ಲಕ್ಷ್ಮಿ ಪುರಿ ಮಾನಹಾನಿ ದಾವೆ: ಸಾಕೇತ್ ಗೋಖಲೆ ಅಫಿಡವಿಟ್‌ಗೆ ದೆಹಲಿ ಹೈಕೋರ್ಟ್ ಆಕ್ಷೇಪ

ಗೋಖಲೆ ಅವರು ಪುರಿ ವಿರುದ್ಧ ಮಾಡಿರುವ ಟ್ವೀಟ್‌ಗಳು ಮಾನಹಾನಿಕರ ಎಂದು ಕಳೆದ ವರ್ಷ ಹೈಕೋರ್ಟ್ ತೀರ್ಪು ನೀಡಿತ್ತು. ಅಂತೆಯೇ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಮತ್ತು ಎಕ್ಸ್‌ ಖಾತೆಯಲ್ಲಿ ಕ್ಷಮೆಯಾಚನೆ ಪ್ರಕಟಿಸುವಂತೆ ಅವರಿಗೆ ಸೂಚಿಸಿತ್ತು.
ಲಕ್ಷ್ಮಿ ಪುರಿ ಮಾನಹಾನಿ ದಾವೆ: ಸಾಕೇತ್ ಗೋಖಲೆ ಅಫಿಡವಿಟ್‌ಗೆ ದೆಹಲಿ ಹೈಕೋರ್ಟ್ ಆಕ್ಷೇಪ
Published on

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಪತ್ನಿ, ಮಾಜಿ ರಾಜತಾಂತ್ರಿಕ ಅಧಿಕಾರಿ ಲಕ್ಷ್ಮಿ ಪುರಿ ಅವರ ವಿರುದ್ಧ ಅವಹೇಳನಕಾರಿ ಟ್ವೀಟ್‌ ಮಾಡಿದ್ದಕ್ಕಾಗಿ ₹50 ಲಕ್ಷ ಪರಿಹಾರ ಪಾವತಿಸುವಂತೆ ಏಕಸದಸ್ಯ ಪೀಠ ನೀಡಿದ್ದ ನಿರ್ದೇಶನದ ವಿರುದ್ಧ ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ  ಸಾಕೇತ್ ಗೋಖಲೆ ಸಲ್ಲಿಸಿದ್ದ ಅಫಿಡವಿಟ್‌ಗೆ ದೆಹಲಿ ಹೈಕೋರ್ಟ್ ಮಂಗಳವಾರ ಆಕ್ಷೇಪ ವ್ಯಕ್ತಪಡಿಸಿದೆ.

ಏಕಸದಸ್ಯ ಪೀಠದ ನಿರ್ದೇಶನದಂತೆ ಗೋಖಲೆ ಇತ್ತೀಚೆಗೆ ಪುರಿ ಅವರನ್ನು ಉದ್ದೇಶಿಸಿ ಸಾರ್ವಜನಿಕವಾಗಿ ಕ್ಷಮೆಯಾಚನೆ ಪ್ರಕಟಿಸಿದ್ದರು. ಇಂದು ಈ ಸಂಬಂಧ ಗೋಖಲೆ ಅವರು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದರು.

Also Read
ಲಕ್ಷ್ಮಿ ಪುರಿ ಮಾನಹಾನಿ ಪ್ರಕರಣ: ಸಾಕೇತ್ ಗೋಖಲೆ ವಿರುದ್ಧದ ಆದೇಶ ಹಿಂಪಡೆಯಲು ದೆಹಲಿ ಹೈಕೋರ್ಟ್ ನಕಾರ

ನ್ಯಾಯಾಲಯದ ಕೆಲವು ಮೌಖಿಕ ಅವಲೋಕನಗಳನ್ನು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ನವೀನ್ ಚಾವ್ಲಾ ಮತ್ತು ರೇಣು ಭಟ್ನಾಗರ್ ಅವರಿದ್ದ ಪೀಠ ಆಕ್ಷೇಪಿಸಿತು.

"ಹೀಗಾಗಬಾರದು... ನೀವು ಮೊದಲು ಅಫಿಡವಿಟ್ ಹಿಂಪಡೆಯಿರಿ" ಎಂದ ನ್ಯಾಯಾಲಯ, ಉತ್ತಮ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ ಜುಲೈ 22ರಂದು ನಡೆಯಲಿದೆ.

ಗೋಖಲೆ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅಮಿತ್ ಸಿಬಲ್, ಅಫಿಡವಿಟ್‌ಅನ್ನು ಔಪಚಾರಿಕವಾಗಿ ಸಲ್ಲಿಸಿಲ್ಲ. ಆದರೆ ಮೌಖಿಕ ಅವಲೋಕನಗಳನ್ನು ಅಫಿಡವಿಟ್‌ನಲ್ಲಿ ಸೇರಿಸಬಾರದಿತ್ತು ಎಂದು ಒಪ್ಪಿಕೊಂಡರು.

ಈ ಮಧ್ಯೆ, ಪುರಿ ಪರ ವಾದ ಮಂಡಿಸಿದ ಹಿರಿಯ ವಕೀಲ ಮಣಿಂದರ್ ಸಿಂಗ್ , ಪ್ರಕರಣದಲ್ಲಿ ಗೋಖಲೆ ಅವರ ನಡೆಯ ಬಗ್ಗೆ ಎರಡು ಏಕಸದಸ್ಯ ಪೀಠಗಳು ಮಾಡಿದ ಅವಲೋಕನಗಳನ್ನು ಪ್ರಸ್ತಾಪಿಸಿದರು.

ಗೋಖಲೆ ಅವರು ಲಕ್ಷ್ಮಿ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಜುಲೈ 1, 2024ರಂದು ಹೈಕೋರ್ಟ್‌ ತೀರ್ಪು ನೀಡಿತ್ತು. ಲಕ್ಷ್ಮಿ ಅವರಿಗೆ ₹50 ಲಕ್ಷ ಪರಿಹಾರ ನೀಡಬೇಕು ಜೊತೆಗೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಮತ್ತು ತಮ್ಮ ಟ್ವಿಟರ್‌ ಖಾತೆಯಲ್ಲಿ ಕ್ಷಮೆಯಾಚನೆ ಪ್ರಕಟಿಸಬೇಕು ಎಂದು ಆದೇಶಿಸಿತ್ತು.

Also Read
ಲಕ್ಷ್ಮಿ ಪುರಿ ಮಾನಹಾನಿ ಪ್ರಕರಣ: ಸಂಸದ ಸಾಕೇತ್ ಗೋಖಲೆ ವೇತನ ಮುಟ್ಟುಗೋಲಿಗೆ ದೆಹಲಿ ಹೈಕೋರ್ಟ್ ಆದೇಶ

ಲಕ್ಷ್ಮಿ ಪುರಿ ಅವರು ಸ್ವಿಟ್ಜರ್‌ಲೆಂಡ್‌ನಲ್ಲಿ ಆದಾಯ ಮೀರಿದ ಆಸ್ತಿ ಖರೀದಿಸಿದ್ದಾರೆ ಎಂದು ಸಾಕೇತ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಿಸಿದ್ದ ಹಿನ್ನೆಲೆಯಲ್ಲಿ ಮಾಜಿ ರಾಯಭಾರಿ ಲಕ್ಷ್ಮಿ ಮೊಕದ್ದಮೆ ಹೂಡಿದ್ದರು.

ಗೋಖಲೆ ಅವರ ಟ್ವೀಟ್‌ಗಳು ಮಾನಹಾನಿಕರ, ದುರುದ್ದೇಶಪೂರಿತ ಮತ್ತು ಸುಳ್ಳು ಮಾಹಿತಿಯನ್ನು ಆಧರಿಸಿವೆ ಎಂದು ಪುರಿ ದೂರಿದ್ದರು.

Kannada Bar & Bench
kannada.barandbench.com