'ಯುಪಿ 77' ವೆಬ್ ಸರಣಿ ಪಾತಕಿ ದುಬೆ ಜೀವನ ಆಧರಿಸಿಲ್ಲ ಎಂದ ನಿರ್ಮಾಪರು: ಚಿತ್ರಕ್ಕೆ ತಡೆ ನೀಡಲು ದೆಹಲಿ ಹೈಕೋರ್ಟ್ ನಕಾರ

ಪ್ರತಿ ಸಂಚಿಕೆಯ ಮೊದಲು ಈ ಕುರಿತು ಸ್ಪಷ್ಟನೆ ಇರುವ ನಿರಾಕರಣೆಯ ಘೋಷಣೆಯ ಸಾಲನ್ನು ಪ್ರದರ್ಶಿಸಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
'ಯುಪಿ 77' ವೆಬ್ ಸರಣಿ ಪಾತಕಿ ದುಬೆ ಜೀವನ ಆಧರಿಸಿಲ್ಲ ಎಂದ ನಿರ್ಮಾಪರು: ಚಿತ್ರಕ್ಕೆ ತಡೆ ನೀಡಲು ದೆಹಲಿ ಹೈಕೋರ್ಟ್ ನಕಾರ
'ಯುಪಿ 77' ವೆಬ್ ಸರಣಿ ಪಾತಕಿ ದುಬೆ ಜೀವನ ಆಧರಿಸಿಲ್ಲ ಎಂದ ನಿರ್ಮಾಪರು: ಚಿತ್ರಕ್ಕೆ ತಡೆ ನೀಡಲು ದೆಹಲಿ ಹೈಕೋರ್ಟ್ ನಕಾರ
Published on

'ಯುಪಿ 77' ವೆಬ್ ಸರಣಿಯು ಕೆಲ ಸಮಯದ ಹಿಂದೆ ಎನ್‌ಕೌಂಟರ್‌ನಲ್ಲಿ ಹತನಾಗಿದ್ದ ಪಾತಕಿ ವಿಕಾಸ್ ದುಬೆ ಜೀವನ ಆಧರಿಸಿಲ್ಲ ಎಂದು ನಿರ್ಮಾಪಕರು ತಿಳಿಸಿದ ಹಿನ್ನೆಲೆಯಲ್ಲಿ ಸರಣಿ ಬಿಡುಗಡೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.

ವೆಬ್‌ ಸರಣಿ ವಿರುದ್ಧ ದುಬೆ ಪತ್ನಿ ರಿಚಾ ದುಬೆ ಅರ್ಜಿ ಸಲ್ಲಿಸಿದ್ದರು. ವೆಬ್‌ ಸರಣಿ ಸಂಪೂರ್ಣ ಕಾಲ್ಪನಿಕ ಕೃತಿ ಆಗಿದ್ದು, ಯಾವುದೇ ವ್ಯಕ್ತಿಯ ಜೀವನಾಧಾರಿತವಲ್ಲ ಎಂಬ ನಿರ್ಮಾಪಕರ ಹೇಳಿಕೆಯನ್ನು ಮತ್ತು ಸಂಚಿಕೆಯ ಮೊದಲು ಈ ಕುರಿತು ಸ್ಪಷ್ಟನೆ ಇರುವ ನಿರಾಕರಣೆಯ ಘೋಷಣೆಯ ಸಾಲನ್ನು ಪ್ರದರ್ಶಿಸಲಾಗುವುದು ಎಂಬ ಅಂಶವನ್ನು ನ್ಯಾಯಮೂರ್ತಿ ಸಚಿನ್ ದತ್ತಾ ದಾಖಲಿಸಿಕೊಂಡರು.

Also Read
ಪೊಲೀಸರು ಎನ್‌ಕೌಂಟರ್‌ ಮಾಡಬಹುದೆಂದು ದೆಹಲಿ ಹೈಕೋರ್ಟ್ ಮೊರೆ ಹೋದ ಮೂಸೆ ವಾಲಾ ಹತ್ಯೆ ಆರೋಪಿ ಲಾರೆನ್ಸ್ ಬಿಷ್ಣೋಯ್

ನಿರ್ಮಾಪಕರ ಹೇಳಿಕೆ ಹಿನ್ನೆಲೆಯಲ್ಲಿ ತಾನು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ನಿರ್ಮಾಪಕರ ತಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಪ್ರಚಾರಾಂದೋಲನದ ವೇಳೆಯೂ ದುಬೆ ಹೆಸರನ್ನು ಬಳಸುವುದಿಲ್ಲ ಎಂದು ಅವರು ಖಚಿತಪಡಿಸಿದ್ದಾರೆ ಎಂಬುದಾಗಿ ನ್ಯಾಯಾಲಯ ಹೇಳಿತು. ಪ್ರಕರಣದ ಮುಂದಿನ ವಿಚಾರಣೆಯನ್ನು 2026ರ ಜನವರಿ 7ರಂದು ನಿಗದಿಪಡಿಸಲಾಗಿದೆ. ನಿರಾಕರಣೆಯ ಘೋಷಣೆ ಕುರಿತಂತೆ ಪ್ರಮಾಣಪತ್ರ ಸಲ್ಲಿಸುವಂತೆ ನ್ಯಾಯಾಲಯ ಇದೇ ವೇಳೆ ನಿರ್ಮಾಪಕರಿಗೆ ಸೂಚಿಸಿತು.

ಅನುಮತಿಯಿಲ್ಲದೆ ಜೀವನಚರಿತ್ರೆಯಂತಹ ಚಿತ್ರ ತಯಾರಿಸಲಾಗಿದೆ. ವೈಯಕ್ತಿಕ ಘಟನೆಗಳನ್ನು ಅತಿರಂಜಿತವಾಗಿ ಮಂಡಿಸಲಾಗಿದೆ. ಖಾಸಗಿ ಘಟನೆಗಳೂ ಇದ್ದು ಗೌಪ್ಯತೆಗೆ ಗೌರವ ಮತ್ತು ವರ್ಚಸ್ಸಿಗೆ ಗಂಭೀರ ಧಕ್ಕೆ ಉಂಟು ಮಾಡುವಂತಿವೆ ಎಂದು ದುಬೆ ಪತ್ನಿ ದೂರಿದ್ದರು.

ಸರಣಿಯನ್ನು ಪ್ರಸಾರವಾಗಬೇಕಿರುವ ಪ್ರಸಾರ್ ಭಾರತಿ ಆರಂಭಿಸಿದ ಓವರ್‌–ದಿ–ಟಾಪ್ (ಒಟಿಟಿ) ವೇದಿಕೆ ‘ವೇವ್ಸ್ʼ (Waves) ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿತ್ತು.

Vikas Dubey
Vikas Dubey

ಕಾನ್ಪುರದಲ್ಲಿ ಎಂಟು ಮಂದಿ ಪೊಲೀಸ್ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದ ಪ್ರಕರಣದಲ್ಲಿ ವಿಕಾಸ್ ದುಬೆ ಮತ್ತು ಅವರ ಸಹಚರರು ಆರೋಪಿಗಳಾಗಿದ್ದರು. ನಂತರ 2020ರ ಜುಲೈ 9ರಂದು, ಮಧ್ಯಪ್ರದೇಶ ಪೊಲೀಸರೆದುರು ಆತ ಶರಣಾಗಿದ್ದ. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು.

ಉತ್ತರ ಪ್ರದೇಶಕ್ಕೆ ಪೊಲೀಸರು ಆತನನ್ನು ಕರೆತರುತ್ತಿದ್ದ ವೇಳೆ ಜುಲೈ10ರ ಬೆಳಗ್ಗೆ ದುಬೆ ಹತನಾಗಿದ್ದ. ಪೊಲೀಸ್ ಅಧಿಕಾರಿಯೊಬ್ಬರಿಂದ ಗನ್ ಕಸಿದುಕೊಳ್ಳಲು ಯತ್ನಿಸಿ, ಪೊಲೀಸರ ಮೇಲೆ ಗುಂಡು ಹಾರಿಸಿದ್ದರಿಂದ ಸ್ವರಕ್ಷಣೆಗಾಗಿ ಆತನನ್ನು ಕೊಲ್ಲಲಾಯಿತು ಎಂದು ಪೊಲೀಸರು ಸಮಜಾಯಿಷಿ ನೀಡಿದ್ದರು.

ದುಬೆ ಹತ್ಯೆಗೆ ಕೆಲ ಗಂಟೆಗಳ ಮೊದಲು, ಮುಂಬೈ ಮೂಲದ ವಕೀಲ ಘನಶ್ಯಾಮ್ ಉಪಾಧ್ಯಾಯ ಅವರು, ನಕಲಿ ಎನ್‌ಕೌಂಟರ್ ಮೂಲಕ ದುಬೆ ಹತ್ಯೆಯಾಗುವ ಆತಂಕವಿದೆ. ಹೀಗಾಗಿ ಆತನಿಗೆ ರಕ್ಷಣೆ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಪಟ್ಟಿಯಾಗುವ ಮುನ್ನವೇ ಎನ್‌ಕೌಂಟರ್‌ ನಡೆದಿತ್ತು.

ದುಬೆ ಸಾವಿನ ಬಳಿಕ, ಉತ್ತರ ಪ್ರದೇಶ ಪೊಲೀಸರು ನಕಲಿ ಎನ್‌ಕೌಂಟರ್ ನಡೆಸಿದ್ದಾರೆ ಎಂಬ ಅನುಮಾನಗಳು ಸಮಾಜದ ವಿವಿಧ ಸ್ತರಗಳಿಂದ ಕೇಳಿ ಬಂದಿದ್ದವು. ಉತ್ತರ ಪ್ರದೇಶದ ವಕೀಲರು ಈ ಕುರಿತು ತನಿಖೆ ನಡೆಸುವಂತೆ ಅಲಾಹಾಬಾದ್ ಹೈಕೋರ್ಟ್‌ಗೆ ಪತ್ರ ಬರೆದಿದ್ದರು.

ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದ್ದ ಪ್ರಕರಣವೊಂದರ ವಿಚಾರಣೆ ವೇಳೆ ಸರ್ಕಾರೇತರ ಸಂಸ್ಥೆ ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್‌) ಹತ್ಯೆ ಕುರಿತಂತೆ ವಿಶೇಷ ತನಿಖಾ ತಂಡ ರಚಿಸುವಂತೆ ಕೋರಿ ತುರ್ತು ಅರ್ಜಿ ಸಲ್ಲಿಸಿತ್ತು.

ಕಡೆಗೆ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಬಿ ಎಸ್‌ ಚೌಹಾಣ್‌ ಅವರ ಅಧ್ಯಕ್ಷತೆಯಲ್ಲಿ ತನಿಖಾ ಆಯೋಗ ರಚಿಸಲು ಸುಪ್ರೀಂ ಕೋರ್ಟ್‌ ಹಸಿರು ನಿಶಾನೆ ತೋರಿತ್ತು.

Also Read
ನಕಲಿ ಎನ್‌ಕೌಂಟರ್‌: ತನಿಖೆ ನಡೆಸುವಂತೆ ಅಸ್ಸಾಂ ಮಾನವ ಹಕ್ಕುಗಳ ಆಯೋಗಕ್ಕೆ ಸುಪ್ರೀಂ ಆದೇಶ

ನಕಲಿ ಎನ್‌ಕೌಂಟರ್‌ ಕುರಿತಂತೆ ಉತ್ತರ ಪ್ರದೇಶ ಪೊಲೀಸರನ್ನು ಆಯೋಗ ಆರೋಪಮುಕ್ತಗೊಳಿಸಿದರೂ ದುಬೆಗೆ ಆಶ್ರಯ ನೀಡುತ್ತಿದ್ದ ಪೊಲೀಸರು ಹಾಗೂ ಉಳಿದ ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿತ್ತು.

2022ರ ಜುಲೈನಲ್ಲಿ, ತನಿಖಾ ಆಯೋಗದ ವರದಿಯನ್ನು ಬಹಿರಂಗಪಡಿಸುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿತ್ತು. ಜೊತೆಗೆ ಜೊತೆಗೆ, ಆಯೋಗದ ಶಿಫಾರಸುಗಳ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಉತ್ತರಪ್ರದೇಶ ಸರ್ಕಾರಕ್ಕೂ ನ್ಯಾಯಾಲಯ ಸೂಚನೆ ನೀಡಿತ್ತು.

Kannada Bar & Bench
kannada.barandbench.com