
ಸಿದ್ಧಉಡುಪು ತಯಾರಿಕೆ ಕಂಪೆನಿ ಲೈಫ್‌ಸ್ಟೈಲ್ ಈಕ್ವಿಟೀಸ್‌ಗೆ ಸೇರಿದ 'ಬೆವರ್ಲಿ ಹಿಲ್ಸ್ ಪೊಲೊ ಕ್ಲಬ್'ನ ವಾಣಿಜ್ಯ ಚಿಹ್ನೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ-ವಾಣಿಜ್ಯ ದೈತ್ಯ ಅಮೆಜಾನ್ ₹340 ಕೋಟಿ ಪಾವತಿಸುವಂತೆ ದೆಹಲಿ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.
ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರು ಆದೇಶ ಹೊರಡಿಸಿದ್ದಾರೆ. ಅಮೆಜಾನ್‌ನ ಜಾಲತಾಣಗಳಲ್ಲಿ ಮಾರಾಟವಾಗುವ ಉಡುಪು ಮತ್ತಿತರ ಉತ್ಪನ್ನಗಳಿಗೆ ತನ್ನ "ಬೆವರ್ಲಿ ಹಿಲ್ಸ್ ಪೋಲೊ ಕ್ಲಬ್" ಲೋಗೊ ಅಥವಾ ಡಿವೈಸ್ ಮಾರ್ಕ್‌ಗಳನ್ನು ಬಳಸಲಾಗಿದೆ ಎಂದು ದೂರಿ 2020 ರಲ್ಲಿ, ಲೈಫ್‌ಸ್ಟೈಲ್ ಈಕ್ವಿಟೀಸ್ ಸಿವಿ ಮೊಕದ್ದಮೆ ಹೂಡಿತ್ತು.
ಅಮೆಜಾನ್ ಟೆಕ್ನಾಲಜೀಸ್ ಸಿಂಬಲ್ ಎಂಬ ಬ್ರಾಂಡ್ ಅಡಿ ತನ್ನ ವಾಣಿಜ್ಯ ಚಿಹ್ನೆ ಇರುವ ಉತ್ಪನ್ನ ತಯಾರಿಸಿ ಮಾರಾಟ ಮಾಡುತ್ತಿದ್ದು ಅಮೆಜಾನ್ ಡಾಟ್ ಇನ್ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಲೌಡ್‌ಟೇಲ್ ಇಂಡಿಯಾ ಕೂಡ ಈ ಆಕ್ಷೇಪಾರ್ಹ ಉತ್ಪನ್ನಗಳ ಮಾರಾಟದಲ್ಲಿ ತೊಡಗಿಕೊಂಡಿದೆ ಎಂದು ದೂರಲಾಗಿತ್ತು.
ಅಮೆಜಾನ್ ಮತ್ತಿತರರು ವಿವಾದಿತ ಲೋಗೋವನ್ನು ಬಳಸದಂತೆ ಹೈಕೋರ್ಟ್ ಅಕ್ಟೋಬರ್ 12, 2020ರಲ್ಲಿ ಮಧ್ಯಂತರ ತಡಯಾಜ್ಞೆ ನೀಡಿತ್ತು. ತನ್ನ ಜಾಲತಾಣಗಳಿಂದ ಅಂತಹ ಉತ್ಪನ್ನಗಳನ್ನು ತೆಗೆದುಹಾಕುವಂತೆಯೂ ಅಮೆಜಾನ್‌ಗೆ ನಿರ್ದೇಶಿಸಿತ್ತು. ಬಳಿಕ ಅಮೆಜಾನ್ ಟೆಕ್ನಾಲಜೀಸ್ ನ್ಯಾಯಾಲಯಕ್ಕೆ ಹಾಜರಾಗದೆ ಇದ್ದುದರಿಂದ ಏಕಪಕ್ಷೀಯವಾಗಿ ವಿಚಾರಣೆ ನಡೆದಿತ್ತು.
ನಂತರ ಮಧ್ಯಂತರ ತಡೆಯಾಜ್ಞೆಯನ್ನು ಅಖೈರುಗೊಳಿಸಲಾಯಿತು. 2023ರಲ್ಲಿ, ಕ್ಲೌಡ್‌ಟೇಲ್ ಇಂಡಿಯಾ 2015ರಿಂದ ಜುಲೈ 2020ರವರೆಗೆ ತಾನು ವಿವಾದಿತ ವಾಣಿಜ್ಯ ಚಿಹ್ನೆಯನ್ನು ಬಳಸಿರುವುದಾಗಿ ಉಪ್ಪಿಕೊಂಡಿತು. ವಿವಾದಿತ ಉತ್ಪನ್ನಗಳಿಂದ ₹23,92,420 ಆದಾಯ ಮತ್ತು ಸರಿಸುಮಾರು 20%ರಷ್ಟು ಲಾಭವಾಗಿದ್ದಾಗಿ ತಿಳಿಸಿತು.
ಯಾವುದೇ ಉಲ್ಲಂಘನೆಗೆ ಕ್ಲೌಡ್‌ಟೇಲ್ ಅನ್ನು ಅಮೆಜಾನ್ ಹೊಣೆ ಮಾಡುತ್ತಿದೆ. ಆದರೆ ಬ್ರಾಂಡ್ ಪರವಾನಗಿ ಮತ್ತು ವಿತರಣಾ ಒಪ್ಪಂದಕ್ಕೆ ಸಂಬಂಧಿಸಿದಂತೆ ಅಮೆಜಾನ್ ಕಂಪೆನಿಯನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಕ್ಲೌಡ್‌ಟೇಲ್ ಪರ ವಕೀಲರು ವಾದಿಸಿದ್ದರು. ಆದರೆ ವಾಣಿಜ್ಯ ಚಿಹ್ನೆ ಉಲ್ಲಂಘನೆ ಈ ಒಪ್ಪಂದದ ಭಾಗವಲ್ಲ. ಅಮೆಜಾನ್ ಮತ್ತು ಕ್ಲೌಡ್‌ಟೇಲ್ ಎರಡನ್ನೂ ಹೊಣೆಗಾರರನ್ನಾಗಿ ಮಾಡಬೇಕು ಎಂದು ಲೈಫ್‌ಸ್ಟೈಲ್ ವಾದಿಸಿತು.
ಅಮೆಜಾನ್ ಸೆಲ್ಲರ್ ಸರ್ವೀಸಸ್ ಕೇವಲ ಮಧ್ಯಸ್ಥ ವೇದಿಕೆ ಎಂಬುದನ್ನು ಮತ್ತು ತನ್ನ ನಿರ್ದೇಶನಗಳನ್ನು ಅದು ಪಾಲಿಸಿರುವುದನ್ನು ಮನ್ನಿಸಿದ ನ್ಯಾಯಾಲಯ ಕಕ್ಷಿದಾರರ ವರ್ಗದಿಂದ ಅದನ್ನು ಹೊರಗೆ ಇರಿಸಿತು.