ಪಶ್ಚಿಮ ಬಂಗಾಳದ ಮಾಜಿ ಮುಖ್ಯ ಕಾರ್ಯದರ್ಶಿ ಅಲಾಪನ್ ಬಂಡೋಪಾಧ್ಯಾಯ ಅವರು ತಮ್ಮ ಪ್ರಕರಣವನ್ನು ಕೋಲ್ಕತ್ತಾದಿಂದ ದೆಹಲಿಗೆ ವರ್ಗಾಯಿಸುವ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಯ (ಸಿಎಟಿ) ಪ್ರಧಾನ ಪೀಠದ ಆದೇಶ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ [ಆಲಪನ್ ಬಂಡೋಪಾಧ್ಯಾಯ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಸಿಎಟಿಯ ಪ್ರಧಾನ ಪೀಠವು ನೀಡಿದ ಆದೇಶವು ಸಹಜ ನ್ಯಾಯ, ಸಮಾನತೆ ಹಾಗೂ ನ್ಯಾಯೋಚಿತ ಕ್ರಮದ ತತ್ವಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ. ಏಕೆಂದರೆ ಸಿಎಟಿ ವಿಚಾರಣೆಗಾಗಿ ಪಟ್ಟಿ ಪ್ರಕಟಿಸಿದ ಮೊದಲ ದಿನ ಪುರಸ್ಕರಿಸಿದ್ದ ಕೇಂದ್ರ ಸರ್ಕಾರದ ವರ್ಗಾವಣೆ ಅರ್ಜಿಗೆ ಲಿಖಿತ ಆಕ್ಷೇಪಣೆಗಳನ್ನು ಸಲ್ಲಿಸುವ ಹಕ್ಕನ್ನು ಸಹ ತಮಗೆ ನೀಡಲಾಗಿಲ್ಲ ಎಂದು ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಲಾಗಿದೆ.
"ಅರ್ಜಿದಾರರು ಪಶ್ಚಿಮ ಬಂಗಾಳ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿಯಾಗಿದ್ದು 31 ಮೇ 2021ರಂದು ನಿವೃತ್ತರಾಗಿದ್ದಾರೆ. ಅರ್ಜಿದಾರರು ಶಾಶ್ವತವಾಗಿ ಕೋಲ್ಕತ್ತಾದಲ್ಲಿ ವಾಸಿಸುತ್ತಿದ್ದಾರೆ. ಅರ್ಜಿದಾರರು ಕೋಲ್ಕತ್ತಾ ಪೀಠದ ಮುಂದೆ ಮೂಲ ಅರ್ಜಿಯನ್ನು ಸಲ್ಲಿಸಲು ಕೇಂದ್ರೀಯ ಆಡಳಿತ ನ್ಯಾಯಮಂಡಳಿ (ಕಾರ್ಯವಿಧಾನ) ನಿಯಮಗಳು, 1987 ರ ನಿಯಮ 6 (2) ರ ಅಡಿಯಲ್ಲಿ ಹಕ್ಕು ನೀಡಿರಲಿಲ್ಲ. ಇದಲ್ಲದೆ, ಮೂಲ ಅರ್ಜಿಗೆ ಸಂಬಂಧಿಸಿದಂತೆ ಕ್ರಮದ ಸಂಪೂರ್ಣ ಕಾರಣ ಮತ್ತು ತಮ್ಮ ವಿರುದ್ಧದ ಶಿಸ್ತಿನ ಪ್ರಕ್ರಿಯೆಗಳು ಕೋಲ್ಕತ್ತಾ ಪೀಠದ ವ್ಯಾಪ್ತಿಯಲ್ಲಿ ಸಂಭವಿಸಿವೆ" ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಸಿಎಟಿಯ ಆದೇಶ ರದ್ದುಗೊಳಿಸಿದ ಕಲ್ಕತ್ತಾ ಹೈಕೋರ್ಟ್ ತೀರ್ಪನ್ನು ಬದಿಗೆ ಸರಿಸಿ ಈ ತಿಂಗಳ ಆರಂಭದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ಆದೇಶದ ನಂತರ ಈ ಮನವಿ ಸಲ್ಲಿಸಲಾಗಿದೆ.