ತಮ್ಮ ಪ್ರಕರಣವನ್ನು ಕೋಲ್ಕತ್ತಾದಿಂದ ದೆಹಲಿಗೆ ವರ್ಗಾಯಿಸಿದ್ದ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಯ (ಸಿಎಟಿ) ಪ್ರಧಾನ ಪೀಠದ ಆದೇಶ ಪ್ರಶ್ನಿಸಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯ ಕಾರ್ಯದರ್ಶಿ ಅಲಾಪನ್ ಬಂಡೋಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. [ಆಲಾಪನ್ ಬಂಡೋಪಾಧ್ಯಾಯ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ವಿಭಾಗೀಯ ಪೀಠ ಫೆಬ್ರವರಿ 25 ರಂದು ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿತ್ತು.
“ಸಿಎಟಿ ಆದೇಶದಲ್ಲಿ ಮಧ್ಯಪ್ರವೇಶಿಸಲು ಈ ನ್ಯಾಯಾಲಯಕ್ಕೆ ಯಾವುದೇ ಕಾರಣ ಕಂಡುಬಂದಿಲ್ಲ. ಅರ್ಜಿಯನ್ನು ವಜಾಗೊಳಿಸಲಾಗಿದೆ. ಶಿಸ್ತುಕ್ರಮದ ಬಗ್ಗೆ ಮತ್ತು ಅಂತಹ ಪ್ರಕ್ರಿಯೆ ಆರಂಭಿಸುವ ಕೇಂದ್ರ ಸರ್ಕಾರದ ಅರ್ಹತೆ ಬಗ್ಗೆ ನ್ಯಾಯಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ” ಎಂದು ಪೀಠ ಹೇಳಿದೆ.
ಯಾಸ್ ಚಂಡಮಾರುತದ ಕುರಿತು ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಗೆ ತಡವಾಗಿ ಬಂದ ಆರೋಪದ ಮೇಲೆ ಕೇಂದ್ರ ಸರ್ಕಾರ ತಮ್ಮ ವಿರುದ್ಧ ಆರಂಭಿಸಿರುವ ಶಿಸ್ತು ಕ್ರಮ ಪ್ರಶ್ನಿಸಿದ್ದ ಅಲಾಪನ್ ಅವರ ಪ್ರಕರಣವನ್ನು ಸಿಎಟಿ ಅಧ್ಯಕ್ಷರು ಕೋಲ್ಕತ್ತಾದಿಂದ ದೆಹಲಿಗೆ ವರ್ಗಾಯಿಸಿದ್ದರು.