ಸಂಜಯ್ ಆಸ್ತಿಯಲ್ಲಿ ಕರಿಷ್ಮಾ ಮಕ್ಕಳಿಗೆ ಪಾಲು ವಿವಾದ: ಪ್ರಿಯಾ ಅವರಿಂದ ಆಸ್ತಿ ವಿವರ ಕೇಳಿದ ದೆಹಲಿ ಹೈಕೋರ್ಟ್

ಕರಿಷ್ಮಾ ಅವರ ಮಕ್ಕಳಿಗೆ ವಿಲ್ ಪ್ರತಿ ನೀಡಲು ಪ್ರಿಯಾ ಕಪೂರ್ ಏಕೆ ಹಿಂಜರಿಯುತ್ತಿದ್ದಾರೆ ಎಂದು ನ್ಯಾಯಾಲಯ ಕೇಳಿತು.
Karisma Kapoor, Sunjay Kapur
Karisma Kapoor, Sunjay KapurInstagram
Published on

ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ಇಬ್ಬರು ಮಕ್ಕಳು ತಮ್ಮ ಮೃತ ತಂದೆ ಸಂಜಯ್ ಕಪೂರ್ ಅವರ ಆಸ್ತಿಯಲ್ಲಿ ಪಾಲು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಬುಧವಾರ ಸಂಜಯ್‌ ಅವರ ಮೂರನೇ ಪತ್ನಿ ಪ್ರಿಯಾ ಕಪೂರ್‌ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಪ್ರಿಯಾ ಕಪೂರ್ ತಮ್ಮ ತಂದೆಯ ಆಸ್ತಿಗಳನ್ನು ಕಬಳಿಸಲು ನಕಲಿ ವಿಲ್ ಮಾಡಿದ್ದಾರೆ ಎಂದು ಮಕ್ಕಳು ದೂರಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ಪ್ರಮುಖ ಆರೋಪಿ ಪ್ರಿಯಾ ಸಚ್‌ದೇವ ಕಪೂರ್ ಅವರಿಗೆ ಸಂಜಯ್ ಕಪೂರ್ ಅವರ ಎಲ್ಲಾ ಚರ ಮತ್ತು ಸ್ಥಿರ ಆಸ್ತಿಗಳ ಪಟ್ಟಿ ಸಲ್ಲಿಸುವಂತೆ ನ್ಯಾಯಮೂರ್ತಿ ಜ್ಯೋತಿ ಸಿಂಗ್ ಆದೇಶಿಸಿದರು.

Also Read
ಸಂಜಯ್ ಕಪೂರ್ ₹30,000 ಕೋಟಿ ಆಸ್ತಿ ವಿವಾದ: ಪಾಲು ಕೇಳಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಕರಿಷ್ಮಾ ಕಪೂರ್ ಮಕ್ಕಳು

"ಆರೋಪಿಗೆ ನೋಟಿಸ್ ಜಾರಿ ಮಾಡಿ. ಎರಡು ವಾರಗಳಲ್ಲಿ ಆಕೆ ಉತ್ತರಿಸಬೇಕು, ನಂತರ ಒಂದು ವಾರದಲ್ಲಿ ಪ್ರತ್ಯುತ್ತರ ಅರ್ಜಿ ಸಲ್ಲಿಸಬೇಕು. ಪ್ರಿಯಾ ಅವರು ತಮಗೆ ತಿಳಿದಿರುವ ಎಲ್ಲಾ ಚರ ಮತ್ತು ಸ್ಥಿರ ಆಸ್ತಿಗಳ ಪಟ್ಟಿ ಸಲ್ಲಿಸಬೇಕು. ಜೂನ್ 12 ರವರಗಿನ ಆಸ್ತಿ ವಿವರ ಘೋಷಿಸಬೇಕು" ಎಂದು ನ್ಯಾಯಾಲಯ ಆದೇಶಿಸಿತು.

ಪ್ರಕರಣ ಬಗೆಹರಿಯುವವರೆಗೆ ಸಂಜಯ್ ಕಪೂರ್ ಅವರಿಗೆ ಸೇರಿದ ಎಲ್ಲಾ ವೈಯಕ್ತಿಕ ಆಸ್ತಿಗಳನ್ನು ಸ್ಥಗಿತಗೊಳಿಸಿ ಮಧ್ಯಂತರ ತಡೆಯಾಜ್ಞೆ ನೀಡಬೇಕು ಎಂದು ಕರಿಷ್ಮಾ ಅವರ ಮಕ್ಕಳ ಕೋರಿಕೆಗೆ ಸಂಬಂಧಿಸಿದಂತೆ ಅಕ್ಟೋಬರ್ 9 ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.

ಕರಿಷ್ಮಾ ಅವರ ಮಕ್ಕಳಿಗೆ ವಿಲ್ ಪ್ರತಿ ನೀಡಲು ಪ್ರಿಯಾ ಕಪೂರ್ ಏಕೆ ಹಿಂಜರಿಯುತ್ತಿದ್ದಾರೆ ಎಂದು ನ್ಯಾಯಾಲಯ ಕೇಳಿತು.

ಮಕ್ಕಳಿಗೆ ವಿಲ್ ಪ್ರತಿಯನ್ನು ನೀವು ಏಕೆ ನೀಡುತ್ತಿಲ್ಲ ಎಂದು ನನಗೆ ತಿಳಿದಿಲ್ಲ. ಉಯಿಲು ಬಹಿರಂಗಪಡಿಸದಂತಹ ಒಪ್ಪಂದ ಇದ್ದರೆ ಅದನ್ನು ಗೌಪ್ಯವಾಗಿ ತಿಳಿಸಬಹುದು. ಬೌದ್ಧಿಕ ಆಸ್ತಿ ವಿಷಯಗಳಲ್ಲಿ ಸಾಮಾನ್ಯವಾಗಿ ನ್ಯಾಯಾಲಯ ಹೀಗೆ ಮಾಡುತ್ತದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಮಲತಾಯಿ ಪ್ರಿಯಾ ಕಪೂರ್ ಅವರು, ಸಂಜಯ್ ಕಪೂರ್ ಅವರ ಉಯಿಲು ಫೋರ್ಜರಿ ಮಾಡಿ ಆಸ್ತಿಗಳನ್ನುಸಂಪೂರ್ಣ ಸ್ವಾಧೀನಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಕರಿಷ್ಮಾ ಕಪೂರ್ ಮಕ್ಕಳು ಆರೋಪಿಸಿದ್ದರು.

ಕರಿಷ್ಮಾಕಪೂರ್‌ ಸಂಜಯ್‌ ಅವರನ್ನು 2003ರಲ್ಲಿ ವರಿಸಿದ್ದರು. 2016ರಲ್ಲಿ ಅವರು ವಿಚ್ಛೇದನ ಪಡೆಯುವ ಮೂಲಕ 13 ವರ್ಷಗಳ ದಾಂಪತ್ಯ ಅಂತ್ಯಗೊಂಡಿತ್ತು. ಕಳೆದ ಜೂನ್‌ನಲ್ಲಿ ಸಂಜಯ್‌ ಇಂಗ್ಲೆಂಡ್‌ನಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗಿದ್ದು ಆ ಬಳಿಕ ಸಂಜಯ್‌ ಅವರ ಮನೆಯಿಂದ ಪ್ರಿಯಾ ಕಪೂರ್‌ ನಮ್ಮನ್ನು ಅಕ್ರಮವಾಗಿ ಹೊರಗಟ್ಟಿದ್ದಾರೆ. ಎಂದು ಕರಿಷ್ಮಾ ಅವರ ಅಪ್ರಾಪ್ತ ಮಕ್ಕಳು ತಮ್ಮ ತಾಯಿಯ ಮುಖೇನ ನ್ಯಾಯಾಲಯದ ಮೊರೆ ಹೋಗಿದ್ದರು.

Also Read
ಕರೀನಾ ಕಪೂರ್ ಟಿವಿ ಕಾರ್ಯಕ್ರಮದ ವಿರುದ್ಧ ಮೊಕದ್ದಮೆ: ರೇಡಿಯೊ ಮಿರ್ಚಿಗೆ ದೆಹಲಿ ಹೈಕೋರ್ಟ್ ಮಧ್ಯಂತರ ಪರಿಹಾರ

ಈ ಮೊಕದ್ದಮೆಯಲ್ಲಿ ಪ್ರಿಯಾ ಕಪೂರ್, ಅವರ ಅಪ್ರಾಪ್ತ ಮಗ, ಅವರ ತಾಯಿ ರಾಣಿ ಕಪೂರ್ ಹಾಗೂ ಉಯಿಲಿನ ನಿರ್ವಾಹಕಿ ಎಂದು ಹೇಳಲಾದ ಶ್ರದ್ಧಾ ಸೂರಿ ಮಾರ್ವಾ ಅವರನ್ನು ಪ್ರತಿವಾದಿಗಳೆಂದು ಹೆಸರಿಸಲಾಗಿದೆ. ವಿವಾದದ ಕೇಂದ್ರಬಿಂದುವಾಗಿರುವ ಮಾರ್ಚ್ 21 2025ರಂದು ಪ್ರಕಟಿಸಲಾದ ಉಯಿಲು, ಸಂಜಯ್ ಕಪೂರ್ ಅವರ ಸಂಪೂರ್ಣ ವೈಯಕ್ತಿಕ ಆಸ್ತಿ ಪ್ರಿಯಾ ಕಪೂರ್ ಅವರಿಗೆ ಸೇರಿದ್ದು ಎನ್ನುತ್ತದೆ.

ಹಿರಿಯ ವಕೀಲ ಮಹೇಶ್‌ ಜೇಠ್ಮಲಾನಿ ಅವರು ಕರಿಷ್ಮಾ ಅವರ ಮಕ್ಕಳ ಪರವಾಗಿ ವಾದ ಮಂಡಿಸಿದರು. ಪ್ರಿಯಾ ಕಪೂರ್‌ ಅವರನ್ನು ಹಿರಿಯ ನ್ಯಾಯವಾದಿಗಳಾದ ರಾಜೀವ್‌ ನಾಯರ್‌, ಅಖಿಲ್‌ ಸಿಬಲ್‌, ಶೇಯಲ್‌ ತ್ರೆಹನ್ ಪ್ರತಿನಿಧಿಸಿದ್ದರು. ಹಿರಿಯ ವಕೀಲ ವೈಭವ್ ಗಗ್ಗರ್ ಅವರು ಸಂಜಯ್ ಕಪೂರ್ ಅವರ ತಾಯಿ ರಾಣಿ ಕಪೂರ್ ಅವರ ಪರವಾಗಿ ವಕಾಲತ್ತು ವಹಿಸಿದ್ದರು.

Kannada Bar & Bench
kannada.barandbench.com