ಆನ್‌ಲೈನ್‌ ಔಷಧ ಮಾರಾಟ: ಎಂಟು ವಾರಗಳಲ್ಲಿ ನೀತಿ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಆದೇಶ

ಔಷಧಗಳು ಮತ್ತು ಸೌಂದರ್ಯ ವರ್ಧಕಗಳ ಕಾಯಿದೆ- 1940 ಹಾಗೂ ಫಾರ್ಮಸಿ ಕಾಯಿದೆ- 1948ನ್ನು ಉಲ್ಲಂಘಿಸಿರುವಕಾರಣಕ್ಕೆ ಔಷಧಿಗಳ ಆನ್‌ಲೈನ್‌ ಮಾರಾಟಕ್ಕೆ ಹೈಕೋರ್ಟ್ 2018ರಲ್ಲಿ ತಡೆ ನೀಡಿತ್ತು.
ಆನ್‌ಲೈನ್‌ ಔಷಧ ಮಾರಾಟ: ಎಂಟು ವಾರಗಳಲ್ಲಿ ನೀತಿ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಆದೇಶ

ಆನ್‌ಲೈನ್‌ ಮೂಲಕ ಔಷಧ ಮಾರಾಟ ಕುರಿತು ಎಂಟು ವಾರಗಳಲ್ಲಿ ನೀತಿ ರೂಪಿಸುವಂತೆ ದೆಹಲಿ ಹೈಕೋರ್ಟ್ ಗುರುವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಐದು ವರ್ಷಗಳಿಂದ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದು ನೀತಿ ರೂಪಿಸಲು ಕೇಂದ್ರ ಸರ್ಕಾರಕ್ಕೆ ಕೊನೆಯ ಅವಕಾಶ ನೀಡಲಾಗುತ್ತಿದೆ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

ಆದೇಶ ಪಾಲಿಸದೇ ಹೋದಲ್ಲಿ ಸಂಬಂಧಪಟ್ಟ ಜಂಟಿ ಕಾರ್ಯದರ್ಶಿ ಮುಂದಿನ ವಿಚಾರಣೆಯ ದಿನಾಂಕದಂದು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.

“ಔಷಧಗಳ ಆನ್‌ಲೈನ್ ಮಾರಾಟಕ್ಕೆ ಸಂಬಂಧಿಸಿದಂತೆ ಆಗಸ್ಟ್ 28, 2018ರ ಅಧಿಸೂಚನೆ  ಕುರಿತು  ಇನ್ನೂ ಚರ್ಚೆ, ಸಮಾಲೋಚನೆ ನಡೆಯುತಿದೆ ಎಂದು [ಕೇಂದ್ರ ಸರ್ಕಾರದ ಸ್ಥಾಯಿ ವಕೀಲ] ಕೀರ್ತಿಮಾನ್‌ ಸಿಂಗ್‌ ಹೇಳುತ್ತಿದ್ದಾರೆ. ಐದು ವರ್ಷಗಳಿಗಿಂತ ಹೆಚ್ಚು ಕಾಲ ಕಳೆದಿರುವುದರಿಂದ ಭಾರತ ಒಕ್ಕೂಟಕ್ಕೆ (ಕೇಂದ್ರ ಸರ್ಕಾರ) ಸಾಕಷ್ಟು ಸಮಯಾವಕಾಶ ಇತ್ತು ಎಂದು ಈ ನ್ಯಾಯಾಲಯ ಅಭಿಪ್ರಾಯಪಡುತ್ತಿದೆ. ಆದರೂ ಎಂಟು ವಾರಗಳಲ್ಲಿ ನೀತಿ ರೂಪಿಸಲು ಕಡೆಯ ಅವಕಾಶ ನೀಡಲಾಗುತ್ತಿದೆ. ಔಷಧಗಳ ಆನ್‌ಲೈನ್ ಮಾರಾಟಕ್ಕೆ ಸಂಬಂಧಿಸಿದಂತೆ ನೀತಿಯನ್ನು ರೂಪಿಸದಿದ್ದಲ್ಲಿ ಸಂಬಂಧಪಟ್ಟ ಜಂಟಿ ಕಾರ್ಯದರ್ಶಿ ಮುಂದಿನ ವಿಚಾರಣೆಯ ದಿನಾಂಕದಂದು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಬೇಕಾಗುತ್ತದೆ” ಎಂದು ಅದು ವಿವರಿಸಿದೆ.

Also Read
ಔಷಧ ದಾಸ್ತಾನು: ಗೌತಮ್ ಗಂಭೀರ್ ಉದ್ದೇಶ ಒಳ್ಳೆಯದಿದ್ದರೂ ಮಾಡಿದ್ದು ಕೆಡುಕು ಎಂದ ದೆಹಲಿ ಹೈಕೋರ್ಟ್

ಆನ್‌ಲೈನ್‌ನಲ್ಲಿ ಅಕ್ರಮವಾಗಿ ಔಷಧ ಮಾರಾಟ ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ. ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯಿದೆಯಲ್ಲಿ ಮತ್ತಷ್ಟು ತಿದ್ದುಪಡಿ ಮಾಡಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರಕಟಿಸಿದ ಕರಡು ನಿಯಮಗಳನ್ನು ಕೂಡ ಅರ್ಜಿಗಳು ಪ್ರಶ್ನಿಸಿವೆ.

ಔಷಧಗಳು ಮತ್ತು ಸೌಂದರ್ಯ ವರ್ಧಕಗಳ ಕಾಯಿದೆ- 1940 ಹಾಗೂ ಫಾರ್ಮಸಿ ಕಾಯಿದೆ- 1948ನ್ನು ಉಲ್ಲಂಘಿಸಿರುವಕಾರಣಕ್ಕೆ ಔಷಧಿಗಳ ಆನ್‌ಲೈನ್ ಮಾರಾಟಕ್ಕೆ ಹೈಕೋರ್ಟ್ ಡಿಸೆಂಬರ್‌ 2018ರಲ್ಲಿ ತಡೆ ನೀಡಿತ್ತು.

ಇ-ಫಾರ್ಮಸಿಗಳು ಆನ್‌ಲೈನ್‌ನಲ್ಲಿ ಔಷಧ  ಮಾರಾಟ ಮಾಡುವುದನ್ನು ಮುಂದುವರಿಸಿದ್ದಕ್ಕಾಗಿ ಕ್ರಮ ಕೈಗೊಳ್ಳುವಂತೆ ಕೋರಿ  ಸಲ್ಲಿಸಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿ ಕೂಡ ದೆಹಲಿ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದೆ. ನ್ಯಾಯಾಲಯದ  ಆದೇಶ ಉಲ್ಲಂಘಿಸಿದ ಇ-ಫಾರ್ಮಸಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರದ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಅರ್ಜಿಯಲ್ಲಿ ಕೋರಲಾಗಿದೆ.

ಆಹಾರ ವಿತರಣಾ ಆಪ್‌ ಮೂಲಕ ಸ್ವಿಗ್ಗಿಯಂತಹ ಕಂಪೆನಿಗಳು ಆಹಾರ ಪೂರೈಸುವಂತೆ ತಾವು ಔಷಧಗಳನ್ನು ತಲುಪಿಸುತ್ತಿದ್ದು ಆನ್‌ಲೈನ್‌ನಲ್ಲಿ ಔಷಧ ಮಾರಾಟಕ್ಕೆ ಮತ್ತು ಪ್ರಿಸ್ಕ್ರಿಪ್ಷನ್ (ವೈದ್ಯರ ಸಲಹೆ ಇರುವ) ಔಷಧಿಗಳ ಮಾರಾಟಕ್ಕೆ ಪರವಾನಗಿ ಅಗತ್ಯವಿಲ್ಲ ಎಂದು ಇ-ಫಾರ್ಮಸಿಗಳು ನ್ಯಾಯಾಲಯಕ್ಕೆ ತಿಳಿಸಿವೆ.

Kannada Bar & Bench
kannada.barandbench.com