ಪ್ರಕರಣ ರದ್ದುಗೊಳಿಸಲು ಶಾಲಾಬಾಲಕಿಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ ಪೂರೈಸುವಂತೆ ಆರೋಪಿಗೆ ದೆಹಲಿ ಹೈಕೋರ್ಟ್‌ ಷರತ್ತು

ದೆಹಲಿ ಹೈಕೋರ್ಟ್ ಕಾನೂನು ಸೇವಾ ಸಮಿತಿ ಕಚೇರಿಗೆ ವರದಿ ಮಾಡಿಕೊಂಡು ಮುಂದಿನ ಮೂರು ತಿಂಗಳ ಕಾಲ ಸಾರ್ವಜನಿಕ ಒಳಿತಿನ ಕೆಲಸಗಳನ್ನು ಮಾಡುವಂತೆ ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ವಕೀಲೆಗೂ ಪೀಠ ಸೂಚಿಸಿತು.
Delhi High Court
Delhi High Court

ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸಲು ಎರಡು ತಿಂಗಳ ಕಾಲ ಬಾಲಕಿಯರ ಶಾಲೆಗೆ ಸ್ಯಾನಿಟರಿ ನ್ಯಾಪ್‌ಕಿನ್ ಪೂರೈಸಬೇಕು ದೆಹಲಿ ಹೈಕೋರ್ಟ್‌ ಇತ್ತೀಚೆಗೆ ಸುಲಿಗೆ ಪ್ರಕರಣವೊಂದರ ಆರೋಪಿಗೆ ಸೂಚಿಸಿದೆ. [ಶಿಲ್ಪಿ ಚೌಧರಿ ಮತ್ತು ದೆಹಲಿ ಸರ್ಕಾರ ಇನ್ನಿತರರ ನಡುವಣ ಪ್ರಕರಣ]

ಇದೇ ವೇಳೆ ಎರಡನೇ ಪ್ರತಿವಾದಿಯಾದ ವಕೀಲೆಯು, ದೆಹಲಿ ಹೈಕೋರ್ಟ್ ಕಾನೂನು ಸೇವಾ ಸಮಿತಿಯ (ಡಿಎಚ್‌ಸಿಎಲ್‌ಎಸ್‌ಸಿ) ಕಚೇರಿಗೆ ವರದಿ ಮಾಡಿಕೊಂಡು ಮುಂದಿನ ಮೂರು ತಿಂಗಳ ಕಾಲ ಸಾರ್ವಜನಿಕ ಒಳಿತಿನ ಕೆಲಸಗಳನ್ನು ಮಾಡುವಂತೆ ನ್ಯಾ. ಜಸ್ಮೀತ್‌ ಸಿಂಗ್‌ ಅವರಿದ್ದ ಏಕಸದಸ್ಯ ಪೀಠ ಸೂಚಿಸಿತು.

Also Read
ಸಸಿ ನೆಟ್ಟು ಆರೈಕೆ ಮಾಡುವಂತೆ ಷರತ್ತು ವಿಧಿಸಿ ಕೊಲೆ ಯತ್ನ ಪ್ರಕರಣದ ಆರೋಪಿಗೆ ಜಾಮೀನು ನೀಡಿದ ಮಧ್ಯಪ್ರದೇಶ ಹೈಕೋರ್ಟ್

“ಪ್ರಕರಣದಲ್ಲಿ ಪೊಲೀಸ್ ವ್ಯವಸ್ಥೆ ಮತ್ತು ನ್ಯಾಯಾಂಗದ ಉಪಯುಕ್ತ ಸಮಯ ವ್ಯರ್ಥವಾಗುತ್ತಿರುವುದನ್ನು ಪರಿಗಣಿಸಿ ಈ ಆದೇಶ ಹೊರಡಿಸಲಾಗಿದೆ. ಅರ್ಜಿದಾರರು ಬಾಲಕಿಯರ ಶಾಲೆಗೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಒದಗಿಸುವುದಕ್ಕೆ ಒಳಪಟ್ಟು ಎಫ್‌ಐಆರ್‌ ರದ್ದುಗೊಳಿಸಲಾಗಿದೆ. 2 ತಿಂಗಳ ಕಾಲ ನ್ಯಾಪ್‌ಕಿನ್‌ ಪೂರೈಸುವುದಕ್ಕಾಗಿ ಹೆಚ್ಚುವರಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅವರು ತರಗತಿ-VIರಿಂದ XIIರವರೆಗೆ 100 ಕ್ಕಿಂತ ಕಡಿಮೆ ಹುಡುಗಿಯರು ಇಲ್ಲದ ಶಾಲೆಯನ್ನು ಗುರುತಿಸಬೇಕು” ಎಂದು ಪೀಠ ವಿವರಿಸಿದೆ.

ತಮ್ಮ ಕಕ್ಷಿದಾರರಾಗಿದ್ದ ಅರ್ಜಿದಾರರು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ ವೃತ್ತಿಪರ ಸಲಹಾ  ಶುಲ್ಕವನ್ನು ಪಾವತಿಸಿಲ್ಲ ಎಂದು ಆರೋಪಿಸಿ ಪ್ರಸ್ತುತ ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ವಕೀಲೆಯೊಬ್ಬರು ದೂರು ಸಲ್ಲಿಸಿದ್ದರು.

Also Read
ಎಫ್ಐಆರ್ ರದ್ದತಿ ವೇಳೆ 45 ದಿನ ಯಮುನಾ ನದಿ ಸ್ವಚ್ಛಗೊಳಿಸುವ ಷರತ್ತು ವಿಧಿಸಿದ ದೆಹಲಿ ಹೈಕೋರ್ಟ್

ಪರಸ್ಪರ ಎಫ್‌ಐಆರ್‌ ದಾಖಲಿಸಿದ್ದ ಕಕ್ಷೀದಾರರು ಪ್ರಕರಣದ ವಿಚಾರಣೆ ಬಾಕಿ ಇರುವಾಗ ದೆಹಲಿ ಮಧ್ಯಸ್ಥಿಕೆ ಕೇಂದ್ರದಲ್ಲಿ ಎಫ್‌ಐಆರ್‌ ರದ್ದುಗೊಳಿಸುವ ಸಲುವಾಗಿ ಒಬ್ಬರಿಗೊಬ್ಬರು ಸಹಕರಿಸಲು ಮುಂದಾಗಿದ್ದರು.

ಪ್ರಕರಣದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಎರಡೂ ಕಡೆಯ ಪಕ್ಷಕಾರರು ಮುಂದೆ ಈ ರೀತಿ ನಡೆದುಕೊಳ್ಳುವುದಿಲ್ಲ ಎಂದು ಹೈಕೋರ್ಟ್‌ಗೆ ತಿಳಿಸಿದರು. ರಾಜಿ ಏರ್ಪಟ್ಟಿದ್ದು ವಿಚಾರಣೆ ಮುಂದುವರೆಸುವುದರಿಂದ ವಿಚಾರಣೆಯ ಉದ್ದೇಶ ಈಡೇರಿದಂತಾಗುವುದಿಲ್ಲ ಎಂದು  ಹೈಕೋರ್ಟ್‌ ಹೇಳಿತು. ಆದರೆ  ಪೊಲೀಸರು ಮತ್ತು ನ್ಯಾಯಾಂಗದ ಸಾಕಷ್ಟು ಸಮಯ ವ್ಯರ್ಥವಾಗಿದ್ದು ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ದಿಕ್ಕು ತಪ್ಪಿಸಲಾಗಿದೆ. ಹೀಗಾಗಿ (ಎರಡೂ ಕಡೆಯ) ಕಕ್ಷೀದಾರರು ಕೆಲ ಸಾಮಾಜಿಕ ಒಳಿತಿನ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಅದು ಸೂಚಿಸಿತು.

Related Stories

No stories found.
Kannada Bar & Bench
kannada.barandbench.com