ವಿಪಕ್ಷಗಳ ಒಕ್ಕೂಟಕ್ಕೆ 'ಇಂಡಿಯಾ' ಹೆಸರು: ಪಿಐಎಲ್‌ ವಿಚಾರಣೆಗೆ ಸುಪ್ರೀಂ ನಕಾರ

ಅರ್ಜಿಯನ್ನು ಪ್ರಚಾರಕ್ಕೋಸ್ಕರ ಸಲ್ಲಿಸಲಾಗಿದೆ ಎಂದು ಪೀಠ ಹೇಳಿದ ಬಳಿಕ ಅರ್ಜಿದಾರ ರೋಹಿತ್‌ ಖೇರಿವಾಲ್‌ ಅವರು ಅರ್ಜಿ ಹಿಂಪಡೆದರು.
INDIA alliance and Supreme Court
INDIA alliance and Supreme Court
Published on

ವಿರೋಧ ಪಕ್ಷಗಳು ತಮ್ಮ ಒಕ್ಕೂಟಕ್ಕೆ 'ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟ (ಇಂಡಿಯಾ)' ಎಂದು ಹೆಸರಿಟ್ಟಿರುವುದನ್ನು ಆಕ್ಷೇಪಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಶುಕ್ರವಾರ ನಿರಾಕರಿಸಿದೆ.  

ಪ್ರಚಾರಕ್ಕೋಸ್ಕರ ಅರ್ಜಿ ಸಲ್ಲಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌ ಮತ್ತು ಸುಧಾಂಶು ಧುಲಿಯಾ ಅವರಿದ್ದ ವಿಭಾಗೀಯ ಪೀಠ ಅಸಮಾಧಾನ ಸೂಚಿಸಿದ್ದರಿಂದ ಅರ್ಜಿದಾರ ರೋಹಿತ್‌ ಖೇರಿವಾಲ್‌ ಅವರು ಪಿಐಎಲ್‌ ಹಿಂಪಡೆದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ಏಕತ್ರವಾಗಿ ಹೋರಾಡುವ ಉದ್ದೇಶದಿಂದ 26 ವಿರೋಧ ಪಕ್ಷಗಳು ಒಕ್ಕೂಟವನ್ನು ಮಾಡಿಕೊಂಡಿದ್ದು, ಈ ಮೈತ್ರಿ ಕೂಟಕ್ಕೆ 'ಇಂಡಿಯಾ' ಹೆಸರಿಟ್ಟಿವೆ.

Also Read
ವಿಪಕ್ಷ ಒಕ್ಕೂಟಕ್ಕೆ ʼಇಂಡಿಯಾʼ ಹೆಸರು ಬಳಕೆ: 26 ರಾಜಕೀಯ ಪಕ್ಷಗಳು, ಆಯೋಗಕ್ಕೆ ದೆಹಲಿ ಹೈಕೋರ್ಟ್‌ನಿಂದ ನೋಟಿಸ್‌

'ಇಂಡಿಯಾ' ಮೈತ್ರಿಕೂಟದ ಹೆಸರನ್ನು ಆಕ್ಷೇಪಿಸಿ ಸಲ್ಲಿಕೆಯಾಗಿರುವ ಇದೇ ರೀತಿಯ ಮತ್ತೊಂದು ಪಿಐಎಲ್‌ ಸಂಬಂಧ ದೆಹಲಿ ಹೈಕೋರ್ಟ್‌ ಆಗಸ್ಟ್‌ 4ರಂದು 26 ವಿಪಕ್ಷಗಳು ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ನೋಟಿಸ್‌ ಜಾರಿಮಾಡಿದೆ. ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಅಮಿತ್‌ ಮಹಾಜನ್‌ ಅವರಿರುವ ವಿಭಾಗೀಯ ಪೀಠದಿಂದ ನೋಟಿಸ್‌ ಜಾರಿಯಾಗಿದೆ. ಸಾಮಾಜಿಕ ಕಾರ್ಯಕರ್ತ ಗಿರೀಶ್‌ ಭಾರದ್ವಾಜ್‌ ಎಂಬುವರು ಸಲ್ಲಿಸಿರುವ ಅರ್ಜಿಯಲ್ಲಿ ಲಾಂಛನಗಳು ಮತ್ತು ಹೆಸರುಗಳ (ಅನುಚಿತ ಬಳಕೆ ನಿಷೇಧ) ಕಾಯಿದೆ 1950ರ ಸೆಕ್ಷನ್‌ 2 ಮತ್ತು 3ರ ಅಡಿ ಇಂಡಿಯಾ ಹೆಸರು ಬಳಕೆಗೆ ನಿಷೇಧವಿದೆ ಎಂದು ವಾದಿಸಿದ್ದಾರೆ.

Kannada Bar & Bench
kannada.barandbench.com