-ವಾಣಿಜ್ಯ ತಾಣಗಳಿಂದ ಆ ಪುಸ್ತಕದ ವಿವರಗಳನ್ನು ತೆಗೆದುಹಾಕುವಂತೆ ಅದು ನಿರ್ದೇಶಿಸಿತ್ತು.
[ಆದೇಶದ ಪ್ರತಿ]