
ನಟ, ರಾಜಕಾರಣಿ ವಿಜಯ್ ಮತ್ತು ಅವರು ಸ್ಥಾಪಿಸಿರುವ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ವಿರುದ್ಧ ವಾಣಿಜ್ಯ ಚಿಹ್ನೆ ಮತ್ತು ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಸೆಪ್ಟೆಂಬರ್ 26 ರಂದು ನಟನ ಪ್ರತಿಕ್ರಿಯೆ ಕೇಳಿದೆ [ಜಿಬಿ ಪಚೈಯಪ್ಪನ್ ಮತ್ತು ತಮಿಳಗ ವೆಟ್ರಿ ಕಳಗಂ ನಡುವಣ ಪ್ರಕರಣ].
ತಾವು ನಡೆಸುತ್ತಿರುವ ಥೊಂಡೈ ಮಂಡಲ ಸಾಂದ್ರೋರ್ ಧರ್ಮ ಪರಿಬಲನ ಸಭಾ ಎಂಬ ಟ್ರಸ್ಟ್ ಬಳಸುತ್ತಿದ್ದ ಧ್ವಜವನ್ನು ನಕಲು ಮಾಡಿ ಟಿವಿಕೆ ಧ್ವಜ ರಚಿಸಲಾಗಿದೆ ಎಂದು ಟ್ರಸ್ಟ್ ಪ್ರತಿನಿಧಿಯಾದ ಜಿ ಬಿ ಪಚೈಯಪ್ಪನ್ ದೂರಿದ್ದರು. ಆದರೆ ಟಿವಿಕೆ ಧ್ವಜ ಬಳಸದಂತೆ ತಡೆಯಲು ಮಧ್ಯಂತರ ಆದೇಶ ನೀಡುವುದಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಪಚೈಯಪ್ಪನ್ ಮತ್ತು ಅವರ ಟ್ರಸ್ಟ್ ಹೈಕೋರ್ಟ್ ವಿಭಾಗೀಯ ಪೀಠದ ಮೊರೆ ಹೋಗಿತ್ತು.
ಪ್ರಕರಣವನ್ನು ಸೆಪ್ಟೆಂಬರ್ 26 ರಂದು ಆಲಿಸಿದ ನ್ಯಾಯಮೂರ್ತಿಗಳಾದ ಜಿ ಜಯಚಂದ್ರನ್ ಮತ್ತು ಮುಮ್ಮಿನೇನಿ ಸುಧೀರ್ ಕುಮಾರ್ ಅವರಿದ್ದ ಪೀಠ ವಿಜಯ್ ಮತ್ತವರ ಪಕ್ಷ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ್ದು ಆರು ವಾರಗಳ ಬಳಿಕ ಮತ್ತೆ ವಿಚಾರಣೆ ನಡೆಯಲಿದೆ.
ಮೇಲ್ಮನವಿ ಪುರಸ್ಕರಿಸಿದರೆ ಏಕಸದಸ್ಯ ಪೀಠ ವಾಣಿಜ್ಯ ಚಿಹ್ನೆಗೆ ಸಂಬಂಧಿಸಿದ ಮುಖ್ಯ ವಾಜ್ಯದ ವಿಚಾರಣೆ ನಡೆಸಿ ಅಂತಿಮ ತೀರ್ಪು ನೀಡುವುದಕ್ಕೆ ಅಡ್ಡಿಯಾಗದು ಎಂದು ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.
ಆಗಸ್ಟ್ 2024 ರಲ್ಲಿ ಅನಾವರಣಗೊಂಡ ಟಿವಿಕೆ ಧ್ವಜವು ನೋಡಲು ಹಾಗೂ ಪರಿಕಲ್ಪನಾತ್ಮಕವಾಗಿ ತಮ್ಮ ಟ್ರಸ್ಟ್‌ನ ನೋಂದಾಯಿತ ವಾಣಿಜ್ಯ ಚಿಹ್ನೆಯನ್ನು ಹೋಲುತ್ತದೆ. ಇದು ಕೇಂದ್ರ ವೃತ್ತಾಕಾರದ ವಿಶಿಷ್ಟ ಲಕ್ಷಣದೊಂದಿಗೆ ಕೆಂಪು-ಹಳದಿ-ಕೆಂಪು ತ್ರಿವರ್ಣವನ್ನು ಒಳಗೊಂಡಿದೆ ಎಂದು ಅರ್ಜಿದಾರರು ನ್ಯಾಯಾಲಯದ ಗಮನ ಸೆಳೆದಿದ್ದರು.
ಟ್ರೇಡ್‌ಮಾರ್ಕ್ ದಾಖಲೆಗಳ ಪ್ರಕಾರ, ಪಚೈಯಪ್ಪನ್ ನವೆಂಬರ್ 28, 2023 ರಂದು ವರ್ಗ 45 ರ ಅಡಿಯಲ್ಲಿ ಚಿಹ್ನೆಯ ನೋಂದಣಿಗೆ ಅರ್ಜಿ ಸಲ್ಲಿಸಿದ್ದರು. ವೈಯಕ್ತಿಕ ಅಗತ್ಯಗಳನ್ನು ಪೂರೈಸಲು ಇತರರು ಸಲ್ಲಿಸುವ ವೈಯಕ್ತಿಕ ಮತ್ತು ಸಾಮಾಜಿಕ ಸೇವೆಯನ್ನು ಇದು ಒಳಗೊಳ್ಳುತ್ತದೆ.
ಅರ್ಜಿಯ ಪ್ರಕಾರ, 2023 ರಿಂದ ಅರ್ಜಿದಾರರು ಟ್ರಸ್ಟ್‌ನ ಸೇವೆಗಾಗಿ ಈ ಧ್ವಜವನ್ನು ಬಳಸುತ್ತಿದ್ದಾರೆ. ಟ್ರಸ್ಟ್ ಮೂಲಕ ಸಾಂಡ್ರೋರ್ ಕುರಲ್ ಎಂಬ ತಮಿಳು ನಿಯತಕಾಲಿಕೆಯ ಪ್ರಕಟಣೆ ಮತ್ತು ಅದೇ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್‌ನ ಕಾರ್ಯಾಚರಣೆ ನಡೆಯುತ್ತಿದೆ.
ವಾಣಿಜ್ಯ ಚಿಹ್ನೆಯನ್ನು ಜೂನ್ 1, 2024 ರಂದು ವರ್ಗ 45 ರ ಅಡಿಯಲ್ಲಿ ನೋಂದಾಯಿಸಲಾಗಿದೆ. ಅಲ್ಲದೆ, ಕೇಂದ್ರ ವಿನ್ಯಾಸ ಹಕ್ಕುಸ್ವಾಮ್ಯ ರಕ್ಷಣೆಗೆ ಅರ್ಹವಾದ ಮೂಲ ಕಲಾತ್ಮಕ ಕೃತಿಯಾಗಿ ಅರ್ಹತೆ ಪಡೆದಿದೆ ಎಂದು ಅರ್ಜಿದಾರರು ಹೇಳಿಕೊಂಡಿದ್ದರು. ಟಿವಿಕೆ ಧ್ವಜವು ತಮ್ಮ ವಾಣಿಜ್ಯ ಚಿಹ್ನೆ ಮತ್ತು ಹಕ್ಕುಸ್ವಾಮ್ಯ ಎರಡನ್ನೂ ಉಲ್ಲಂಘಿಸುತ್ತದೆ. ಎರಡೂ ಗುರುತುಗಳ ನಡುವಿನ ಹೋಲಿಕೆ ಸಾರ್ವಜನಿಕರಲ್ಲಿ ಗೊಂದಲವನ್ನು ಉಂಟುಮಾಡುವ ಸಾಧ್ಯತೆಯಿದೆ ಎಂದು ದಾವೆಯಲ್ಲಿ ಆರೋಪಿಸಲಾಗಿತ್ತು.
ಟ್ರಸ್ಟ್ ಸಮಾಜದಲ್ಲಿ ಹೊಂದಿರುವ ಸದ್ಭಾವನೆ ಮತ್ತು ವರ್ಚಸ್ಸಿನ ಮೇಲೆ ಸವಾರಿ ಮಾಡುವ ದುರುದ್ದೇಶದಿಂದ ಅದರ ಚಿಹ್ನೆಯನ್ನು ಬಳಸಲು ಟಿವಿಕೆ ಮುಂದಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದರು.
ಟಿವಿಕೆ ಮತ್ತು ವಿಜಯ್ ತಮ್ಮ ಧ್ವಜದ ಬಳಕೆ ಮಾಡುವುದರ ವಿರುದ್ಧ ಶಾಶ್ವತ ತಡೆಯಾಜ್ಞೆ ನೀಡಬೇಕು. ವಾಣಿಜ್ಯ ಚಿಹ್ನೆ ಮತ್ತು ಹಕ್ಕುಸ್ವಾಮ್ಯದ ಉಲ್ಲಂಘನೆ ಮಾಡಿರುವುದಕ್ಕಾಗಿ ₹5 ಲಕ್ಷ ಹಾನಿ ಪರಿಹಾರ ನೀಡಬೇಕು. ಚಿಹ್ನೆಯನ್ನು ಉಲ್ಲಂಘಿಸುವ ಮೂಲಕ ಮಾಡಿಕೊಂಡಿರುವ ಲಾಭದ ವಿವರಗಳನ್ನು ಸಲ್ಲಿಸಲು ಪ್ರತಿವಾದಿಗಳಿಗೆ ನಿರ್ದೇಶನ ನೀಡಬೇಕು. ಚಿಹ್ನೆಯ ಉಲ್ಲಂಘನೆಯ ಮೂಲಕ ಮುದ್ರಿಸಲಾದ ಧ್ವಜಗಳು, ಇತರೆ ವಸ್ತುಗಳು ಮತ್ತು ಜಾಹೀರಾತುಗಳು ಸೇರಿದಂತೆ ಎಲ್ಲಾ ವಸ್ತುಗಳ ನಾಶಗೊಳಿಸಬೇಕು ಹಾಗೂ ನ್ಯಾಯಾಲಯದ ವೆಚ್ಚವನ್ನು ಪಕ್ಷ ಮತ್ತು ನಟ ಭರಿಸಬೇಕು ಎಂದು ಕೋರಲಾಗಿತ್ತು.
[ಆದೇಶದ ಪ್ರತಿ]