ಔಷಧ ದಾಸ್ತಾನು: ಗೌತಮ್ ಗಂಭೀರ್ ಉದ್ದೇಶ ಒಳ್ಳೆಯದಿದ್ದರೂ ಮಾಡಿದ್ದು ಕೆಡುಕು ಎಂದ ದೆಹಲಿ ಹೈಕೋರ್ಟ್

ಎಎಪಿ ಶಾಸಕರಾದ ಪ್ರೀತಿ ತೋಮರ್ ಮತ್ತು ಪ್ರವೀಣ್ ಕುಮಾರ್ ಅವರು ಕೂಡ ಆಮ್ಲಜನಕ ಸಿಲಿಂಡರ್ ಖರೀದಿಸಿದ್ದನ್ನು ಗಣನೆಗೆ ತೆಗೆದುಕೊಂಡಿರುವ ನ್ಯಾಯಾಲಯ ಈ ಕುರಿತೂ ತನಿಖೆ ನಡೆಸುವಂತೆ ಔಷಧ ನಿಯಂತ್ರಕಕ್ಕೆ ನಿರ್ದೇಶಿಸಿತು.
Gautam Gambhir, Delhi High Court
Gautam Gambhir, Delhi High Court

ಬಿಜೆಪಿ ಸಂಸದ ಗೌತಮ್‌ ಗಂಭೀರ್‌ ಅವರು ಫ್ಯಾಬಿಫ್ಲೂ ಔಷಧವನ್ನು ಅಕ್ರಮವಾಗಿ ದಾಸ್ತಾನು ಮತ್ತು ಹಂಚಿಕೆ ಮಾಡಿರುವ ಬಗ್ಗೆ ಪರಿಶೀಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ನಗರದ ಔಷಧ ನಿಯಂತ್ರಕಕ್ಕೆ ದೆಹಲಿ ಹೈಕೋರ್ಟ್‌ ಸೋಮವಾರ ನಿರ್ದೇಶನ ನೀಡಿದೆ.

ಗಂಭೀರ್‌ ಅವರು ಔಷಧ ವಿತರಿಸುತ್ತಿದ್ದ ಸಮಯದಲ್ಲಿ ಫ್ಯಾಬಿ ಫ್ಲೂ ಔಷಧ ಕೊರತೆ ಉಂಟಾಗಿತ್ತು ಎಂಬುದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ವಿಪಿನ್ ಸಾಂಘಿ ಮತ್ತು ಜಸ್ಮೀತ್ ಸಿಂಗ್ ಅವರಿದ್ದ ವಿಭಾಗೀಯ ಪೀಠ “ಅವರು (ಗೌತಮ್ ಗಂಭೀರ್) ರಾಷ್ಟ್ರೀಯ ಆಟಗಾರ ...ಅವರಿಗೆ ಇದ್ದದ್ದು ಒಳ್ಳೆಯ ಉದ್ದೇಶ ಎಂಬುದು ನಮಗೆ ಗೊತ್ತು… (ಆದರೆ) ಅದಕ್ಕಾಗಿ ಅವರು ಮಾಡಿದ್ದು ಮಾತ್ರ ಕೆಡುಕು, (ಅದು) ಉದ್ದೇಶಪೂರ್ವಕ ಅಲ್ಲದಿರಬಹುದು. ಅದನ್ನು ಮಾಡಬಾರದಿತ್ತು” ಎಂದಿತು.

ಇದೇ ವೇಳೆ ಎಎಪಿ ಶಾಸಕರಾದ ಪ್ರೀತಿ ತೋಮರ್ ಮತ್ತು ಪ್ರವೀಣ್ ಕುಮಾರ್ ಅವರು ಕೂಡ ಆಮ್ಲಜನಕ ಸಿಲಿಂಡರ್ ಖರೀದಿಸಿದ್ದನ್ನು ಗಣನೆಗೆ ತೆಗೆದುಕೊಂಡಿರುವ ನ್ಯಾಯಾಲಯ ಈ ಕುರಿತು ಕೂಡ ತನಿಖೆ ನಡೆಸುವಂತೆ ಔಷಧ ನಿಯಂತ್ರಕಕ್ಕೆ ನಿರ್ದೇಶಿಸಿತು.

“…ಉದ್ದೇಶ ಸರಿ ಇದ್ದರೂ ಆ ಪ್ರಕ್ರಿಯೆಯಲ್ಲಿ ಎಲ್ಲೆ ಮೀರಿದರೆ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳಬೇಕಾಗುತ್ತದೆ. ಉತ್ತಮ ಉದ್ದೇಶವಿದ್ದರೂ ಅವು ದುಷ್ಕೃತ್ಯಗಳು…” ಎಂದು ನ್ಯಾಯಾಲಯ ಹೇಳಿದೆ.

Also Read
ಕೋವಿಡ್ ಔಷಧ ದಾಸ್ತಾನು: ಬಿಜೆಪಿ ಸಂಸದ ಗೌತಮ್ ಗಂಭೀರ್ ಮತ್ತಿತರರನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟ್

ಗಂಭೀರ್‌ ಪ್ರಕರಣದಲ್ಲಿ ವಿತರಣೆಗೆಂದು ತೆಗೆದುಕೊಂಡಿದ್ದ 2,628 ಫ್ಯಾಬಿಫ್ಲೂ ಮಾತ್ರೆಗಳ ಸ್ಟ್ರಿಪ್‌ಗಳಲ್ಲಿ 285 ಸ್ಟ್ರಿಪ್‌ಗಳು ಉಳಿದಿದ್ದು ಅವುಗಳನ್ನು ಆರೋಗ್ಯ ಸೇವೆಗಳ ಮಹಾ ನಿರ್ದೇಶನಾಲಯಕ್ಕೆ ಒಪ್ಪಿಸಲಾಗಿದೆ. ಗೌತಮ್‌ ಗಂಭೀರ್‌ ಪ್ರತಿಷ್ಠಾನದ ಮೂಲಕ ಮಾತ್ರೆ ಖರೀದಿಗೆ ಹಣ ನೀಡಲಾಗಿತ್ತು ಎಂಬುದನ್ನು ಗಮನಿಸಿದ ನ್ಯಾಯಾಲಯ ಒಂದೇ ಪ್ರಿಸ್ಕ್ರಿಪ್ಷನ್‌ (ಔಷಧ ಚೀಟಿ) ಆಧರಿಸಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಾತ್ರೆಗಳನ್ನು ನೀಡಿದ್ದಾದರೂ ಹೇಗೆ ಎಂಬ ಕುರಿತು ವರದಿ ನೀಡುವಂತೆ ನಿಯಂತ್ರಕಕ್ಕೆ ಸೂಚಿಸಿದೆ. ವರದಿಯಲ್ಲಿ ಉಲ್ಲಂಘನೆಗಳನ್ನು ಮತ್ತು ಅದಕ್ಕೆ ಹೊಣೆಗಾರರಾದ ವ್ಯಕ್ತಿಗಳನ್ನು ಹೆಸರಿಸಬೇಕು. ಯಾರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಬೇಕು ನ್ಯಾಯಾಲಯ ತಿಳಿಸಿದೆ.

ಇದೇ ವೇಳೆ, ಗಂಭೀರ್ ಮತ್ತು ಇಬ್ಬರು ಶಾಸಕರ ವಿರುದ್ಧ "ಯಾವುದೇ ಕ್ರಮ ತೆಗೆದುಕೊಳ್ಳಬಹುದು" ಎಂದು ತಾನು ನಿರ್ದೇಶನ ನೀಡಿಲ್ಲ ಎಂಬುದನ್ನೂ ನ್ಯಾಯಾಲಯ ಸ್ಪಷ್ಟಪಡಿಸಿದೆ. ಪ್ರಕರಣದ ಸಂಬಂಧ ವಿಚಾರಣೆ/ತನಿಖೆ/ಕಾನೂನು ಕ್ರಮ ಕೈಗೊಳ್ಳಲು ಔಷಧ ನಿಯಂತ್ರಕಕ್ಕೆ ಅಗತ್ಯ ನೆರವು ನೀಡುವಂತೆ ದೆಹಲಿ ಸರ್ಕಾರಕ್ಕೆ ಪೀಠ ನಿರ್ದೇಶಿಸಿದೆ.

ಕೋವಿಡ್‌ ಔಷಧಗಳ ಅಕ್ರಮ ದಾಸ್ತಾನಿಗೆ ಸಂಬಂಧಿಸಿದಂತೆ ಗಂಭೀರ್‌ ಹಾಗೂ ಎಎಪಿಯ ಇಬ್ಬರು ಶಾಸಕರ ವಿರುದ್ಧ ಎರಡು ಪ್ರತ್ಯೇಕ ಮೊಕದ್ದಮೆಗಳನ್ನು ನ್ಯಾಯಾಲಯದಲ್ಲಿ ಹೂಡಲಾಗಿತ್ತು. ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 31ಕ್ಕೆ ನಿಗದಿಪಡಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com