
ಅಮೆರಿಕದ ಖ್ಯಾತ ಪಾದರಕ್ಷೆ ಕಂಪೆನಿಯ ಕ್ರೊಕ್ಸ್ (Crocs) ವಾಣಿಜ್ಯ ಚಿಹ್ನೆ ಹೋಲುವುದರಿಂದ ಕ್ರೂಸ್ (Croose) ಚಿಹ್ನೆಯನ್ನು ವಾಣಿಜ್ಯ ಚಿಹ್ನೆ ರಿಜಿಸ್ಟ್ರಿಯಿಂದ ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ಈಚೆಗೆ ಆದೇಶಿಸಿದೆ [ಕ್ರೊಕ್ಸ್ ಕಂಪೆನಿ ಮತ್ತು ನವದೆಹಲಿಯ ವಾಣಿಜ್ಯ ಚಿಹ್ನೆ ರಿಜಿಸ್ಟ್ರಾರ್ ಇನ್ನಿತರರ ನಡುವಣ ಪ್ರಕರಣ ].
2002ರಲ್ಲಿ ಸ್ಥಾಪನೆಯಾದ ಕ್ರೊಕ್ಸ್, ಅಮೆರಿಕ ಮೂಲದ ಪಾದರಕ್ಷೆಗಳ ಬ್ರಾಂಡ್ ಆಗಿದ್ದು, ಅಂತಾರಾಷ್ಟ್ರೀಯ ಅಸ್ತಿತ್ವ ಹೊಂದಿದೆ. ಭಾರತದಲ್ಲಿ ವಾಣಿಜ್ಯ ಚಿಹ್ನೆಗಳ ರಿಜಿಸ್ಟ್ರಾರ್‌ನಲ್ಲಿ ನೋಂದಾಯಿಸಲಾದ 'ಕ್ರೂಸ್' ವಾಣಿಜ್ಯ ಚಿಹ್ನೆ ರದ್ದುಗೊಳಿಸುವಂತೆ ಕೋರಿ ಕ್ರೊಕ್ಸ್ ಹೈಕೋರ್ಟ್ ಮೆಟ್ಟಿಲೇರಿತ್ತು.
'ಕ್ರೂಸ್' ಎಂಬುದು 'ಕ್ರೊಕ್ಸ್' ವಾಣಿಜ್ಯ ಚಿಹ್ನೆಯನ್ನು ಹೋಲುವುದರಿಂದ ಗ್ರಾಹಕರಲ್ಲಿ ಗೊಂದಲ ಉಂಟುಮಾಡುವ ಸಾಧ್ಯತೆಯಿದೆ ಎಂದು ಸೆಪ್ಟೆಂಬರ್ 26 ರಂದು ನೀಡಿದ ತೀರ್ಪಿನಲ್ಲಿ ನ್ಯಾಯಮೂರ್ತಿ ತೇಜಸ್ ಕರಿಯಾ ಅವರು ತಿಳಿಸಿದ್ದಾರೆ.
ಕ್ರೂಸ್ ಎಂಬುದು ನೋಟ ಹಾಗೂ ಉಚ್ಚಾರಣೆಯಲ್ಲಿ ಕ್ರೊಕ್ಸ್‌ಗೆ ತುಂಬಾ ಹತ್ತಿರವಾಗಿದ್ದು ವಾಣಿಜ್ಯ ಚಿಹ್ನೆ ಕಾಯಿದೆಯ ಸೆಕ್ಷನ್ 11(1)(ಬಿ) ಅನ್ವಯ, ಹೋಲುವ ಚಿಹ್ನೆಯನ್ನು ಒಂದೇ ರೀತಿಯ ವಸ್ತುಗಳಿಗೆ ಸಂಬಂಧಿಸಿದಂತೆ ನೋಂದಣಿ ಮಾಡುವಂತಿಲ್ಲ ಎಂದು ಪೀಠ ಹೇಳಿದೆ.
ರಿಜಿಸ್ಟ್ರಾರ್ ಅಕಳಂಕಿತವಾಗಿ ಉಳಿಯಬೇಕೆಂದರೆ 'ಕ್ರೂಸ್' ಎಂಬ ಗುರುತನ್ನು ವಾಣಿಜ್ಯ ಚಿಹ್ನೆ ರಿಜಿಸ್ಟ್ರಿಯಿಂದ ತೆಗೆಯಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಅಂತೆಯೇ ವಾಣಿಜ್ಯ ಚಿಹ್ನೆ ರಿಜಿಸ್ಟ್ರಿ ತನ್ನ ದಾಖಲೆಗಳಿಂದ ಹಾಗೂ ಜಾಲತಾಣದಿಂದ ಕ್ರೂಸ್ ಹೆಸರನ್ನು ನಾಲ್ಕು ವಾರಗಳಲ್ಲಿ ತೆಗೆದುಹಾಕಬೇಕು ಎಂದು ಅದು ನಿರ್ದೇಶಿಸಿತು.
ತಾನು 2005 ಮತ್ತು 2006 ರ ನಡುವೆ ಭಾರತದಲ್ಲಿ ತನ್ನ ವಾಣಿಜ್ಯ ಚಿಹ್ನೆ ನೋಂದಾಯಿಸಿಕೊಂಡಿದ್ದಾಗಿ ಕ್ರೊಕ್ಸ್ ಹೇಳಿತ್ತು. ವಿಶಿಷ್ಟ ಶೈಲಿ, ಅಂತಾರಾಷ್ಟ್ರೀಯ ಮನ್ನಣೆಯನ್ನು ತನ್ನ ಉತ್ಪನ್ನಗಳು ಹೊಂದಿದ್ದು ʼಕ್ರೂಸ್ʼ ಎಂಬ ಗುರುತಿನಲ್ಲಿ ತನ್ನ ರೀತಿಯ ಅಕ್ಷರ ಮತ್ತು ಗುರುತನ್ನು ಬಳಸಿಕೊಳ್ಳಲಾಗಿದೆ ಎಂದು ಅದು ದೂರಿತ್ತು.
ಕ್ರೊಕ್ಸ್ ಪರ ವಕೀಲರಾದ ಅಜಯ್ ಅಮಿತಾಭ್ ಸುಮನ್, ಶ್ರವಣ್ ಕುಮಾರ್ ಬನ್ಸಾಲ್, ರಿಷಿ ಬನ್ಸಾಲ್, ದೀಪಕ್ ಶ್ರೀವಾಸ್ತವ, ಶ್ರುತಿ ಮಂಚಂದ ಮತ್ತು ಡಿ ಮೆಹ್ರಾ ವಾದ ಮಂಡಿಸಿದರು.
ವಾಣಿಜ್ಯ ಚಿಹ್ನೆಗಳ ರಿಜಿಸ್ಟ್ರಾರ್ ಅವರನ್ನು ವಕೀಲರಾದ ಆಶಿಶ್ ಕೆ. ದೀಕ್ಷಿತ್, ಶಿವಂ ತಿವಾರಿ ಮತ್ತು ಉಮರ್ ಹಶ್ಮಿ ಪ್ರತಿನಿಧಿಸಿದ್ದರರು. ಕ್ರೂಸ್ ಪರವಾಗಿ ವಕೀಲರಾದ ಹರ್ಷಿತ್ ಜೈನ್ ಮತ್ತು ರಾಹುಲ್ ಕುಮಾರ್ ಹಾಜರಿದ್ದರು.