ಉನ್ನಾವ್ ಅತ್ಯಾಚಾರ: ಸಂತ್ರಸ್ತೆ ತಂದೆ ಕಸ್ಟಡಿ ಸಾವಿನ ಪ್ರಕರಣದಲ್ಲಿ ಸೆಂಗರ್‌ಗೆ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್

ಸೆಂಗರ್ ಸೂಚನೆಯ ಮೇರೆಗೆ ಉನ್ನಾವ್ ಅತ್ಯಾಚಾರ ಪೀಡಿತೆಯ ತಂದೆಯನ್ನು ಬಂಧಿಸಲಾಗಿತ್ತು. ಪೊಲೀಸರ ಕಿರುಕುಳದಿಂದಾಗಿ ಅವರು 2018ರ ಏಪ್ರಿಲ್ 9ರಂದು ಬಂಧನದಲ್ಲಿದ್ದಾಗಲೇ ಮೃತಪಟ್ಟ ಆರೋಪ ಕೇಳಿ ಬಂದಿತ್ತು.
Kuldeep Singh Sengar, Delhi HC
Kuldeep Singh Sengar, Delhi HC
Published on

ಉನ್ನಾವ್ ಅತ್ಯಾಚಾರ ಪೀಡಿತೆಯ ತಂದೆಯು ಪೊಲೀಸರ ಬಂಧನದಲ್ಲಿದ್ದಾಗಲೇ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗರ್‌ಗೆ ದೆಹಲಿ ಹೈಕೋರ್ಟ್‌ ಸೋಮವಾರ ಆಮೀನು ನಿರಾಕರಿಸಿದೆ  [ಕುಲದೀಪ್ ಸಿಂಗ್ ಸೆಂಗರ್‌  ಮತ್ತು ಸಿಬಿಐ ನಡುವಣ ಪ್ರಕರಣ].

ಸೆಂಗರ್‌ಗೆ ವಿಧಿಸಲಾದ ಒಟ್ಟು 10 ವರ್ಷಗಳ ಶಿಕ್ಷೆಯಲ್ಲಿ ಅವರು ಸುಮಾರು 7.5 ವರ್ಷಗಳನ್ನು ಈಗಾಗಲೇ ಬಂಧನದಲ್ಲೇ ಕಳೆದಿದ್ದಾರೆ ಹಾಗೂ ಈ ಪ್ರಕರಣದಲ್ಲಿ ಅವರ ದೋಷಾರೋಪಣೆಯ ವಿರುದ್ಧದ ಮನವಿಯ ವಿಚಾರಣೆ ತೀರ್ಮಾನವಾಗುವುದರಲ್ಲಿ ವಿಳಂಬವಾಗಿದೆ. ಆದರೆ, ಆ ವಿಳಂಬಕ್ಕೆ ಭಾಗಶಃ ಸೆಂಗರ್ ಅವರೇ ಕಾರಣರಾಗಿದ್ದು, ಅವರು ಅನೇಕ ಅರ್ಜಿಗಳನ್ನು ಸಲ್ಲಿಸಿದ್ದಾಗಿ ನ್ಯಾಯಮೂರ್ತಿ ರವೀಂದರ್ ದುಡೆಜಾ ತಿಳಿಸಿದರು. ಆದ್ದರಿಂದ, ಜಾಮೀನು ನೀಡಬೇಕು ಮತ್ತು ಶಿಕ್ಷೆ ರದ್ದುಗೊಳಿಸಬೇಕು ಎಂದು ಆತ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.  ಸವಿವರವಾದ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

Also Read
ಮೆಹಮೂದ್ ಪ್ರಾಚಾ ಕಂಪ್ಯೂಟರ್ ವಶ, ಮೇಲ್ವಿಚಾರಣೆಗಾಗಿ ಅಡ್ವೊಕೇಟ್ ಕಮಿಷನರ್ ನೇಮಕ ಮಾಡಿದ ದೆಹಲಿ ನ್ಯಾಯಾಲಯ

ಸೆಂಗರ್ ಸೂಚನೆಯ ಮೇರೆಗೆ ಉನ್ನಾವ್ ಅತ್ಯಾಚಾರ ಪೀಡಿತೆಯ ತಂದೆಯನ್ನು ಬಂಧಿಸಲಾಗಿತ್ತು. ಪೊಲೀಸರ ಕಿರುಕುಳದಿಂದಾಗಿ ಅವರು 2018ರ ಏಪ್ರಿಲ್ 9ರಂದು ಬಂಧನದಲ್ಲಿದ್ದಾಗಲೇ ಮೃತಪಟ್ಟ ಆರೋಪ ಕೇಳಿ ಬಂದಿತ್ತು. ಅವರ ಸಾವಿನ ಪ್ರಕರಣದಲ್ಲಿ ಸೆಂಗರ್ ಹಾಗೂ ಇತರರರು  ದೋಷಿಗಳೆಂದು 2020ರ ಮಾರ್ಚ್‌ನಲ್ಲಿ ತೀರ್ಪು ನೀಡಿದ್ದ ದೆಹಲಿ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

ಉನ್ನಾವ್ ಅತ್ಯಾಚಾರ ಪೀಡಿತೆಯ ತಂದೆಯನ್ನು ಸೆಂಗರ್‌ನ ಸೂಚನೆಯ ಮೇರೆಗೆ ಬಂಧಿಸಲಾಗಿದ್ದು, ಪೊಲೀಸ್ ಹಿಂಸೆಯ ಪರಿಣಾಮವಾಗಿ ಅವರು 2018ರ ಏಪ್ರಿಲ್ 9ರಂದು ಪೊಲೀಸ್‌ ಕಸ್ಟಡಿಯಲ್ಲಿಯೇ ಮೃತಪಟ್ಟರು.

ಗಮನಾರ್ಹ ಅಂಶವೆಂದರೆ, ಸೆಂಗರ್‌ ಸಲ್ಲಿಸಿದ್ದ ಇದೇ ರೀತಿಯ ಮನವಿಯನ್ನು 2024ರ ಜೂನ್‌ನಲ್ಲಿ ದೆಹಲಿ ಹೈಕೋರ್ಟ್ ತಿರಸ್ಕರಿಸಿತ್ತು. ಅಪರಾಧದ ಗಂಭೀರತೆ, ಅಪರಾಧದ ಸ್ವರೂಪ, ದೋಷಿಯ ಅಪರಾಧ ಹಿನ್ನೆಲೆ ಹಾಗೂ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಸಾರ್ವಜನಿಕ ವಿಶ್ವಾಸದ ಮೇಲೆ ಬೀರುವ ಪರಿಣಾಮಗಳನ್ನು ಪರಿಗಣಿಸಿದಾಗ, ಸೆಂಗರ್‌ಗೆ ಶಿಕ್ಷೆ ರದ್ದುಗೊಳಿಸಲಾಗದು ಎಂದು ಆಗ ನ್ಯಾಯಾಲಯ ಹೇಳಿತ್ತು.

ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ 2017ರ ಜೂನ್ 20ರಂದು ಉನ್ನಾವ್‌ನ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ. ಅತ್ಯಾಚಾರದ ನಂತರ ಆಕೆಯನ್ನು ₹60,000ಕ್ಕೆ ಮಾರಾಟ ಮಾಡಲಾಗಿತ್ತು. ನಂತರ ಸೆಂಗರ್‌ನ ಸೂಚನೆಯಂತೆ ಪೊಲೀಸ್ ಅಧಿಕಾರಿಗಳು ಆಕೆಯನ್ನು ನಿರಂತರವಾಗಿ ಬೆದರಿಸಿ, ಈ ವಿಷಯ ಬಹಿರಂಗಪಡಿಸದಂತೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿತ್ತು.

ಇದೇ ಪ್ರಕರಣ ಮತ್ತೊಂದು ವಿವಾದಕ್ಕೂ ಕಾರಣವಾಗಿತ್ತು. ಸಂತ್ರಸ್ತೆ ಚಲಿಸುತ್ತಿದ್ದ ಕಾರಿಗೆ, ನಂಬರ್‌ ಪ್ಲೇಟ್‌ ಇಲ್ಲದ ಲಾರಿಯೊಂದು 2018ರಲ್ಲಿ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಸಂತ್ರಸ್ತೆ ಮತ್ತು ಆಕೆಯ ಪರ ವಕೀಲರು ತೀವ್ರವಾಗಿ ಗಾಯಗೊಂಡರೆ ಆಕೆಯ ಇಬ್ಬರು ಚಿಕ್ಕಮ್ಮಂದಿರು ಸಾವನ್ನಪ್ಪಿದ್ದರು. ಕೆಲ ದಿನಗಳ ಬಳಿಕ ಸಂತ್ರಸ್ತೆಯ ಪರ ವಕೀಲ ಕೂಡ ಮೃತಪಟ್ಟರು. ಘಟನೆಯ ಹಿಂದೆ ಸೆಂಗರ್‌ ಕೈವಾಡ ಇದೆ ಎಂದು ವಕೀಲರ ಪತ್ನಿ ದೂರಿದ್ದರು.

ಉನ್ನಾವ್‌ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ನಾಲ್ಕು ಪ್ರಕರಣಗಳ ವಿಚಾರಣೆಯನ್ನು ಆಗಸ್ಟ್ 2019ರಲ್ಲಿ, ಸುಪ್ರೀಂ ಕೋರ್ಟ್ ದೆಹಲಿಗೆ ವರ್ಗಾಯಿಸಿತ್ತು. ದಿನವಹಿ ವಿಚಾರಣೆ ನಡೆಸಿ 45 ದಿನಗಳಲ್ಲಿ ಪ್ರಕರಣ ಇತ್ಯರ್ಥಗೊಳಿಸಲು ಆದೇಶಿಸಿತ್ತು.

2019ರ ಡಿಸೆಂಬರ್‌ನಲ್ಲಿ, ಸಂತ್ರಸ್ತೆ ಅತ್ಯಾಚಾರ ಹಾಗೂ ಆಕೆಯ ತಂದೆಯ ಕಸ್ಟಡಿ ಸಾವಿನ ಪ್ರಕರಣಗಳಿಗೆ ಸಂಬಣಧಿಸಿದಂತೆ ಸೆಂಗರ್‌ ಅವರನ್ನು ದೋಷಿ ಎಂದು ಘೋಷಿಸಲಾಯಿತು. ಅತ್ಯಾಚಾರ ಪ್ರಕರಣದಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ಕಸ್ಟಡಿ ಸಾವು ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

Also Read
ಉನ್ನಾವೋ ಅತ್ಯಾಚಾರ ಪ್ರಕರಣ: ಸೆಂಗರ್‌ಗೆ ದೆಹಲಿ ಹೈಕೋರ್ಟ್ ಜಾಮೀನು

ಇತ್ತೀಚೆಗೆ, ದೆಹಲಿ ಹೈಕೋರ್ಟ್ ಅತ್ಯಾಚಾರ ಪ್ರಕರಣದಲ್ಲಿ ಸೆಂಗರ್‌ಗೆ ಜಾಮೀನು ನೀಡಿತ್ತು. ಆದರೆ, ಸಿಬಿಐ ಮೇಲ್ಮನವಿ ಸಲ್ಲಿಸಿದ  ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆ ಆದೇಶಕ್ಕೆ ತಡೆ ನೀಡಿತು.

ಕುಲದೀಪ್ ಸಿಂಗ್ ಸೆಂಗರ್‌ ಪರವಾಗಿ ಹಿರಿಯ ವಕೀಲ ಮನೀಶ್ ವಶಿಷ್ಠ್  ಮತ್ತು ಕಾನೂನು ತಂಡ ವಾದ ಮಂಡಿಸಿತು. ಸಿಬಿಐ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕಿ (ಎಸ್‌ಪಿಪಿ) ಅನುಭಾ ಭಾರದ್ವಾಜ್‌ ಮತ್ತು ತಂಡ ಹಾಜರಿತ್ತು. ಸಂತ್ರಸ್ತೆಯ ಪರವಾಗಿ ವಕೀಲರಾದ ಮೆಹಮೂದ್‌ ಪ್ರಾಚಾ, ಕ್ಷಿತಿಜ್ ಸಿಂಗ್ ಮತ್ತು ಕುಮೈಲ್ ಅಬ್ಬಾಸ್ ವಾದ ಮಂಡಿಸಿದರು.

Kannada Bar & Bench
kannada.barandbench.com