ಆಮದುದಾರ ಅಥವಾ ತಯಾರಕರಲ್ಲ ಎಂದ ಮೇಲೆ 105 ಆಮ್ಲಜನಕ ಸಾಂದ್ರಕ ಏಕೆ ಹೊಂದಿದ್ದೀರಿ? ಕಲ್ರಾಗೆ ದೆಹಲಿ ಹೈಕೋರ್ಟ್ ಪ್ರಶ್ನೆ

“ಕಲ್ರಾ ಮಾಧ್ಯಮಗಳ ಹೊಡೆತಕ್ಕೆ ಸಿಲುಕಿ ಸಂತ್ರಸ್ತರಾಗಿದ್ದಾರೆ… ಇವರನ್ನು ಇನ್ನಿಲ್ಲದ ರೀತಿಯಲ್ಲಿ ಕಾಡಲಾಗುತ್ತಿದೆ, ಏತಕ್ಕಾಗಿ? ಇವರು ಆಮದುದಾರ ಅಥವಾ ತಯಾರಕರೂ ಅಲ್ಲ” ಎಂದು ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ಕಲ್ರಾ ಪರ ವಾದಿಸಿದರು.
ಆಮದುದಾರ ಅಥವಾ ತಯಾರಕರಲ್ಲ ಎಂದ ಮೇಲೆ 105 ಆಮ್ಲಜನಕ ಸಾಂದ್ರಕ ಏಕೆ ಹೊಂದಿದ್ದೀರಿ? ಕಲ್ರಾಗೆ ದೆಹಲಿ ಹೈಕೋರ್ಟ್ ಪ್ರಶ್ನೆ
Navneet Kalra, Delhi High Court

ತಾವು ಆಮದುದಾರರು ಅಥವಾ ತಯಾರಕರಲ್ಲ ಎಂದು ಹೇಳಿಕೊಳ್ಳುತ್ತಿರಬೇಕಾದರೆ 105 ಆಮ್ಲಜನಕ ಸಾಂದ್ರಕಗಳನ್ನು ಏಕೆ ಸಂಗ್ರಹಿಸಿದ್ದೀರಿ ಎಂದು ಗುರುವಾರ ದೆಹಲಿ ಹೈಕೋರ್ಟ್‌ ಉದ್ಯಮಿ ನವನೀತ್‌ ಕಲ್ರಾ ಅವರನ್ನು ಪ್ರಶ್ನಿಸಿದೆ.

ದೆಹಲಿ ಪೊಲೀಸರು ತನಿಖೆ ನಡೆಸುತ್ತಿರುವ ದುಬಾರಿ ಬೆಲೆಗೆ ಆಮ್ಲಜನಕ ಸಾಂದ್ರಕಗಳ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ರಾ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಮನವಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.

ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್‌ ಅವರಿದ್ದ ಏಕಸದಸ್ಯ ಪೀಠವು ಗುರುವಾರ ಸಂಜೆ ವಿಚಾರಣೆ ನಡೆಸಿತಾದರೂ ಅದು ಪೂರ್ಣಗೊಳ್ಳಲಿಲ್ಲ. ಹೀಗಾಗಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ.

ಕಲ್ರಾ ಪರ ವಾದಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು “ಈತ ಮಾಧ್ಯಮಗಳಿಂದ ಸಂತ್ರಸ್ತರಾಗಿದ್ದಾರೆ… ಅವರನ್ನು ಇನ್ನಿಲ್ಲದ ರೀತಿಯಲ್ಲಿ ಕಾಡಲಾಗುತ್ತಿದೆ. ಏತಕ್ಕಾಗಿ? ಅವರು ಆಮದುದಾರರೂ ಅಲ್ಲ ಅಥವಾ ಉತ್ಪಾದಕರೂ ಅಲ್ಲ” ಎಂದರು. ಅಗತ್ಯ ವಸ್ತುಗಳ ಕಾಯಿದೆ ಸೆಕ್ಷನ್‌ 3(1) ಅಡಿ ಸರ್ಕಾರವು ಆಮ್ಲಜನಕ ಸಾಂದ್ರಕಗಳಿಗೆ ದರ ನಿಗದಿಗೊಳಿಸದೇ ಇರುವಾಗ ಕಲ್ರಾ ಅವರ ಬಳಿ ಇರುವ ದಾಸ್ತಾನನ್ನು ದುಬಾರಿ ಬೆಲೆಗೆ ಮಾರಾಟ ಮಾಡಬಾರದು ಎಂದು ಹೇಳಲಾಗದು ಎಂದು ಪ್ರಾಥಮಿಕವಾಗಿ ವಾದಿಸಿದರು.

“ಈ ವೇಳೆಗಾಗಲೇ ಅದು ಇದ್ದಿದ್ದರೆ (ಸಾಂದ್ರಕದ ದಾಸ್ತಾನು) ರಾಜ್ಯ ಸರ್ಕಾರವು ಐದು ಪಟ್ಟು ಖರೀದಿ ಆದೇಶ ಮಾಡಿರುತ್ತಿತ್ತು” ಎಂದು ಸಿಂಘ್ವಿ ಹೇಳಿದ್ದಾರೆ. ಮ್ಯಾಟ್ರಿಕ್ಸ್‌ ಸೆಲ್ಯುಲರ್‌ನಿಂದ ಸರಕು ಮತ್ತು ಸೇವಾ ತೆರಿಗೆ ಪಾವತಿಸಿರುವ ದರ ಪಟ್ಟಿ ಸಹಿತ (ಇನ್ವಾಯ್ಸ್) ಆಮ್ಲಜನಕ ಸಾಂದ್ರಕಗಳನ್ನು ಕಲ್ರಾ ಖರೀದಿಸಿದ್ದಾರೆ. ಕಲ್ರಾ ಅಕ್ರಮವಾಗಿ ದಾಸ್ತಾನು ಮಾಡುತ್ತಿರಲಿಲ್ಲ ಎಂದಿದ್ದಾರೆ.

ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಪ್ರಸಾದ್‌, “ಅವರು ಆಮದುದಾರರು ಅಲ್ಲ ಅಥವಾ ಉತ್ಪಾದಕರು ಅಲ್ಲ ಎಂದ ಮೇಲೆ ಅವರೇಕೆ 105 ಆಮ್ಲಜನಕ ಸಾಂದ್ರಕಗಳನ್ನು ಹೊಂದಿದ್ದರು? ಅವು ಔಷಧಗಳಾಗಿದ್ದರೆ, ಪರವಾನಗಿ ಇಲ್ಲದೇ ಅವುಗಳನ್ನು ನೀವು ಸಂಗ್ರಹಿಸಿಟ್ಟುಕೊಳ್ಳುವ ಶಕ್ತಿ ಹೊಂದಿರುತ್ತಿದ್ದರೇ?“ಎಂದು ಪೀಠ ಪ್ರಶ್ನಿಸಿತು.

“ಆದೇಶವಿಲ್ಲದ ಹೊರತು ಯಾವುದೇ ಪರವಾನಗಿ ಅಗತ್ಯವಿಲ್ಲ” ಎಂದು ಸಿಂಘ್ವಿ ಪ್ರತಿಕ್ರಿಯಿಸಿದರು.

ಔಷಧ ಮತ್ತು ಸೌಂದರ್ಯವರ್ಧಕ ಕಾಯಿದೆಯನ್ನು ಉಲ್ಲಂಘಿಸಲಾಗಿದೆಯೇ ಎಂದು ನ್ಯಾಯಾಲಯ ಆಶ್ಚರ್ಯ ವ್ಯಕ್ತಪಡಿಸಲಾಗಿ, ಕಲ್ರಾ ಅವರ ವಿರುದ್ಧ ಪ್ರಾಸಿಕ್ಯೂಷನ್‌ ಅಗತ್ಯ ವಸ್ತುಗಳ ಕಾಯಿದೆ ಅಡಿ ಪ್ರಕರಣ ದಾಖಲಿಸಿದೆ ಎಂದು ಸಿಂಘ್ವಿ ಹೇಳಿದರು. “ಯಾವುದನ್ನೂ ಮುಚ್ಚಿಟ್ಟಿಲ್ಲ. ಜನರಿಗೆ ಆಮ್ಲಜನಕ ಬೇಕಿದೆ. ನಾವು ಅದಕ್ಕೆ ಶುಲ್ಕ ವಿಧಿಸುತ್ತಿದ್ದೇವೆ” ಎಂದು ಸಿಂಘ್ವಿ ಹೇಳಿದರು.

ಔಷಧಗಳನ್ನು ಸಾಧನಗಳೆಂದು ಪರಿಗಣಿಸಿ ಅವುಗಳನ್ನು ಅಗತ್ಯ ಸರಕುಗಳ ಕಾಯಿದೆಯ ವ್ಯಾಪ್ತಿಗೆ ಒಳಪಡುವ ಔಷಧ (ಬೆಲೆ ನಿಯಂತ್ರಣ) ಆದೇಶದಲ್ಲಿ (ಡಿಪಿಸಿಒ) ಸೇರಿಸುವುದಾದರೆ, ಆಮ್ಲಜನಕ ಸಾಂದ್ರಕಗಳು ಅಗತ್ಯ ಸರಕುಗಳ ಕಾಯಿದೆಯಡಿ ಬರುವುದಿಲ್ಲವೇ? ಎಂದು ನ್ಯಾಯಾಲಯ ಈ ವೇಳೆ ಪ್ರಶ್ನಿಸಿತು.

ಇದಕ್ಕೆ ಸಿಂಘ್ವಿ ಅವರು “ನ್ಯಾಯಾಲಯಕ್ಕೆ (ಅಪರಾಧವನ್ನು ನಿರೂಪಿಸಲು) ಕಾನೂನಿನ ಉಲ್ಲಂಘನೆಯನ್ನು ತೋರಿಸಬೇಕಾಗುತ್ತದೆ. ಕಾಯಿದೆ ಅದನ್ನು ಸ್ಪಷ್ಟಪಡಿಸುತ್ತದೆ. ಸೆಕ್ಷನ್ 3(1) [ಅಗತ್ಯ ಸರಕುಗಳ ಕಾಯ್ದೆಯ] ಅಡಿ ಒಳಪಟ್ಟಿದ್ದರೆ ಅದು ಕ್ರಮಕ್ಕೆ ಅರ್ಹವಾಗಿದೆ” ಎಂದರು.

ಆಮದು ಮಾಡಿದ ಆಮ್ಲಜನಕ ಸಾಂದ್ರಕಗಳಿಗೆ ಲಾಭಾಂಶವನ್ನು ನಿಗದಿಪಡಿಸಲು ಪರಿಗಣಿಸುವಂತೆ ಈಚೆಗೆ ಹೈಕೋರ್ಟ್‌ನ ವಿಭಾಗೀಯ ಪೀಠ ಹೇಳಿದೆ ಎಂದು ಸಿಂಘ್ವಿ ಪೀಠದ ಗಮನಸೆಳೆದರು.

Also Read
ದುಬಾರಿ ಬೆಲೆಗೆ ಆಮ್ಲಜನಕ ಸಾಂದ್ರಕ ಮಾರಾಟ: ಮ್ಯಾಟ್ರಿಕ್ಸ್‌ ಸೆಲ್ಯುಲರ್‌ ಉದ್ಯೋಗಿಗಳಿಗೆ ದೆಹಲಿ ನ್ಯಾಯಾಲಯದಿಂದ ಜಾಮೀನು

ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಅವರು “ಇದು ದುಬಾರಿ ದರಕ್ಕೆ ಮಾರಾಟ ಮಾಡುವುದಕ್ಕೆ ಸ್ಪಷ್ಟ ಉದಾಹರಣೆ. ಈ ಸಂದರ್ಭದಲ್ಲಿ ನೀವು ಜನರನ್ನು ಸುಲಿಗೆ ಮಾಡಲಾಗದು” ಎಂದರು.

ಆಮ್ಲಜನಕ ಸಾಂದ್ರಕಗಳು ಅತ್ಯುತ್ತಮ ಗುಣಮಟ್ಟದ ಜರ್ಮನ್‌ ಯಂತ್ರಗಳು ಎಂದು ಚೀನಾದ ಉತ್ಪನ್ನ ಮಾರಾಟ ಮಾಡುತ್ತಿದ್ದಾರೆ ಎಂದ ರಾಜು ಅವರು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

“ವಶಪಡಿಸಿಕೊಳ್ಳಲಾದ ಸಾಂದ್ರಕಗಳ ಪೈಕಿ ಎರಡನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಯಂತ್ರಗಳು ಶೇ. 32 ಉತ್ಪಾದನೆ ನೀಡುತ್ತವೆ ಎಂದು ಕಂಡು ನಾವು ಆಘಾತ ಮತ್ತು ಗಾಬರಿಗೊಂಡಿದ್ದೇವೆ” ಎಂದು ರಾಜು ಅವರು ತಗಾದೆ ಎತ್ತಿದ್ದಾರೆ. ಕಲ್ರಾಗೆ ನಿರೀಕ್ಷಣಾ ಜಾಮೀನು ನೀಡಿದರೆ ಅಕ್ರಮ ದಾಸ್ತಾನು ಹೊಂದಿದವರಿಗೆ ಧೈರ್ಯ ಬರಲಿದೆ. ತಾಂತ್ರಿಕ ಕಾರಣಗಳ ಆಧಾರದಲ್ಲಿ ಎಲ್ಲರೂ ನಿರೀಕ್ಷಣಾ ಜಾಮೀನಿಗೆ ಮುಂದಾಗುತ್ತಾರೆ ಎಂದರು. ವಾದ-ಪ್ರತಿವಾದಿ ಆಲಿಸಿದ ಪೀಠವು ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.

Related Stories

No stories found.