ಮೂವಿ ವರ್ಲ್ಡ್ ವಿರುದ್ಧ ಹಕ್ಕುಸ್ವಾಮ್ಯ ಮೊಕದ್ದಮೆ: ಸರಿಗಮ ಇಂಡಿಯಾಕ್ಕೆ ದೆಹಲಿ ಹೈಕೋರ್ಟ್ ಪರಿಹಾರ

ಹಾಡುಗಳು ಇಲ್ಲವೇ ಸಂಗೀತ ರೆಕಾರ್ಡಿಂಗ್, ಸಾಹಿತ್ಯ ಕೃತಿ ಸೇರಿದಂತೆ ಸರಿಗಮ ಇಂಡಿಯಾದ ಹಕ್ಕುಸ್ವಾಮ್ಯ ಕೃತಿಗಳನ್ನು ಬಳಸದಂತೆ ಮೂವಿ ವರ್ಲ್ಡ್ ವಿಷುಯಲ್ ಮೀಡಿಯಾಗೆ ಪೀಠ ನಿರ್ಬಂಧ ವಿಧಿಸಿತು.
Delhi High Court
Delhi High Court
Published on

ಮಲಯಾಳಂ ಚಲನಚಿತ್ರಗಳ ಹಾಡು ಮತ್ತು ಸಂಗೀತದ ಧ್ವನಿಮುದ್ರಣಗಳನ್ನು ಒಳಗೊಂಡಂತೆ ಸರಿಗಮ ಇಂಡಿಯಾ ಲಿಮಿಟೆಡ್‌ಗೆ ಸೇರಿದ ಹಕ್ಕುಸ್ವಾಮ್ಯ ಕೃತಿಗಳನ್ನು ಮೂವಿ ವರ್ಲ್ಡ್ ವಿಷುಯಲ್ ಮೀಡಿಯಾ ಬಳಸಿದ ಆರೋಪಕ್ಕೆ ಸಂಬಂಧಿಸಿದಂತೆ ಸರಿಗಮ ಇಂಡಿಯಾ ಲಿಮಿಟೆಡ್‌ಗೆ ದೆಹಲಿ ಹೈಕೋರ್ಟ್‌ ಈಚೆಗೆ ಮಧ್ಯಂತರ ಪರಿಹಾರ ನೀಡಿದೆ [ಸರಿಗಮ ಇಂಡಿಯಾ ಲಿಮಿಟೆಡ್‌ ಮತ್ತು ಮೂವಿ ವರ್ಲ್ಡ್‌ ವಿಷ್ಯುಯಲ್‌ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ ಇನ್ನಿತರರ ನಡುವಣ ಪ್ರಕರಣ].

ಸರಿಗಮ ಇಂಡಿಯಾಕ್ಕೆ  ಏಕಪಕ್ಷೀಯ ಮಧ್ಯಂತರ ತಡೆಯಾಜ್ಞೆ ನೀಡಿದ ನ್ಯಾ. ಮಿನಿ ಪುಷ್ಕರ್ಣ ಅವರಿದ್ದ ಪೀಠ ಹಾಡುಗಳು ಇಲ್ಲವೇ ಸಂಗೀತ ರೆಕಾರ್ಡಿಂಗ್, ಸಾಹಿತ್ಯ ಕೃತಿ ಸೇರಿದಂತೆ ಸರಿಗಮ ಇಂಡಿಯಾದ ಕೃತಿಸ್ವಾಮ್ಯ ಕೃತಿಗಳನ್ನು ಬಳಸದಂತೆ ಮೂವಿ ವರ್ಲ್ಡ್ ವಿಷುಯಲ್ ಮೀಡಿಯಾಗೆ ಡಿಸೆಂಬರ್ 19ರಂದು ಹೊರಡಿಸಿದ ಆದೇಶದಲ್ಲಿ ನಿರ್ಬಂಧ ವಿಧಿಸಿತು.

Also Read
ಬಟ್ಟೆ ತಯಾರಿಕೆಗೆ ಹಕ್ಕುಸ್ವಾಮ್ಯ ಅನ್ವಯಿಸದು ಎಂದ ಪಂಜಾಬ್ ಹೈಕೋರ್ಟ್: ಪೂಮಾ ಅನುಕರಿಸಿದ್ದವನ ವಿರುದ್ಧದ ಕೇಸ್‌ ರದ್ದು

ಮೂವಿ ವರ್ಲ್ಡ್ ವಿಷುಯಲ್ ಮೀಡಿಯಾ ಕಳೆದ ನಾಲ್ಕು ದಶಕಗಳಿಂದ ವೆಬ್‌ಸೈಟ್‌ಗಳು, ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳು ಸೇರಿದಂತೆ ವಿವಿಧ ಚಾನಲ್‌ಗಳ ಮೂಲಕ ತನ್ನ ಹಕ್ಕುಸ್ವಾಮ್ಯ ಇರುವ ಧ್ವನಿ  ಮುದ್ರಿಕೆಗಳನ್ನು ವಾಣಿಜ್ಯಿಕವಾಗಿ ಬಳಸಿಕೊಳ್ಳುತ್ತಿದೆ ಎಂದು ಸರಿಗಮ ಇಂಡಿಯಾ ಆರೋಪಿಸಿತ್ತು.

ತಾನು ಹಕ್ಕು ಸ್ವಾಮ್ಯ ಕೃತಿಗಳ ಮಾಲೀಕನಾಗಿದ್ದು ಮತ್ತು ಹಕ್ಕುಸ್ವಾಮ್ಯ ಕಾಯಿದೆಯ ಅಡಿಯಲ್ಲಿ ಮೂರನೇ ವ್ಯಕ್ತಿಗಳಿಗೆ ಪರವಾನಗಿ ನೀಡುವ ವಿಶೇಷ ಹಕ್ಕು ತನಗೆ ಇದೆ ಎಂದು ಸರಿಗಮ ಇಂಡಿಯಾ ವಾದಿಸಿತ್ತು.

Also Read
ಕೆಜಿಎಫ್‌ ಕೃತಿ ಸ್ವಾಮ್ಯ ಉಲ್ಲಂಘನೆ: ನ್ಯಾಯಾಂಗ ನಿಂದನೆ ಅರ್ಜಿ ದಾಖಲು; ರಾಹುಲ್‌ ಮತ್ತಿತರರಿಗೆ ಹೈಕೋರ್ಟ್‌ ನೋಟಿಸ್‌

ಎರ್ನಾಕುಲಂ ಜಿಲ್ಲಾ ನ್ಯಾಯಾಲಯ ತನ್ನ ವಿರುದ್ಧ ಏಕಪಕ್ಷೀಯ ಮಧ್ಯಂತರ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಸರಿಗಮ ಇಂಡಿಯಾ ಲಿಮಿಟೆಡ್‌ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿತ್ತು.

ವಾದ ಆಲಿಸಿದ ಹೈಕೋರ್ಟ್‌ ಮುಂದಿನ ವಿಚಾರಣೆ ನಡೆಯುವ 13 ಮೇ 2025ರವರೆಗೆ ಸರಿಗಮ ಇಂಡಿಯಾ ಲಿಮಿಟೆಡ್ ಹಕ್ಕುಸ್ವಾಮ್ಯ ಹೊಂದಿರುವ ಕೃತಿಗಳನ್ನು ಬಳಸದಂತೆ ಮೂವಿ ವರ್ಲ್ಡ್ ವಿಷುಯಲ್ ಮೀಡಿಯಾಗೆ ನಿರ್ಬಂಧ ವಿಧಿಸಿತು.

Kannada Bar & Bench
kannada.barandbench.com