ನ್ಯಾಯಮೂರ್ತಿಯವರಿಗೇ ಮರಣದಂಡನೆ ವಿಧಿಸಲು ಒತ್ತಾಯ! ನ್ಯಾಯಾಂಗ ನಿಂದನೆ ನೋಟಿಸ್ ನೀಡಿದ ದೆಹಲಿ ಹೈಕೋರ್ಟ್
ದೆಹಲಿ ಹೈಕೋರ್ಟ್‌ನ ಮಹಿಳಾ ನ್ಯಾಯಮೂರ್ತಿಯೊಬ್ಬರನ್ನು ರಕ್ಕಸಿಗೆ ಹೋಲಿಸಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು, ಮರಣದಂಡನೆ ವಿಧಿಸಬೇಕು ಎಂದು ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬನಿಗೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ಕ್ರಿಮಿನಲ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ.
ಸ್ವಾತಂತ್ರ್ಯ ದೊರೆತ ದಿನದಿಂದ ಭಾರತ ಸರ್ಕಾರ ನಡೆಸಿರುವ ಭ್ರಷ್ಟಾಚಾರದ ಕುರಿತು ತನಿಖೆ ನಡೆಸುವಂತೆ ನರೇಶ್ ಶರ್ಮಾ ಎಂಬಾತ ಸಲ್ಲಿಸಿದ್ದ ಮನವಿಯನ್ನು ಜುಲೈ 27, 2023 ರಂದು ನ್ಯಾ. ಸ್ವರಣ ಕಾಂತ ಶರ್ಮಾ ಅವರಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠ ತಿರಸ್ಕರಿಸಿತ್ತು.
ಅದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಆಗಸ್ಟ್ 31 ರಂದು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಂಜೀವ್ ನರುಲಾ ಅವರಿದ್ದ ಪೀಠದಲ್ಲಿ ನಡೆಯಿತು.
ಆಗ ಹೈಕೋರ್ಟ್‌ನ ಏಕಸದಸ್ಯ ಪೀಠ ಮತ್ತು ಸುಪ್ರೀಂ ಕೋರ್ಟ್ ಕ್ರಿಮಿನಲ್ ಕೃತ್ಯಗಳನ್ನು ಎಸಗಿರುವುದಾಗಿ ಆಧಾರರಹಿತ ಮತ್ತು ವಿಚಿತ್ರ ಆರೋಪಗಳಿರುವ ಮೂರು ಮೇಲ್ಮನವಿ ಸಲ್ಲಿಸಿದ್ದನ್ನು ವಿಭಾಗೀಯ ಪೀಠ ಪರಿಶೀಲಿಸಿತು. ಸರ್ಕಾರಿ ಅಧಿಕಾರಿಗಳನ್ನು ಗುಂಡು ಹೊಡೆದು ಸಾಯಿಸಬೇಕು ಎಂದು ಶರ್ಮಾ ಆರೋಪ ಮಾಡಿದ್ದನ್ನೂ ನ್ಯಾಯಾಲಯ ದಾಖಲಿಸಿಕೊಂಡಿತು.
ಅಂತಹ ಆರೋಪಗಳು 'ಸ್ವೀಕಾರಾರ್ಹವಲ್ಲ' ಮತ್ತು 'ಅಭಿರುಚಿಹೀನ'ವಾಗಿದ್ದು ಅವು ನ್ಯಾಯಾಲಯದ ಶಕ್ತಿಯನ್ನು ಕುಂದಿಸುವ ಗುರಿ ಹೊಂದಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 18, 2023ರಂದು ನಡೆಯಲಿದೆ.