
ದೆಹಲಿ ಗಲಭೆ ಪಿತೂರಿ ಪ್ರಕರಣದಲ್ಲಿ ಜಾಮೀನು ಪಡೆದಿರುವವರು ಪ್ರಕರಣದ ವಿಚಾರಣೆಯನ್ನು ವಿಳಂಬಗೊಳಿಸುತ್ತಿದ್ದಾರೆ ಎಂದು ದೆಹಲಿ ಹೈಕೋರ್ಟ್ ಮಂಗಳವಾರ ದೂಷಿಸಿದ್ದು ಇದು ಜೈಲಿನಲ್ಲಿರುವ ಪ್ರಕರಣದ ಉಳಿದ ಆರೋಪಿಗಳಿಗೆ ಜಾಮೀನು ನೀಡುವುದರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದೆ [ತಸ್ಲೀಮ್ ಅಹ್ಮದ್ ಮತ್ತು ದೆಹಲಿ ಸರ್ಕಾರ ಇನ್ನಿತರರ ನಡುವಣ ಪ್ರಕರಣ] .
ಜಾಮೀನು ಪಡೆದ ಆರೋಪಿಗಳು, ತನಿಖೆ ಇನ್ನೂ ಬಾಕಿ ಇದೆ ಎಂಬ ಕಾರಣಕ್ಕೆ ಆರೋಪದ ಮೇಲಿನ ವಾದಗಳನ್ನು ವಿಳಂಬಗೊಳಿಸಲು ಪ್ರಯತ್ನಿಸುತ್ತಿದ್ದು ಇದು ಉಳಿದ ಆರೋಪಿಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ನ್ಯಾಯಮೂರ್ತಿಗಳಾದ ಸುಬ್ರಮೋಣಿಯಂ ಪ್ರಸಾದ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರಿದ್ದ ವಿಭಾಗೀಯ ಪೀಠ ಹೇಳಿತು.
ಈ ಪ್ರಕರಣದಲ್ಲಿ ದೆಹಲಿ ಪೊಲೀಸರು ಒಟ್ಟು 18 ಜನರನ್ನು ಆರೋಪಿಗಳೆಂದು ಹೆಸರಿಸಿದ್ದು, ಅವರಲ್ಲಿ ಆರು ಮಂದಿ - ಆಸಿಫ್ ಇಕ್ಬಾಲ್ ತನ್ಹಾ, ದೇವಾಂಗನಾ ಕಲಿತಾ, ನತಾಶಾ ನರ್ವಾಲ್, ಸಫೂರಾ ಜರ್ಗರ್, ಫೈಜಾನ್ ಖಾನ್ ಮತ್ತು ಇಶ್ರತ್ ಜಹಾನ್ ಈಗಾಗಲೇ ಜಾಮೀನು ಪಡೆದಿದ್ದಾರೆ.
ಆರೋಪ ಕುರಿತಾದವಾದಗಳನ್ನು ಹೇಗೆ ಮತ್ತು ಯಾವ ಕ್ರಮದಲ್ಲಿ ಮುಂದುವರಿಸಬೇಕು ಎಂಬುದನ್ನು ತಮ್ಮೊಳಗೆ ನಿರ್ಧರಿಸಿಕೊಳ್ಳುವಂತೆ ವಿಚಾರಣಾ ನ್ಯಾಯಾಲಯ ಆರೋಪಿಗಳ ಪರ ವಕೀಲರಿಗೆ ನಿರ್ದೇಶಿಸಿದ್ದರೂ, ಅವರಲ್ಲಿ ಒಮ್ಮತವಿಲ್ಲ ಎಂದು ಅದು ಹೈಕೋರ್ಟ್ ಹೇಳಿದೆ.
ವಿಚಾರಣೆ ವಿಳಂಬವಾಗಿದ್ದಕ್ಕೆ ದೆಹಲಿ ಪೊಲೀಸರು ಅಥವಾ ವಿಚಾರಣಾ ನ್ಯಾಯಾಲಯದ ಕಡೆಯಿಂದ ಯಾವುದೇ ಲೋಪವಾಗಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ದೆಹಲಿ ಗಲಭೆ ಆರೋಪಿ ತಸ್ಲೀಮ್ ಅಹ್ಮದ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು ಈತ ಈಗಲೂ ಜೈಲಿನಲ್ಲಿರುವ ಆರೋಪಿಗಳಲ್ಲಿ ಒಬ್ಬನಾಗಿದ್ದಾನೆ.
ತಸ್ಲೀಮ್ ಅಹ್ಮದ್ ಅವರನ್ನು ವಕೀಲರಾದ ಮೆಹಮೂದ್ ಪ್ರಾಚಾ, ಜತಿನ್ ಭಟ್, ಸನಾವರ್, ಕ್ಷಿತಿಜ್ ಸಿಂಗ್, ಮೊಹಮ್ಮದ್ ಹಸನ್, ಹೀಮ್ ಸಾಹೂ, ನುಜಾತ್ ನಸೀಮ್, ಸಿಕಂದರ್, ಸಾದಿಯಾ ಸುಲ್ತಾನ್ ಚಿರಾಗ್ ವರ್ಮಾ ಪ್ರತಿನಿಧಿಸಿದ್ದರು.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಾದ ಅಮಿತ್ ಪ್ರಸಾದ್ ಮತ್ತು ಮಧುಕರ್ ಪಾಂಡೆ ಅವರೊಂದಿಗೆ ವಕೀಲರಾದ ಧ್ರುವ ಪಾಂಡೆ, ಆರುಷ್ ಭಾಟಿಯಾ, ಅಯೋಧ್ಯಾ ಪ್ರಸಾದ್, ರುಚಿಕಾ ಪ್ರಸಾದ್, ಉಮೇಶ್ ಕುಮಾರ್ ಸಿಂಗ್, ಸುಲಭ್ ಗುಪ್ತಾ, ಹರ್ಷಿಲ್ ಜೈನ್, ಸರವ್ಜೀತ್ ಸಿಂಗ್ ಮತ್ತು ದಕ್ಷ್ ಸಚ್‌ದೇವ ಅವರು ದೆಹಲಿ ಪೊಲೀಸರ ಪರವಾಗಿ ವಾದ ಮಂಡಿಸಿದರು.
ಈಶಾನ್ಯ ದೆಹಲಿಯಲ್ಲಿ 2020ರಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ಭಾರೀ ಪಿತೂರಿ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಬಂಧಿತರಾಗಿದ್ದ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್ಯು) ಮಾಜಿ ವಿದ್ಯಾರ್ಥಿಗಳಾದ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಸಹಿತ 9 ಜನರಿಗೆ ದೆಹಲಿ ಹೈಕೋರ್ಟ್ ಮಂಗಳವಾರ ಜಾಮೀನು ನಿರಾಕರಿಸಿತ್ತು.
ಶಾರ್ಜೀಲ್ ಇಮಾಮ್, ಉಮರ್ ಖಾಲಿದ್, ಮೊಹಮ್ಮದ್ ಸಲೀಂ ಖಾನ್, ಶಿಫಾ ಉರ್ ರೆಹಮಾನ್, ಅಥರ್ ಖಾನ್, ಮೀರನ್ ಹೈದರ್, ಶಾದಾಬ್ ಅಹ್ಮದ್, ಅಬ್ದುಲ್ ಖಾಲಿದ್ ಸೈಫಿ ಹಾಗೂ ಗುಲ್ಫಿಶಾ ಫಾತಿಮಾ ಪ್ರಕರಣದಲ್ಲಿ ಜಾಮೀನು ಕೋರಿದ್ದ ಒಂಬತ್ತು ಆರೋಪಿಗಳಾಗಿದ್ದಾರೆ.