
ಅವಹೇಳನಕರ ಟ್ವೀಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಪತ್ನಿ, ಮಾಜಿ ರಾಜತಾಂತ್ರಿಕ ಅಧಿಕಾರಿ ಲಕ್ಷ್ಮಿ ಪುರಿ ಹಾಗೂ ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಸಾಕೇತ್ ಗೋಖಲೆ ಅವರು ತಮ್ಮ ನಡುವಿನ ವ್ಯಾಜ್ಯವನ್ನು ಬಗೆಹರಿಸಿಕೊಳ್ಳುವಂತೆ ದೆಹಲಿ ಹೈಕೋರ್ಟ್ ಗುರುವಾರ ಸಲಹೆ ನೀಡಿದೆ. ಇಬ್ಬರ ಪರ ವಕೀಲರು ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 2021ರಿಂದ ಈ ಇಬ್ಬರೂ ಸುದೀರ್ಘ ಕಾನೂನು ಹೋರಾಟ ನಡೆಸಿಕೊಂಡು ಬಂದಿದ್ದರು. ಲಕ್ಷ್ಮಿ ಪುರಿ ಅವರು ಸ್ವಿಟ್ಜರ್‌ಲೆಂಡ್‌ನಲ್ಲಿ ಆದಾಯ ಮೀರಿದ ಆಸ್ತಿ ಖರೀದಿಸಿದ್ದಾರೆ ಎಂದು ಸಾಕೇತ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಆರೋಪಿಸಿದ್ದರು.
ಟ್ವೀಟ್ ಮಾನಹಾನಿಕರವಾಗಿವೆ ಎಂದು ಜುಲೈ 2024 ರಲ್ಲಿ ತೀರ್ಪು ನೀಡಿದ್ದ ಏಕಸದಸ್ಯ ಪೀಠ ಗೋಖಲೆ ಅವರು ಕ್ಷಮೆಯಾಚಿಸುವಂತೆ ಲಕ್ಷ್ಮಿ ಅವರಿಗೆ ₹50 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿತ್ತು.
ಗೋಖಲೆ ಅವರು ಈ ಆದೇಶ ಪಾಲಿಸದೆ ಇರುವುದರಿಂದ ಮತ್ತು ಪರಿಹಾರ ನೀಡದೆ ಇರುವುದರಿಂದ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ನೀಡಲಾಗಿದ್ದ ಆದೇಶದ ವಿರುದ್ಧ ಗೋಖಲೆ ಅವರು ಸಲ್ಲಿಸಿದ್ದ ಮೇಲ್ಮನವಿನ್ನು ಇಂದು ನ್ಯಾಯಮೂರ್ತಿಗಳಾದ ಅನಿಲ್ ಕ್ಷೇತ್ರಪಾಲ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರಿದ್ದ ವಿಭಾಗೀಯ ಪೀಠ ಆಲಿಸಿತು.
ಗೋಖಲೆ ಮತ್ತು ಪುರಿ ಇಬ್ಬರೂ ಗೌರವಾನ್ವಿತ ಸಾರ್ವಜನಿಕ ವ್ಯಕ್ತಿಗಳಾಗಿದ್ದು ಅವರು ವ್ಯಾಜ್ಯವನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಲು ಮುಂದಾಗಬೇಕು ಎಂದು ನ್ಯಾಯಾಲಯ ಹೇಳಿದೆ.
"ನ್ಯಾಯಾಲಯಗಳು ಈಗಾಗಲೇ ಮೊಕದ್ದಮೆಗಳಿಂದ ತುಂಬಿ ತುಳುಕುತ್ತಿವೆ ಎಂಬುದನ್ನು ದಯವಿಟ್ಟು ಪರಿಗಣಿಸಿ... ಸಾಧ್ಯವಾದರೆ ಅವರು ಭೇಟಿಯಾಗಲಿ, ಇಲ್ಲದಿದ್ದರೆ, ನಾವು ಪ್ರಕರಣ ಆಲಿಸುವುದು ಅನಿವಾರ್ಯವಾಗುತ್ತದೆ" ಎಂದು ನ್ಯಾಯಾಲಯ ಹೇಳಿತು.
ಕ್ರಮವಾಗಿ ಗೋಖಲೆ ಮತ್ತು ಪುರಿ ಪರ ಹಾಜರಿದ್ದ ಹಿರಿಯ ವಕೀಲರಾದ ಅಮಿತ್ ಸಿಬಲ್ ಮತ್ತು ಮಣಿಂದರ್ ಸಿಂಗ್ ಈ ಸಲಹೆಗೆ ಸಮ್ಮತಿ ಸೂಚಿಸಿದರು.
"ಈ ನ್ಯಾಯಾಲಯವು ಇತ್ಯರ್ಥದ ಸಾಧ್ಯತೆಗಳನ್ನು ಅನ್ವೇಷಿಸಲು ಕಕ್ಷಿದಾರರು ಮಾತುಕತೆ ನಡೆಸುವಂತೆ ಸೂಚಿಸಿದೆ, ಇದಕ್ಕೆ ವಕೀಲರು ಸಕಾರಾತ್ಮಕವಾಗಿ ಒಪ್ಪಿದ್ದಾರೆ... ಪಕ್ಷಕಾರರು ಇತ್ಯರ್ಥದ ಸಾಧ್ಯತೆಯನ್ನು ಅನ್ವೇಷಿಸಲು ಮನವಿ ಮಾಡಲಾಗುತ್ತಿದೆ" ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ದಾಖಲಿಸಿದೆ.