ಉದ್ದವ್ ಬಣಕ್ಕೆ ಪಂಜಿನ ಚಿಹ್ನೆ ನೀಡಿದ್ದನ್ನು ಪ್ರಶ್ನಿಸಿದ್ದ ಸಮತಾ ಪಕ್ಷದ ಮನವಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

ಸಮತಾ ಪಕ್ಷ 2004ರಲ್ಲಿ 'ಮಾನ್ಯತೆ ಪಡೆದ ಪಕ್ಷ' ಎಂಬ ಸ್ಥಾನಮಾನ ಕಳೆದುಕೊಂಡಿದ್ದು ಅದು ಆಕ್ಷೇಪಿಸಿರುವ ಚಿಹ್ನೆಯ ಮೇಲೆ ಯಾವುದೇ ಹಕ್ಕು ಸಾಬೀತುಪಡಿಸಲು ವಿಫಲವಾಗಿದೆ ಎಂದು ಪೀಠ ತಿಳಿಸಿದೆ.
ಉದ್ದವ್ ಬಣಕ್ಕೆ ಪಂಜಿನ ಚಿಹ್ನೆ ನೀಡಿದ್ದನ್ನು ಪ್ರಶ್ನಿಸಿದ್ದ ಸಮತಾ ಪಕ್ಷದ ಮನವಿ ವಜಾಗೊಳಿಸಿದ ದೆಹಲಿ ಹೈಕೋರ್ಟ್
A1

ಶಿವಸೇನೆಯ ಉದ್ಧವ್‌ ಠಾಕ್ರೆ ಬಣಕ್ಕೆ ಚುನಾವಣಾ ಚಿಹ್ನೆಯಾಗಿ ಪಂಜಿನ ಗುರುತನ್ನು ನೀಡಿರುವ ಚುನಾವಣಾ ಆಯೋಗದ ನಿರ್ಧಾರ ಪ್ರಶ್ನಿಸಿ ಸಮತಾ  ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.

ಸಮತಾ ಪಕ್ಷ 2004ರಲ್ಲಿ 'ಮಾನ್ಯತೆ ಪಡೆದ ಪಕ್ಷ' ಎಂಬ ಸ್ಥಾನಮಾನ ಕಳೆದುಕೊಂಡಿದ್ದು ತಾನು ಆಕ್ಷೇಪಿಸಿರುವ ಚಿಹ್ನೆಯ ಮೇಲೆ ಯಾವುದೇ  ಹಕ್ಕು ಸಾಬೀತುಪಡಿಸಲು ಅದು ವಿಫಲವಾಗಿದೆ ಎಂದು ನ್ಯಾಯಮೂರ್ತಿ ಸಂಜೀವ್ ನರುಲಾ ಅವರಿದ್ದ ಏಕಸದಸ್ಯ ಪೀಠ ತಿಳಿಸಿದೆ.

ಸಮತಾ ಪಕ್ಷವನ್ನು ಮೊದಲಿಗೆ 1994ರಲ್ಲಿ ಕೇಂದ್ರದ ಮಾಜಿ ಸಚಿವ ಸಚಿವ ಜಾರ್ಜ್ ಫರ್ನಾಂಡಿಸ್ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ಥಾಪಿಸಿದ್ದರು. ಈಗ  ಉದಯ್ ಮಂಡಲ್‌ ಅವರು ಅದರ ಚುಕ್ಕಾಣಿ ಹಿಡಿದಿದ್ದಾರೆ.

ಜನತಾದಳದ ಭಾಗವಾಗಿದ್ದ ಸಮತಾಪಕ್ಷ 2003ರಲ್ಲಿ ಸಂಯುಕ್ತ ಜನತಾದಳದೊಂದಿಗೆ ವಿಲೀನಗೊಂಡಿತು. ಆದರೂ ಕೆಲ ನಾಯಕರು ಪಕ್ಷದ ಹೆಸರು ಮತ್ತು ಚಿಹ್ನೆಯೊಂದಿಗೆ ಮುಂದುವರೆದರು. ಅಂತಿಮವಾಗಿ 2004ರಲ್ಲಿ ಭಾರತೀಯ ಚುನಾವಣಾ ಆಯೋಗ ಅದನ್ನು ಅಮಾನ್ಯಗೊಳಿಸಿದ ಪರಿಣಾಮ ಚಿಹ್ನೆ ಕಳೆದುಕೊಂಡಿತು.

Also Read
ಶಿವಸೇನಾ ಚಿಹ್ನೆ, ಹೆಸರು ಬಳಕೆಗೆ ತಡೆ: ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ದೆಹಲಿ ಹೈಕೋರ್ಟ್‌ಗೆ ಉದ್ಧವ್ ಅರ್ಜಿ

ಕೆಲ ದಿನಗಳ ಹಿಂದೆ ಚುನಾವಣಾ ಆಯೋಗ ಶಿವಸೇನೆಯ ಉದ್ಧವ್‌ ಬಣಕ್ಕೆ ಪಂಜಿನ ಚಿಹ್ನೆ ನೀಡಿತ್ತು. ಉದ್ಧವ್‌ ಅವರ ಪಕ್ಷ ಈಗ ಇದೇ ಚಿಹ್ನೆಯಡಿ ಅಂಧೇರಿ ಪೂರ್ವ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಸ್ಪರ್ಧಿಸಲಿದೆ.

ಒಂದು ವೇಳೆ ಪಕ್ಷಕ್ಕೆ ಚಿಹ್ನೆಯ ಮೇಲೆ ಯಾವುದಾದರೂ ಹಕ್ಕು ಇದ್ದರೆ ಚುನಾವಣಾ ಚಿಹ್ನೆಗಳ (ಮೀಸಲಾತಿ ಮತ್ತು ಹಂಚಿಕೆ) ಆದೇಶದ ಸೆಕ್ಷನ್ 10 (ಎ) ಪ್ರಕಾರ ಪಕ್ಷ ಮಾನ್ಯತೆ ಕಳೆದುಕೊಂಡ ಆರು ವರ್ಷ ಬಳಿಕ ಅದೂ ಕೊನೆಗೊಳ್ಳುತ್ತದೆ ಎಂದು ತಿಳಿಸಿದೆ.  2014ರಲ್ಲಿ ಪಕ್ಷ ಅದೇ ಚಿಹ್ನೆ ಮೇಲೆ ಸ್ಪರ್ಧಿಸಿದ್ದರೂ ಹಕ್ಕು ಸಾಧಿಸಲು ಸಾಧ್ಯವಿರಲಿಲ್ಲ ಎಂದಿರುವ ನ್ಯಾಯಾಲಯ ಪಂಜು ಚಿಹ್ನೆಯನ್ನು ಉದ್ಧವ್‌ ಬಣಕ್ಕೆ ನೀಡುವ ಮೊದಲು ತಮಗೆ ಚುನಾವಣಾ ಆಯೋಗ ನೋಟಿಸ್‌ ನೀಡಬೇಕಿತ್ತು ಎಂಬ ಪಕ್ಷದ ವಾದವನ್ನು ಕೂಡ ತಿರಸ್ಕರಿಸಿದೆ.

ಸಮತಾ ಪಕ್ಷವು 2009, 2014, 2019ರ ಚುನಾವಣೆಗಳಲ್ಲಿ ಸ್ಪರ್ಧಿಸಿತ್ತಾದರೂ ಯಾವುದೇ ಸೀಟು ಗೆದ್ದಿರಲಿಲ್ಲ. 2019 ಮತ್ತು 2020ರಲ್ಲಿ ಅದು ಬೇರೆ ಚಿಹ್ನೆಗಳಡಿ ಸ್ಪರ್ಧಿಸಿತ್ತು.

Related Stories

No stories found.
Kannada Bar & Bench
kannada.barandbench.com