

ಹತ್ತೊಂಬತ್ತು ವರ್ಷದೊಳಗಿನ ಕಿರಿಯರ ಕ್ರಿಕೆಟ್ ವಿಶ್ವಕಪ್ ಹಾಗೂ ಮುಂಬರುವ ಐಸಿಸಿ ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್ 2026ರ ದೃಶ್ಯಾವಳಿಗಳನ್ನು ಅಕ್ರಮವಾಗಿ ನೇರಪ್ರಸಾರ ಮಾಡದಂತೆ ಜಾಲತಾಣಗಳು ಮತ್ತು ಆ್ಯಪ್‌ಗಳಿಗೆ ನಿರ್ಬಂಧ ವಿಧಿಸಿ ದೆಹಲಿ ಹೈಕೋರ್ಟ್ ಆದೇಶಿಸಿದೆ [ಜಿಯೋ ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಜಿಎಚ್‌ಡಿ ಸ್ಪೋರ್ಟ್ಸ್ ಇನ್ನಿತರರ ನಡುವಣ ಪ್ರಕರಣ].
ಈ ಟೂರ್ನಿಗಳ ಮಾಧ್ಯಮ ಹಕ್ಕುಗಳನ್ನು ಹೊಂದಿರುವ ಜಿಯೋಸ್ಟಾರ್, ಅಕ್ರಮವಾಗಿ ವಿಷಯವನ್ನು ಸ್ಟ್ರೀಮ್ ಮಾಡುತ್ತಿರುವ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳ ಬಗ್ಗೆ ಇಂಟರ್ನೆಟ್ ಸೇವಾ ಪೂರೈಕೆದಾರರು (ಐಎಸ್‌ಪಿಗಳು), ಸರ್ಕಾರಿ ಇಲಾಖೆಗಳು ಹಾಗೂ ಡೊಮೇನ್ ನೇಮ್ ರಿಜಿಸ್ಟ್ರಾರ್‌ಗಳಿಗೆ (ಡಿಎನ್‌ಆರ್‌ಗಳು) ಮಾಹಿತಿ ನೀಡಬಹುದಾಗಿದೆ; ಅಂತಹ ಮಾಹಿತಿ ದೊರಕಿದ ಕೂಡಲೇ ಅವುಗಳನ್ನು ತಕ್ಷಣವೇ ತಡೆಹಿಡಿಯಬೇಕು ಎಂದು ಜನವರಿ 30ರಂದು ಹೊರಡಿಸಿದ ಆದೇಶದಲ್ಲಿ ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರು ಹೇಳಿದ್ದಾರೆ.
ಭಾರತದಲ್ಲಿ 2024–27 ಅವಧಿಯ ಐಸಿಸಿ ಟೂರ್ನಿಗಳ ಏಕೈಕ ಪ್ರಸಾರ ಮತ್ತು ಡಿಜಿಟಲ್ ಹಕ್ಕುಗಳನ್ನು ಹೊಂದಿರುವ ಜಿಯೋಸ್ಟಾರ್ ಸಲ್ಲಿಸಿದ ಮೊಕದ್ದಮೆಯನ್ನು ವಿಚಾರಣೆ ನಡೆಸುವ ವೇಳೆ, ನ್ಯಾಯಾಲಯ ಏಕಪಕ್ಷೀಯ ಪ್ರತಿಬಂಧಕಾದೇಶ ಪ್ರಕಟಿಸಿದೆ.
ಹಕ್ಕುಸ್ವಾಮ್ಯ ಹೊಂದಿರುವ ವಿಷಯದ ಪೈರಸಿಯಲ್ಲಿ ತೊಡಗಿರುವ ವಂಚಕ ಮೊಬೈಲ್ ಅಪ್ಲಿಕೇಶನ್ಗಳು ಮತ್ತೆ ಮತ್ತೆ ಬೆದರಿಕೆ ಒಡ್ಡುತ್ತಿದ್ದು ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಅದು ಹೇಳಿದೆ.
ಒಂದು ಟೂರ್ನಿ ಈಗಾಗಲೇ ನಡೆಯುತ್ತಿರುವುದನ್ನು ಹಾಗೂ ಮತ್ತೊಂದು ಫೆಬ್ರವರಿ 7ರಿಂದ ಆರಂಭಗೊಳ್ಳುತ್ತಿರುವುದನ್ನು ಪರಿಗಣಿಸಿ, ಪ್ರಕರಣದಲ್ಲಿ ತಕ್ಷಣದ ಪರಿಹಾರ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.
ಅಕ್ರಮ ಎಸಗುತ್ತಿರುವ ಜಾಲತಾಣ ಬಳಕೆ ತಡೆಯುವಲ್ಲಿ ವಿಳಂಬವಾದರೆ ಜಿಯೋಸ್ಟಾರ್‌ನ ಏಕಸ್ವಾಮ್ಯ ಹಕ್ಕುಗಳಿಗೆ ಸರಿಪಡಿಸಲಾಗದಷ್ಟು ಹಾನಿ ಉಂಟಾಗುವುದಲ್ಲದೆ ಆದಾಯ ನಷ್ಟವೂ ಸಂಭವಿಸುತ್ತದೆ ಎಂದ ನ್ಯಾಯಾಲಯ ಪ್ರತಿಬಂಧಕಾದೇಶ ಜಾರಿ ಮಾಡಿದೆ.