ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಪಂದ್ಯಾವಳಿಯನ್ನು ಅಕ್ರಮವಾಗಿ ಪ್ರಸಾರ ಮಾಡದಂತೆ ಕೆಲ ನಕಲಿ ಜಾಲತಾಣಗಳಿಗೆ ನಿರ್ಬಂಧ ವಿಧಿಸಿ ದೆಹಲಿ ಹೈಕೋರ್ಟ್ ಇತ್ತೀಚೆಗೆ ವಯಾಕಾಮ್ 18 ಪರವಾಗಿ ಡೈನಾಮಿಕ್ ಪ್ಲಸ್ ನಿರ್ಬಂಧಕ ಆದೇಶ ನೀಡಿದೆ (ವಯಾಕಾಮ್ 18 ಮೀಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಅನಾಮಧೇಯ ಪಕ್ಷಕಾರರು ಇನ್ನಿತರರ ನಡುವಣ ಪ್ರಕರಣ).
ಕೃತಿಸ್ವಾಮ್ಯ ಇರುವ ಕೃತಿಗಳಿಗೆ ಅವುಗಳು ಸೃಷ್ಟಿಯಾದ ಕೂಡಲೇ ರಕ್ಷಣೆ ನೀಡುವ ಸಲುವಾಗಿ ಜೊತೆಗೆ ಕೃತಿಕಾರರು ಮತ್ತು ಮಾಲೀಕರಿಗೆ ಯಾವುದೇ ಸರಿಪಡಿಸಲಾಗದಂತಹ ನಷ್ಟ ಉಂಟಾಗದಂತೆ ನೋಡಿಕೊಳ್ಳಲು ಡೈನಾಮಿಕ್ ಪ್ಲಸ್ ತಡೆಯಾಜ್ಞೆ ನೀಡಲಾಗುತ್ತದೆ.
ಐಪಿಎಲ್ ಪಂದ್ಯಾವಳಿಗಳು ಅಲ್ಪಾವಧಿಯದ್ದಾಗಿರುವುದರಿಂದ ನಕಲಿ ಜಾಲತಾಣಗಳ ಬಳಕೆ ನಿರ್ಬಂಧಿಸುವಲ್ಲಿ ಯಾವುದೇ ವಿಳಂಬ ಉಂಟುಮಾಡಿದರೆ ಅದರಿಂದ ವಯಾಕಾಮ್ 18 ಗಮನಾರ್ಹ ಆರ್ಥಿಕ ನಷ್ಟ ಅನುಭವಿಸಲು ಕಾರಣವಾಗಬಹುದು ಎಂದ ನ್ಯಾಯಮೂರ್ತಿ ಸಂಜೀವ್ ನರುಲಾ ಈ ಆದೇಶ ಹೊರಡಿಸಿದ್ದಾರೆ.
ಪ್ರಸಾರ ಹಕ್ಕುಗಳಲ್ಲಿ ವಯಾಕಾಮ್ ಮಾಡಿರುವ ಹೂಡಿಕೆಗೆ ರಕ್ಷಣೆ ಒದಗಿಸಲು ಮತ್ತು ಅದರ ಕೃತಿಸ್ವಾಮ್ಯತ್ವ ಉಳಿಸಿಕೊಳ್ಳಲು ಅಂತಹ ಉಲ್ಲಂಘನೆಯನ್ನು ತ್ವರಿತವಾಗಿ ನಿರ್ಬಂಧಿಸುವುದು ನಿರ್ಣಾಯಕ ಎಂದು ನ್ಯಾಯಾಲಯ ಹೇಳಿದೆ.
ಹೀಗಾಗಿ ವಯಾಕಾಮ್ 18 ರ ಮೊಕದ್ದಮೆಯಲ್ಲಿ ಆಕ್ಷೇಪಿಸಲಾದ ಜಾಲತಾಣಗಳ ಬಳಕೆ ನಿರ್ಬಂಧಿಸಲು ವಿವಿಧ ಅಂತರ್ಜಾಲ ಸೇವಾ ಪೂರೈಕೆದಾರರಿಗೆ ಆದೇಶಿಸಲಾಗಿದೆ.
ನಕಲಿ ಜಾಲತಣಾಗಳನ್ನು ನಿರ್ಬಂಧಿಸಿ ಅವುಗಳ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಲು ನ್ಯಾಯಾಲಯ ಡೊಮೇನ್ ಹೆಸರು ನೋಂದಣಿದಾರರಿಗೆ ಸೂಚಿಸಿದೆ.
ವಯಾಕಾಮ್ 18 ಓವರ್-ದಿ-ಟಾಪ್ (ಒಟಿಟಿ) ವೇದಿಕೆ ಜಿಯೋ ಸಿನೆಮಾವನ್ನು ಹೊಂದಿದ್ದು 2023ರಿಂದ 2027ರವರೆಗೆ ನಡೆಯುವ ಐಪಿಎಲ್ ಪಂದ್ಯಾವಳಿಗಳ ಪ್ರಸಾರಕ್ಕೆ ಸಂಬಂಧಿಸಿದಂತೆ ಭಾರತೀಯ ಉಪಖಂಡದ ವಿಶೇಷ ಡಿಜಿಟಲ್ ಮಾಧ್ಯಮ ಹಕ್ಕು ಮತ್ತು ಸಾಗರೋತ್ತರ ಟಿವಿ ಹಕ್ಕುಗಳನ್ನು ಪಡೆದುಕೊಂಡಿದೆ.
ಐಪಿಎಲ್ ಪಂದ್ಯಗಳನ್ನು ಅಕ್ರಮವಾಗಿ ಪ್ರಸಾರ ಮಾಡುವ ಹಲವಾರು ನಕಲಿ ಜಾಲತಾಣಗಳಿವೆ ಎಂದು ದೂರಿ ಅದು ಹೈಕೋರ್ಟ್ ಮೆಟ್ಟಿಲೇರಿತ್ತು.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]