ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರಿಗೆ ನೀಡಿದ್ದ ಆದೇಶಕ್ಕೆ ದೆಹಲಿ ಹೈಕೋರ್ಟ್ ಮಂಗಳವಾರ ತಡೆ ನೀಡಿದೆ.
ಚಡ್ಡಾ ಅವರನ್ನು ಮನೆಯಿಂದ ಖಾಲಿ ಮಾಡಿಸದಂತೆ ರಾಜ್ಯಸಭಾ ಸಚಿವಾಲಯಕ್ಕೆ ಈ ಹಿಂದೆ ವಿಚಾರಣಾ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ನವೀಕರಿಸಿದ್ದು ಮಧ್ಯಂತರ ಪರಿಹಾರ ಕೋರಿರುವ ಚಡ್ಡಾ ಅವರ ಅರ್ಜಿಯ ಸಂಬಂಧ ವಿಚಾರಣಾ ನ್ಯಾಯಾಲಯ ತೀರ್ಪು ನೀಡುವವರೆಗೆ ಅದು ಜಾರಿಯಲ್ಲಿರುತ್ತದೆ ಎಂದು ನ್ಯಾ. ಅನೂಪ್ ಜೆ ಭಂಭಾನಿ ಅವರಿದ್ದ ಪೀಠ ತಿಳಿಸಿದೆ.
ವಿಚಾರಣಾ ನ್ಯಾಯಾಲಯಕ್ಕೆ ಮೂರು ದಿನಗಳ ಒಳಗಾಗಿದ ದೂರು ಸಲ್ಲಿಸುವಂತೆಯೂ ನ್ಯಾಯಾಲಯ ಚಡ್ಡಾ ಅವರಿಗೆ ಸೂಚಿಸಿದೆ.
ರಾಜ್ಯಸಭಾ ಸಚಿವಾಲಯ ಸರ್ಕಾರಕ್ಕಿಂತಲೂ ಭಿನ್ನವಾದ ಸಂಸ್ಥೆಯಾಗಿರುವುದರಿಂದ ಚಡ್ಡಾ ಅವರ ಮೊಕದ್ದಮೆಗೆ ನಾಗರಿಕ ಪ್ರಕ್ರಿಯಾ ಸಂಹಿತೆ (ಸಿಪಿಸಿ) ಸೆಕ್ಷನ್ 80 ಅನ್ವಯವಾಗುವುದಿಲ್ಲ ಎಂದು ನ್ಯಾ. ಭಂಭಾನಿ ಅವರು ವಿವರವಾದ ತೀರ್ಪಿನಲ್ಲಿ ತಿಳಿಸಿದ್ದಾರೆ.
ಚಡ್ಡಾ ಅವರ ಅರ್ಹತೆಗಿಂತಲೂ ಅವರಿಗೆ ಮಂಜೂರು ಮಾಡಲಾದ ಬಂಗಲೆ ಹೆಚ್ಚಿರುವುದರಿಂದ ಮಂಜೂರಾತಿ ರದ್ದುಗೊಳಿಸಲಾಗಿದೆ ಎಂದು ತಿಳಿಸಿ ಅವರಿಗೆ ರಾಜ್ಯಸಭಾ ಸಚಿವಾಲಯ ಬೇರೊಂದು ಬಂಗಲೆ ನೀಡಿತ್ತು. ಇದಕ್ಕೆ ಶಾಶ್ವತ ತಡೆಯಾಜ್ಞೆ ನೀಡಬೇಕೆಂದು ಚಡ್ಡಾ ಕೋರಿದ್ದರು. ಅಂತೆಯೇ ಪಟಿಯಾಲಾ ಹೌಸ್ ನ್ಯಾಯಾಲಯ ಅವರಿಗೆ ಏಪ್ರಿಲ್ 18 ರಂದು ಮಧ್ಯಂತರ ಪರಿಹಾರ ನೀಡಿತ್ತು.
ಇದನ್ನು ಮರುಪರಿಶೀಲಿಸುವಂತೆ ರಾಜ್ಯಸಭಾ ಸಚಿವಾಲಯ ಕೋರಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಚಡ್ಡಾ ಅವರಿಗೆ ಮಧ್ಯಂತರ ಪರಿಹಾರಕ್ಕೆ ಅನುಮತಿಸುವಾಗ ಸಿಪಿಸಿ ಸೆಕ್ಷನ್ 80 (2) ನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಆದೇಶ ತೆರವುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಚಡ್ಡಾ ಹೈಕೋರ್ಟ್ ಮೆಟ್ಟಿಲೇರಿದ್ದರು.