ಶಾಲೆಗಳಲ್ಲಿ ಧರ್ಮ ಮತ್ತು ಮತಗಳ ನಡುವಿನ ವ್ಯತ್ಯಾಸ ಕುರಿತು ಪಾಠ: ಸರ್ಕಾರಗಳ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದಂತೆ ʼಮತಾಂತರ ಉದ್ಯಮʼ ಅಸ್ತಿತ್ವದಲ್ಲಿದ್ದು ಹಿಂದೂ ಧರ್ಮವನ್ನು ವಿವರಿಸಲು ʼರಿಲಿಜನ್ʼ (ಮತ) ಪದ ಬಳಸಬಾರದು ಎಂದು ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ಅರ್ಜಿ ಸಲ್ಲಿಸಿದ್ದಾರೆ.
Delhi High Court
Delhi High Court
Published on

ಧರ್ಮ ಮತ್ತು ಮತಗಳ ( ರಿಲಿಜನ್‌) ನಡುವಿನ ವ್ಯತ್ಯಾಸ ಕುರಿತು ಶಾಲಾ ಪಠ್ಯ ಪುಸ್ತಕಗಳಲ್ಲಿ ಅಧ್ಯಾಯ ರೂಪಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ಬುಧವಾರ ಕೇಂದ್ರ ಮತ್ತು ದೆಹಲಿ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

ಜೈನ ಮತ್ತು ಬೌದ್ಧ ಧರ್ಮದಂತಹ ʼಅಬ್ರಹಾಮೀ ಧಾರ್ಮಿಕ ಸಂಪ್ರದಾಯಗಳುʼ ಮತ್ತು "ಇಂಡಿಕ್/ಧಾರ್ಮಿಕ ಸಂಪ್ರದಾಯಗಳʼ ವಿಚಾರಕ್ಕೆ ಬಂದಾಗ ಹಿಂದೂ ಧರ್ಮದ ಧಾರ್ಮಿಕ ಅಸ್ಮಿತೆಯ ಸ್ವರೂಪ ಭಿನ್ನವಾಗಿದೆ ಎಂದು ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ವಿವರಿಸಲಾಗಿದೆ.

ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದಂತೆ ʼಮತಾಂತರ ಉದ್ಯಮʼ ಅಸ್ತಿತ್ವದಲ್ಲಿದ್ದು ಹಿಂದೂ ಧರ್ಮವನ್ನು ವಿವರಿಸಲು ಮತ (ರಿಲಿಜನ್) ಪದ ಬಳಸಬಾರದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

Also Read
ಜನಸಂಖ್ಯಾ ನಿಯಂತ್ರಣ ಕಾನೂನು: ಬಿಜೆಪಿಯ ಅಶ್ವಿನಿ ಕುಮಾರ್‌ ಉಪಾಧ್ಯಾಯ ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

ಧರ್ಮ ಎಂಬುದು ಮತ ಅಲ್ಲ. ಹೀಗಾಗಿ ಜನನ ಪ್ರಮಾಣಪತ್ರ, ಆಧಾರ್ ಕಾರ್ಡ್, ಶಾಲಾ ಪ್ರಮಾಣಪತ್ರ ಮತ್ತು ಇತರ ದಾಖಲೆಗಳಲ್ಲಿ ಸರ್ಕಾರ ಧರ್ಮ ಪದದ ಸರಿಯಾದ ಅರ್ಥ ಬಳಸಬೇಕೇ ವಿನಾ ರಿಲಿಜನ್‌ ಎಂದಲ್ಲ ಎಂಬುದಾಗಿ ಪಿಐಎಲ್‌ ಪ್ರತಿಪಾದಿಸಿದೆ.

ಪಶ್ಚಿಮದಲ್ಲಿ ಯಹೂದ್ಯ ಧರ್ಮ ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮಗಳನ್ನು ವಿವರಿಸಲು ರಿಲಿಜನ್‌ ಎಂಬ ಪದವನ್ನು ಬಳಸಲಾಗುತ್ತದೆ. ಆದರೆ ರಿಲಿಜನ್‌ ಪದ ಪಾಶ್ಚಾತ್ಯ ಸಂದರ್ಭದಿಂದ ಬಂದಿರುವುದರಿಂದ ಹಿಂದೂ ಧರ್ಮವನ್ನು ಒಂದು ರಿಲಿಜನ್‌ ಎಂದು ಉಲ್ಲೇಖಿಸುವುದು ತಪ್ಪಾಗುತ್ತದೆ ಎಂದು ಅರ್ಜಿ ವಿವರಿಸಿದೆ.

ಪ್ರತಿವಾದಿಗಳು ಪ್ರತಿಕ್ರಿಯೆ ಸಲ್ಲಿಸಲು ಕಾಲಾವಕಾಶ ನೀಡಿದ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ  ಪ್ರಕರಣವನ್ನು ಜನವರಿ 16, 2024ಕ್ಕೆ ಮುಂದೂಡಿದೆ.

Kannada Bar & Bench
kannada.barandbench.com