
ಉನ್ನಾವೊ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ತಂದೆ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರ ಪ್ರಕರಣದ ಅಪರಾಧಿ ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ಗೆ ದೆಹಲಿ ಹೈಕೋರ್ಟ್ ಮಂಗಳವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ [ಕುಲದೀಪ್ ಸಿಂಗ್ ಸೆಂಗಾರ್ ಮತ್ತು ಸಿಬಿಐ ನಡುವಣ ಪ್ರಕರಣ].
ಅತ್ಯಾಚಾರ ಪ್ರಕರಣದಲ್ಲಿ ಸೆಂಗಾರ್‌ಗೆ ಈ ಹಿಂದೆ ಹೈಕೋರ್ಟ್‌ನ ವಿಭಾಗೀಯ ಪೀಠ ವೈದ್ಯಕೀಯ ಜಾಮೀನು ನೀಡಿರುವುದನ್ನು ಗಮನಿಸಿದ ನ್ಯಾ. ಮನೋಜ್ ಕುಮಾರ್ ಓಹ್ರಿ ಅವರು ವೈದ್ಯಕೀಯ ನೆಲೆಯಲ್ಲಿ ಜಾಮೀನು ನೀಡಿದರು.
ಉನ್ನಾವೊ ಅತ್ಯಾಚಾರ ಸಂತ್ರಸ್ತೆಯನ್ನು ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ 20 ಜೂನ್ 2017ರಲ್ಲಿ ಅಪಹರಿಸಿ ಅತ್ಯಾಚಾರ ಮಾಡಿದ್ದ. ಅಲ್ಲದೆ ಆಕೆಯನ್ನು ₹ 60,000ಕ್ಕೆ ಮಾರಾಟ ಮಾಡಲಾಗಿತ್ತು. ಈ ಮಧ್ಯೆ ಆಕೆಗೆ ಮಾಖಿ ಪೊಲೀಸ್ ಠಾಣೆಯಲ್ಲಿ ರಕ್ಷಣೆ ದೊರೆತಿತ್ತು.
ಸಂತ್ರಸ್ತೆ ಚಲಿಸುತ್ತಿದ್ದ ಕಾರಿಗೆ, ನಂಬರ್ ಪ್ಲೇಟ್ ಇಲ್ಲದ ಲಾರಿಯೊಂದು 2018ರಲ್ಲಿ ಡಿಕ್ಕಿ ಹೊಡೆದು ಇಡೀ ಪ್ರಕರಣ ವಿವಾದದ ಸ್ವರೂಪ ಪಡೆದುಕೊಂಡಿತು. ಘಟನೆಯಲ್ಲಿ ಸಂತ್ರಸ್ತೆ ಮತ್ತು ಆಕೆಯ ಪರ ವಕೀಲರು ತೀವ್ರವಾಗಿ ಗಾಯಗೊಂಡರೆ ಆಕೆಯ ಇಬ್ಬರು ಚಿಕ್ಕಮ್ಮಂದಿರು ಇಹಲೋಕ ತ್ಯಜಿಸಿದರು. ಕೆಲ ದಿನಗಳ ಬಳಿಕ ವಕೀಲ ಕೂಡ ಮೃತಪಟ್ಟರು. ಘಟನೆಯ ಹಿಂದೆ ಸೆಂಗರ್ ಕೈವಾಡ ಇದೆ ಎಂದು ವಕೀಲರ ಪತ್ನಿ ದೂರಿದ್ದರು.
ಉನ್ನಾವೋ ಅತ್ಯಾಚಾರ ಘಟನೆಗೆ ಸಂಬಂಧಿಸಿದ ನಾಲ್ಕು ಪ್ರಕರಣಗಳ ವಿಚಾರಣೆಯನ್ನು ಆಗಸ್ಟ್ 2019ರಲ್ಲಿ, ಸುಪ್ರೀಂ ಕೋರ್ಟ್ ದೆಹಲಿಗೆ ವರ್ಗಾಯಿಸಿತ್ತು. ದಿನವಹಿ ವಿಚಾರಣೆ ನಡೆಸಿ 45 ದಿನಗಳಲ್ಲಿ ಪ್ರಕರಣ ಇತ್ಯರ್ಥಗೊಳಿಸಲು ಆದೇಶಿಸಿತ್ತು.
ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವಿಗೆ ಸಂಬಂಧಿಸಿದಂತೆ ಸೆಂಗರ್‌ಗೆ 2019ರ ಡಿಸೆಂಬರ್‌ನಲ್ಲಿ ಶಿಕ್ಷೆ ವಿಧಿಸಲಾಗಿತ್ತು. ಅತ್ಯಾಚಾರ ಪ್ರಕರಣದಲ್ಲಿ ಆತನಿಗೆ ಜೀವಾವಧಿ ಸಜೆ ಮತ್ತು ಕಸ್ಟಡಿ ಸಾವಿನ ಪ್ರಕರಣದಲ್ಲಿ 10 ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಜೈಲುಶಿಕ್ಷೆ ಅನುಭವಿಸುತ್ತಿರುವ ಸೆಂಗರ್ ವೈದ್ಯಕೀಯ ಕಾರಣಗಳ ಹಿನ್ನೆಲೆಯಲ್ಲಿ ತನ್ನ ಶಿಕ್ಷೆಯನ್ನು 20 ವಾರಗಳ ಕಾಲ ಅಮಾನತ್ತಿನಲ್ಲಿರಿಸಿ ಜಾಮೀನು ನೀಡುವಂತೆ ಕೋರಿದ್ದರು.