ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ಸಂಸ್ಥೆಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ಸಂಹಿತೆ) ನಿಯಮಗಳು 2021 ಅನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ್ದು, ಪ್ರತಿಕ್ರಿಯಿಸುವಂತೆ ಆದೇಶಿಸಿದೆ (ಫೌಂಡೇಶನ್ ಆಫ್ ಇಂಡಿಪೆಂಡೆಂಟ್ ಜರ್ನಲಿಸಂ ಮತ್ತು ಇತರರು ವರ್ಸಸ್ ಭಾರತ ಸರ್ಕಾರ).
ಫೌಂಡೇಶನ್ ಆಫ್ ಇಂಡಿಪೆಂಡೆಂಟ್ ಜರ್ನಲಿಸಂ ಸಲ್ಲಿಸಿರುವ ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಏಪ್ರಿಲ್ 16ಕ್ಕೆ ವಿಚಾರಣೆ ಮುಂದೂಡಿದ್ದು, ಅಂದು ಪಕ್ಷಕಾರರನ್ನು ವಿಸ್ತೃತವಾಗಿ ಆಲಿಸುವುದಾಗಿ ಹೇಳಿದೆ.
ಮುಂದಿನ ವಿಚಾರಣೆಯವರೆಗೆ ಡಿಜಿಟಲ್ ಮಾಧ್ಯಮ ಸಂಸ್ಥೆಗಳ ವಿರುದ್ಧ ಯಾವುದೇ ದುರುದ್ದೇಶಪೂರಿತ ಕ್ರಮಕೈಗೊಳ್ಳದಂತೆ ಮಧ್ಯಂತರ ರಕ್ಷಣೆ ಒದಗಿಸುವಂತೆ ಅರ್ಜಿದಾರರು ನ್ಯಾಯಾಲಯವನ್ನು ಈ ವೇಳೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು ಒಂದೊಮ್ಮೆ ಅರ್ಜಿದಾರರ ವಿರುದ್ಧ ಯಾವುದೇ ತೆರನಾದ ಕ್ರಮಕೈಗೊಂಡರೆ ಅವರು ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದಿದೆ.
ಆನ್‌ಲೈನ್ ಮಾಧ್ಯಮ ಪೋರ್ಟಲ್‌ಗಳು ಮತ್ತು ಪ್ರಕಾಶಕರು, ಒಟಿಟಿ ವೇದಿಕೆಗಳು ಮತ್ತು ಸಾಮಾಜಿಕ ಮಾಧ್ಯಮ ಮಧ್ಯಸ್ಥದಾರರ ಕಾರ್ಯವೈಖರಿಯ ನಿಯಂತ್ರಣವನ್ನು ನಿಯಮಗಳು ಮಾಡಲಿವೆ. ನಿಯಮಗಳ ಪ್ರಕಾರ, ಇತರ ಸಾಮಾಜಿಕ ಮಾಧ್ಯಮ ಮಧ್ಯಸ್ಥ ಸಂಸ್ಥೆಗಳಿಗೆ ಹೋಲಿಸಿದರೆ 'ಗುರುತರ ಸಾಮಾಜಿಕ ಮಾಧ್ಯಮ ಮಧ್ಯಸ್ಥರಿಗೆ' ಕೆಲವು ಹೆಚ್ಚುವರಿ ಕಟ್ಟುಪಾಡುಗಳಿವೆ.
ಹೊಸ ನಿಯಮಗಳು ನಿರ್ದಿಷ್ಟವಾಗಿ ನವೀನ ಮಾಧ್ಯಮ ಮತ್ತು ಪ್ರಚಲಿತ ವಿದ್ಯಮಾನಗಳನ್ನು ನಿಯಂತ್ರಿಸುವ ವಿಚಾರದಲ್ಲಿ ತಮ್ಮ ಮಾತೃ ಕಾಯಿದೆಯಾದ ಮಾಹಿತಿ ತಂತ್ರಜ್ಞಾನ ಕಾಯಿದೆ 2000 ದ ಚೌಕಟ್ಟನ್ನು ಮೀರಿವೆ. ನೂತನ ನಿಯಮಗಳು "ಪ್ರಜಾಪ್ರಭುತ್ವದಲ್ಲಿ ಅನುಮತಿಸಬಹುದಾದ ಯಾವುದೇ ವಿಷಯಕ್ಕಿಂತ ದೂರ ಸಾಗುತ್ತವೆ" ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಅರ್ಜಿದಾರರ ಪರ ಹಿರಿಯ ವಕೀಲೆ ನಿತ್ಯಾ ರಾಮಕೃಷ್ಣನ್ ವಾದಿಸಿದರು.
ಫೌಂಡೇಶನ್ ಆಫ್ ಇಂಡಿಪೆಂಡೆಂಟ್ ಜರ್ನಲಿಸಂ ಮನವಿ ಸಲ್ಲಿಸಿದ್ದು, ಇದು ಪ್ರಕಟಿಸುವ 'ದ ವೈರ್'ನ ಸಂಸ್ಥಾಪಕ ನಿರ್ದೇಶಕರು, 'ದ ವೈರ್' ಸಂಸ್ಥಾಪಕ ಸಂಪಾದಕ ಎಂ ಕೆ ವೇಣು ಮತ್ತು 'ದ ನ್ಯೂಸ್ ಮಿನಿಟ್' ಪ್ರಧಾನ ಸಂಪಾದಕಿ ಧನ್ಯಾ ರಾಜೇಂದ್ರನ್ ಅರ್ಜಿದಾರರಾಗಿದ್ದಾರೆ.