
ಈಸ್ಟರ್ನ್ ಬುಕ್ ಕಂಪನಿ (ಇಬಿಸಿ) ಪ್ರಕಟಿತ ಕೆಂಪು-ಕಪ್ಪು ಮುಖಪುಟ ಹೋಲುವ ಕೈಪಿಡಿ ಆವೃತ್ತಿಯಾದ "ದ ಕಾನ್‌ಸ್ಟಿಟ್ಯೂಷನ್ ಆಫ್ ಇಂಡಿಯಾ" ಪುಸ್ತಕ ಪ್ರಕಟಿಸದಂತೆ ರೂಪಾ ಪಬ್ಲಿಕೇಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ದೆಹಲಿ ಹೈಕೋರ್ಟ್ ಈಚೆಗೆ ನಿರ್ಬಂಧ ವಿಧಿಸಿದೆ [ಇಬಿಸಿ ಪಬ್ಲಿಷಿಂಗ್ ಪ್ರೈವೇಟ್ ಲಿಮಿಟೆಡ್ ಮತ್ತು ರೂಪಾ ಪಬ್ಲಿಕೇಷನ್ಸ್ ನಡುವಣ ಪ್ರಕರಣ].
ಇಬಿಸಿ ಸಲ್ಲಿಸಿದ್ದ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮನ್‌ಮೀತ್ ಪ್ರೀತಮ್ ಸಿಂಗ್ ಅರೋರಾ ಅವರು ಮಧ್ಯಂತರ ತಡೆಯಾಜ್ಞೆ ಹೊರಡಿಸಿದರು. ಸಂವಿಧಾನದ ಕೈಪಿಡಿ ಪುಸ್ತಕದ ಪ್ರತಿಸ್ಪರ್ಧಿ ಆವೃತ್ತಿಗಳು ಮೇಲ್ನೋಟಕ್ಕೆ ವಂಚಿಸುವ ಹೋಲಿಕೆ ಒಳಗೊಂಡಿದ್ದು ಗ್ರಾಹಕರಲ್ಲಿ ಗೊಂದಲ ಮೂಡುವ ಸಾಧ್ಯತೆ ಇದೆ ಎಂದು ಪೀಠ ಹೇಳಿದೆ.
ಸಾಮಾನ್ಯ ಬುದ್ಧಿಮತ್ತೆ ಮತ್ತು ಸ್ಮರಣಶಕ್ತಿ ಅಪೂರ್ಣವಾಗಿವ, ಅಜಾಗರೂಕ ಗ್ರಾಹಕರಿಗೆ ಪ್ರತಿವಾದಿಯ ಕೈಪಿಡಿ ಪುಸ್ತಕದ ವಾಣಿಜ್ಯ ಹೊದಿಕೆ ವಿನ್ಯಾಸ ದಾವೆದಾರರ ಕೈಪಿಡಿ ಆವೃತ್ತಿಯನ್ನೇ ಹೋಲುವ ಸಾಧ್ಯತೆ ಇದೆ. ಇಂತಹ ಸಾಮ್ಯತೆ ಪುಸ್ತಕದ ಮೂಲದ ಬಗ್ಗೆ ಗ್ರಾಹಕರನ್ನು ತಪ್ಪು ದಾರಿಗೆಳೆದು ಅವರಲ್ಲಿ ಗೊಂದಲ ಉಂಟುಮಾಡುವ ಸಾಧ್ಯತೆಯಿದೆ ಎಂದು ನ್ಯಾಯಾಲಯ ಹೇಳಿದೆ.
ತಾನು 2009ರಿಂದ ಸಂವಿಧಾನದ ಕೈಪಿಡಿ ಆವೃತ್ತಿ ಪ್ರಕಟಿಸುತ್ತಿದ್ದೇನೆ. ಇದರಲ್ಲಿ ಕೆಂಪು ಕಪ್ಪು ಬಣ್ಣದ ವಿನ್ಯಾಸ ಇದ್ದು ಅಕ್ಷರ ಶೈಲಿ, ಚಿನ್ನದ ಅಚ್ಚು ʼಬೈಬಲ್ ಕಾಗದʼ ಹಾಗೂ ನಿರ್ದಿಷ್ಟ ವಿನ್ಯಾಸ ಇದರದ್ದಾಗಿದೆ. ತನ್ನ ಪ್ರಮುಖ ಪುಸ್ತಕಗಳಲ್ಲಿ ಒಂದಾದ ಈ ಕೃತಿ ಅಪಾರ ಸಹೃದಯರನ್ನು ಗಳಿಸಿದ್ದು ವಕೀಲರು, ನ್ಯಾಯಾಧೀಶರು, ರಾಜಕಾರಣಿಗಳು ಹಾಗೂ ಸಾರ್ವಜನಿಕರು ದೊಡ್ಡಮಟ್ಟದಲ್ಲಿ ಪುಸ್ತಕ ಖರೀದಿಸಿದ್ದಾರೆ. ಆದರೆ ಆನ್‌ಲೈನ್ ಮತ್ತು ಆಫ್‌ಲೈನ್ ಚಾನೆಲ್‌ಗಳ ಮೂಲಕ ರೂಪಾ ಪಬ್ಲಿಕೇಷನ್ಸ್ ಮಾರಾಟ ಮಾಡಿದ ಪುಸ್ತಕ ತಾನು ಮುದ್ರಿಸಿದ್ದ ಮುಖಪುಟವನ್ನು ಅನುಕರಿಸಿತ್ತು ಎಂದು ಇಬಿಸಿ ದೂರಿತು.
ಬಣ್ಣದ ಯೋಜನೆ, ಫಾಂಟ್ ಶೈಲಿ, ಗೌರವರ್ಣದ ವಿವರದ ಜೊತೆಗೆ ವಿನ್ಯಾಸ ಸೇರಿದಂತೆ ಇಬಿಸಿಯ ವಾಣಿಜ್ಯ ಹೊದಿಕೆಯ ವೈಶಿಷ್ಟ್ಯಗಳನ್ನು ರೂಪಾ ಪಬ್ಲಿಕೇಷನ್ಸ್ ಅನುಕರಿಸಿದೆ ಎಂದು ಇಬಿಸಿ ಪರವಾಗಿ ಹಿರಿಯ ವಕೀಲರಾದ ಜಯಂತ್ ಮೆಹ್ತಾ ಮತ್ತು ಸ್ವಾತಿ ಸುಕುಮಾರ್ ವಾದಿಸಿದರು. ಸೆಪ್ಟೆಂಬರ್ 2025ರಲ್ಲಿ, ತನ್ನ ಆವೃತ್ತಿ ಹಾಗೂ ಇಬಿಸಿ ಕೃತಿ ಒಂದೇ ರೀತಿಯದ್ದಾಗಿದೆ, ಆದರೆ ಅಗ್ಗದ ದರದಲ್ಲಿ ದೊರೆಯುತ್ತದೆ ಎಂಬ ರೂಪಾ ಪಬ್ಲಿಕೇಷನ್ಸ್ ಹೇಳಿಕೆಯಿಂದ ಖರೀದಿದಾರರು ಮನಸ್ಸು ಬದಲಿಸಿದ ಪರಿಣಾಮ ಇಬಿಸಿಗೆ 18,000 ಪ್ರತಿಗಳ ಮಾರಾಟ ಕೈತಪ್ಪಿತು ಎಂದು ಅವರು ಆರೋಪಿಸಿದರು.
ಕೋಲ್ಗೇಟ್ ಪಾಮೋಲಿವ್ ಕಂಪನಿ ಮತ್ತು ಆಂಕರ್ ಹೆಲ್ತ್ ಅಂಡ್ ಬ್ಯೂಟಿ ಕೇರ್ ಪ್ರೈವೇಟ್ ಲಿಮಿಟೆಡ್ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪನ್ನು ಅವಲಂಬಿಸಿದ ನ್ಯಾಯಮೂರ್ತಿ ಅರೋರಾ ಯಾವುದೇ ಕಕ್ಷಿದಾರ ಬಣ್ಣಕ್ಕೆ ಸಂಬಂಧಿಸಿದಂತೆ ಏಕಸ್ವಾಮ್ಯತೆ ಪಡೆಯಲು ಸಾಧ್ಯವಿಲ್ಲದಿದ್ದರೂ ಕಾಲಕ್ರಮೇಣ ಸ್ಥಿರವಾಗಿ ಬಳಸಲಾಗುವ ವಿಶಿಷ್ಟ ಸಂಯೋಜನೆ ಇದ್ದರೆ ಅದು ಬೌದ್ಧಿಕ ಆಸ್ತಿ ಕಾನೂನಿನಡಿ ರಕ್ಷಣಾರ್ಹವಾಗುತ್ತದೆ ಎಂದರು.
"ಬಣ್ಣ ಸಂಯೋಜನೆ, ವಿನ್ಯಾಸ, ಪಾತ್ರೆಯ ಆಕಾರ ಮತ್ತು ಒಟ್ಟಾರೆ ವಿನ್ಯಾಸವನ್ನು ಒಳಗೊಂಡಿರುವ ವಾಣಿಜ್ಯ ಹೊದಿಕೆಯನ್ನು ಅನುಕರಿಸದಂತೆ ಬಲವಾದ ರಕ್ಷಣೆ ಇರುತ್ತದೆ, ಏಕೆಂದರೆ ಅದು ಸರಕುಗಳ ಮೂಲಕ್ಕೆ ಹೋಲಿಕೆಯಾಗುತ್ತದೆ" ಎಂದು ಆದೇಶದಲ್ಲಿ ದಾಖಲಿಸಲಾಗಿದೆ.
ಗ್ರಾಹಕರಲ್ಲಿ ಗೊಂದಲ ಮೂಡುವುದರ ಜೊತೆಗೆ ಇಬಿಸಿಗೆ ಸರಿಪಡಿಸಲಾಗದಷ್ಟು ಹಾನಿ ಉಂಟಾಗುವ ಸಾಧ್ಯತೆ ಇದೆ ಎಂದ ನ್ಯಾಯಾಲಯ ರೂಪಾ ಪಬ್ಲಿಕೇಷನ್ಸ್ ಮತ್ತು ಅದರ ಸಹವರ್ತಿಗಳು ವಿವಾದಿತ ವಿನ್ಯಾಸ ಅನುಕರಿಸದಂತೆ ನಿರ್ಬಂಧಿಸಿತು. ಜೊತೆಗೆ ಇನ್ನೂ ಮಾರಾಟವಾಗದೆ ಇರುವ ಪುಸ್ತಕಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಹಾಗೂ ಇ-ವಾಣಿಜ್ಯ ತಾಣಗಳಿಂದ ಆ ಪುಸ್ತಕದ ವಿವರಗಳನ್ನು ತೆಗೆದುಹಾಕುವಂತೆ ಅದು ನಿರ್ದೇಶಿಸಿತು.
[ಆದೇಶದ ಪ್ರತಿ]