ದೆಹಲಿ ಪೊಲೀಸ್‌ ಆಯುಕ್ತರನ್ನಾಗಿ ರಾಕೇಶ್‌ ಆಸ್ಥಾನಾ ನೇಮಕ ಪ್ರಶ್ನಿಸಿದ್ದ ಮನವಿ ವಜಾ ಮಾಡಿದ ಹೈಕೋರ್ಟ್‌

ದೆಹಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ಎನ್‌ ಪಟೇಲ್‌ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್‌ ನೇತೃತ್ವದ ವಿಭಾಗೀಯ ಪೀಠವು ಸುದೀರ್ಘವಾಗಿ ವಿಚಾರಣೆ ನಡೆಸಿದ ಬಳಿಕ ಸೆಪ್ಟೆಂಬರ್‌ 27ರಂದು ತೀರ್ಪು ಕಾಯ್ದಿರಿಸಿತ್ತು.
Rakesh Asthana, Delhi High Court
Rakesh Asthana, Delhi High Court

ದೆಹಲಿ ಪೊಲೀಸ್‌ ಆಯುಕ್ತರಾಗಿರುವ ಹಿರಿಯ ಐಪಿಎಸ್‌ ಅಧಿಕಾರಿ ರಾಕೇಶ್‌ ಆಸ್ಥಾನಾ ನೇಮಕಾತಿ ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ದೆಹಲಿ ಹೈಕೋರ್ಟ್‌ ಮಂಗಳವಾರ ವಜಾ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಡಿ ಎನ್‌ ಪಟೇಲ್‌ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್‌ ನೇತೃತ್ವದ ವಿಭಾಗೀಯ ಪೀಠವು ಸುದೀರ್ಘವಾಗಿ ವಿಚಾರಣೆ ನಡೆಸಿದ ಬಳಿಕ ಸೆಪ್ಟೆಂಬರ್‌ 27ರಂದು ತೀರ್ಪು ಕಾಯ್ದಿರಿಸಿತ್ತು.

ಅರ್ಜಿದಾರ ಸಾದ್ರೆ ಆಲಂ ಅವರನ್ನು ವಕೀಲ ಬಿ ಎಸ್‌ ಬಗ್ಗಾ ಪ್ರತಿನಿಧಿಸಿದ್ದರು. ಸರ್ಕಾರೇತರ ಸಂಸ್ಥೆ ಪಿಐಎಲ್‌ ಕೇಂದ್ರದ (ಸಿಪಿಐಎಲ್‌) ಪರವಾಗಿ ಸಲ್ಲಿಸಲಾಗಿದ್ದ ಮಧ್ಯಪ್ರವೇಶಿಕೆ ಮನವಿಯನ್ನು ವಕೀಲ ಪ್ರಶಾಂತ್‌ ಭೂಷಣ್‌ ವಾದಿಸಿದರು.

ಪ್ರಕಾಶ್‌ ಸಿಂಗ್‌ ವರ್ಸಸ್‌ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿಗೆ ವಿರುದ್ಧವಾಗಿ ಆಸ್ಥಾನಾ ಅವರನ್ನು ಕೇಂದ್ರ ಸರ್ಕಾರವು ನೇಮಕ ಮಾಡಿದೆ. ತೀರ್ಪಿನ ಪ್ರಕಾರ ಆಯುಕ್ತರನ್ನು ಎರಡು ವರ್ಷಕ್ಕೆ ನೇಮಕ ಮಾಡಬೇಕು. ಆದರೆ, ಒಂದು ವರ್ಷಕ್ಕೆ ಮಾತ್ರ ನೇಮಕಾತಿ ಮಾಡಲಾಗಿದೆ. ಪೊಲೀಸ್‌ ಆಯುಕ್ತರನ್ನಾಗಿ ನೇಮಕ ಮಾಡುವಾಗ ಅವರಿಗೆ ಇನ್ನೂ ಆರು ತಿಂಗಳ ಸೇವಾವಧಿ ಇದೆ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಆದರೆ, ಇದಾವುದನ್ನೂ ಪಾಲಿಸಲಾಗಿಲ್ಲ ಎಂದು ವಾದಿಸಲಾಗಿತ್ತು.

ಪ್ರಕಾಶ್‌ ಸಿಂಗ್‌ ಪ್ರಕರಣದ ತೀರ್ಪು ರಾಜ್ಯಗಳ ಪೊಲೀಸ್‌ ಮಹಾನಿರ್ದೇಶಕರಿಗೆ ಅನ್ವಯಿಸುತ್ತದೆಯೇ ವಿನಾ ದೆಹಲಿ ಪೊಲೀಸ್‌ ಆಯುಕ್ತರಿಗೆ ಅನ್ವಯಿಸುವುದಿಲ್ಲ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದಿಸಿದ್ದರು. ಆಸ್ಥಾನಾ ಅವರಿಗೆ ಅನುಭವ ಇದ್ದುದರಿಂದ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಅವರನ್ನು ನೇಮಕ ಮಾಡಲಾಗಿದೆ ಎಂದು ವಿವರಿಸಿದ್ದರು.

Also Read
ಸುಪ್ರೀಂನ ʼಸೂಕ್ತ ʼಪೀಠದಿಂದ ದೆಹಲಿ ಪೊಲೀಸ್‌ ಆಯುಕ್ತ ರಾಕೇಶ್‌ ಆಸ್ಥಾನಾ ನೇಮಕಾತಿ ವಜಾ ಕೋರಿರುವ ಮನವಿ ವಿಚಾರಣೆ

ಸಿಪಿಐಎಲ್‌ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಮನವಿಯನ್ನು ಅರ್ಜಿದಾರರು ನಕಲು ಮಾಡಿದ್ದಾರೆ ಎಂಬ ವಿವಾದವು ಈ ಮಧ್ಯೆ ತಲೆ ಎತ್ತಿತು. ಹೀಗಾಗಿ, ಅರ್ಜಿಯ ಕೃತಿಚೌರ್ಯವು ಕಾನೂನಿನ ದುರ್ಬಳಕೆಯಾಗಿದ್ದು, ಇದರಲ್ಲಿ ವೈಯಕ್ತಿಕ ಹಿತಾಸಕ್ತಿ ಅಡಗಿದೆ ಎಂದು ನ್ಯಾಯಾಲಯಕ್ಕೆ ತುಷಾರ್‌ ಮೆಹ್ತಾ ವಿವರಿಸಿದ್ದರು.

ಆಸ್ಥಾನಾ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ಅವರು ಆಲಂ ಸಲ್ಲಿಸಿರುವ ಮನವಿಯು ನಕಲಾಗಿದ್ದು ಅಸಲಿತನದಿಂದ ಕೂಡಿಲ್ಲ ಎಂದು ವಿರೋಧಿಸಿದ್ದರು. ಆಸ್ಥಾನಾ ವಿರುದ್ಧ ವಕೀಲ ಪ್ರಶಾಂತ್‌ ಭೂಷಣ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಅಪಪ್ರಚಾರ ನಡೆಸಿದ್ದು, ಇದು ದುರುದ್ದೇಶಪೂರಿತವಾಗಿದೆ ಎಂದು ವಾದಿಸಿದ್ದರು.

Related Stories

No stories found.
Kannada Bar & Bench
kannada.barandbench.com