ಸಿಬಲ್ ವಿರುದ್ಧದ ಬರ್ಖಾರ ಕ್ರಿಮಿನಲ್‌ ಪ್ರಕರಣವನ್ನು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾಯಿಸಿದ ದೆಹಲಿ ಹೈಕೋರ್ಟ್

ಕಳೆದ ವರ್ಷ ಬರ್ಖಾ ದತ್‌ ಅವರು ಕಪಿಲ್‌ ಸಿಬಲ್‌, ಪ್ರಮೀಳಾ ಸಿಬಲ್‌ ಮತ್ತು ಅವರ ಟಿವಿ ನೆಟ್‌ವರ್ಕ್‌ ಕಂಪೆನಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 ಜೊತೆಗೆ ಸೆಕ್ಷನ್ 120B ಅಡಿ ದೂರು ದಾಖಲಿಸಿದ್ದರು.
Kapil Sibal and Barkha Dutt
Kapil Sibal and Barkha Dutt
Published on

ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ವಕೀಲ ಕಪಿಲ್‌ ಸಿಬಲ್‌ ವಿರುದ್ಧ ಹಿರಿಯ ಪತ್ರಕರ್ತೆ ಬರ್ಖಾ ದತ್‌ ದಾಖಲಿಸಿರುವ ಕ್ರಿಮಿನಲ್‌ ಪ್ರಕರಣವನ್ನು ದೆಹಲಿಯ ರೌಸ್‌ ಅವೆನ್ಯೂ ನ್ಯಾಯಾಲಯ ಸಂಕೀರ್ಣದಲ್ಲಿರುವ ಸಂಸದರು/ಶಾಸಕರ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸುವ ಸಂಬಂಧ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಅನೂಪ್‌ ಜೆ ಭಂಭಾನಿ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶ ಹೊರಡಿಸಿದೆ (ಬರ್ಖಾ ದತ್‌ ವರ್ಸಸ್‌ ಅನಲಾಗ್‌ ಮೀಡಿಯಾ).

“… ಪ್ರಕರಣದಲ್ಲಿನ ಪ್ರತಿವಾದಿ/ಆರೋಪಿಯೊಬ್ಬರು ಹಾಲಿ ಸಂಸದರಾಗಿದ್ದು, ಅವರ ವಿರುದ್ಧದ ಕ್ರಿಮಿನಲ್‌ ದೂರು ಸಿ ಟಿ ನಂ. 9933/2019 (ಹಳೆಯ ಸಿಸಿ ನಂಬರ್‌ 395/1/2019) ಅನ್ನು ದೆಹಲಿಯಲ್ಲಿನ ಪಟಿಯಾಲ ಹೌಸ್‌ ಕೋರ್ಟ್‌ಗಳ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ನಿಂದ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸಲು ಆರಂಭಿಸಲಾಗಿರುವ ನ್ಯಾಯಾಲಯದ ಸಂಬಂಧಿತರಿಗೆ ದೆಹಲಿಯ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರು ವರ್ಗಾಯಿಸಲಿದ್ದಾರೆ” ಎಂದು ಪೀಠ ಹೇಳಿದೆ.

ಪ್ರಸಕ್ತ ವರ್ಷದ ಆರಂಭದಲ್ಲಿ ಪ್ರಕರಣದ ವರ್ಗಾವಣೆಗೆ ಸಂಬಂಧಿಸಿದಂತೆ ನೋಟಿಸ್‌ ಜಾರಿಗೊಳಿಸಿದ್ದು, ಪಟಿಯಾಲ ಹೌಸ್‌ ಕೋರ್ಟ್‌ನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಕಚೇರಿ ಟಿಪ್ಪಣಿ ಕಳುಹಿಸಿಕೊಟ್ಟಿದ್ದ ಹಿನ್ನೆಲೆಯಲ್ಲಿ ವಿಚಾರಣೆಗೆ ಕೈಗೆತ್ತುಕೊಂಡಿತ್ತು.

ಅನಲಾಗ್‌ ಮೀಡಿಯಾದ ತಿರಂಗಾ ಟಿವಿಯನ್ನು ಅಕಾಲಿಕವಾಗಿ ಮುಚ್ಚಿದ ಹಿನ್ನೆಲೆಯಲ್ಲಿ ಕಳೆದ ವರ್ಷ ಬರ್ಖಾ ದತ್‌ ಅವರು ಕಪಿಲ್‌ ಸಿಬಲ್‌, ಪ್ರಮೀಳಾ ಸಿಬಲ್‌ ಮತ್ತು ಅವರ ಟಿವಿ ನೆಟ್‌ವರ್ಕ್‌ ಕಂಪೆನಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 420 ಜೊತೆಗೆ ಸೆಕ್ಷನ್‌ 120B ಅಡಿ ದೂರು ದಾಖಲಿಸಿದ್ದರು.

Also Read
ಐದು ವರ್ಷಕ್ಕಿಂತ ಹೆಚ್ಚು ಶಿಕ್ಷೆಯ ಆರೋಪಪಟ್ಟಿ ಸಲ್ಲಿಕೆಯಾದ ಜನಪ್ರತಿನಿಧಿಗಳ ಅನರ್ಹತೆ: ಅರ್ಜಿ ತಿರಸ್ಕರಿಸಿದ ಸುಪ್ರೀಂ

2019ರ ಲೋಕಸಭಾ ಚುನಾವಣೆಯ ಬಳಿಕವೂ ಚಾನೆಲ್‌ ನಡೆಸಲಾಗುವುದು ಎಂಬ ಒಪ್ಪಂದ ಕಟ್ಟುಪಾಡುಗಳನ್ನು ಸಿಬಲ್ ಉಲ್ಲಂಘಿಸಿದ್ದಾರೆ ಎಂದು ಬರ್ಖಾ ದತ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪಟಿಯಾಲ ಹೌಸ್ ಕೋರ್ಟ್‌ನ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ನಲ್ಲಿ ದೂರು ದಾಖಲಿಸಲಾಗಿತ್ತು. ಆ ಬಳಿಕ ಪ್ರಕರಣವನ್ನು ಸಂಸದ/ಶಾಸಕರ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಮನವಿ ಸಲ್ಲಿಸಲಾಗಿತ್ತು.

ಮನವಿಗೆ ಸಂಬಂಧಿಸಿದಂತೆ ಆದೇಶ ಹೊರಡಿಸುವ ಕುರಿತು ಪಟಿಯಾಲ ಹೌಸ್‌ ಕೋರ್ಟ್‌ನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರು ಹೈಕೋರ್ಟ್‌ಗೆ ಕಚೇರಿ ಟಿಪ್ಪಣಿ ಕಳುಹಿಸಿಕೊಟ್ಟಿದ್ದರು. ಸಂಸದ/ಶಾಸಕರ ವಿಶೇಷ ನ್ಯಾಯಾಲಯಕ್ಕೆ ಪ್ರಕರಣದ ವರ್ಗಾವಣೆಯು ಅಂತರ-ಸೆಷನ್ಸ್‌ ವಿಭಾಗೀಯ ವರ್ಗಾವಣೆಯಾಗುವುದರಿಂದ ಅದರ ನಿರ್ಧಾರವನ್ನು ಹೈಕೋರ್ಟ್‌ ತೆಗೆದುಕೊಳ್ಳಬೇಕು ಎಂದು ಪಟಿಯಾಲ ಹೌಸ್‌ ಕೋರ್ಟ್‌ನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರು ಹೇಳಿದ್ದರು. ಪ್ರಕರಣವು ಸಮನ್ಸ್‌ ಪೂರ್ವ ಹಂತದಲ್ಲಿದ್ದು, ವಕೀಲರಾದ ರಾಘವ್‌ ಅವಸ್ಥಿ ಮತ್ತು ಮುಕೇಶ್‌ ಶರ್ಮಾ ಅವರ ಮೂಲಕ ಮೊಕದ್ದಮೆ ದಾಖಲಿಸಲಾಗಿದೆ.

Kannada Bar & Bench
kannada.barandbench.com