ಚಾಟ್ ಜಿಪಿಟಿಯಿಂದ ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪ: ಎಎನ್ಐ ಅರ್ಜಿ ಕುರಿತಂತೆ ಓಪನ್ ಎಐಗೆ ದೆಹಲಿ ಹೈಕೋರ್ಟ್ ಸಮನ್ಸ್

ಹಕ್ಕುಸ್ವಾಮ್ಯ ಉಲ್ಲಂಘನೆಯ ಆರೋಪದ ಮೇಲೆ ಚಾಟ್ ಜಿಪಿಟಿ ವಿರುದ್ಧ ಭಾರತೀಯ ಮಾಧ್ಯಮ ಸಂಸ್ಥೆಯಾದ ಎಎನ್ಐ ಮೊಕದ್ದಮೆ ಹೂಡಿರುವ ಮೊದಲ ನಿದರ್ಶನ ಇದಾಗಿದೆ.
Open AI
Open AI
Published on

ಚಾಟ್‌ ಜಿಪಿಟಿಗೆ ಸಂಬಂಧಿಸಿದಂತೆ ತರಬೇತಿ ನೀಡಲು ಮತ್ತು ನಿರ್ವಹಿಸಲು ಅಮೆರಿಕಾದ ಕೃತಕ ಬುದ್ಧಿಮತ್ತೆ ಕಂಪನಿಯಾದ ಓಪನ್‌ಎಐ ತನ್ನ ವಸ್ತುವಿಷಯವನ್ನು ಅನಧಿಕೃತವಾಗಿ ಬಳಸಿಕೊಂಡಿದೆ ಎಂದು ಆರೋಪಿಸಿ ಭಾರತೀಯ ಮಾಧ್ಯಮ ಸಂಸ್ಥೆಯಾದ ಏಷ್ಯನ್ ನ್ಯೂಸ್ ಇಂಟರ್ನ್ಯಾಷನಲ್ (ಎಎನ್‌ಐ) ಹೂಡಿರುವ ಮೊಕದ್ದಮೆಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಂಗಳವಾರ ಓಪನ್‌ ಎಐಗೆ ಸಮನ್ಸ್‌ ನೀಡಿದೆ [ಎಎನ್‌ಐ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ ಮತ್ತು ಓಪನ್‌ ಎಐ ಇಂಕ್‌ ಇನ್ನಿತರರ ನಡುವಣ ಪ್ರಕರಣ].

ಎಎನ್‌ಐನ ವಸ್ತುವಿಷಯ, ಮಾಹಿತಿ ಬಳಸದಂತೆ ಅಧಿಕೃತ ಜಾಲತಾಣಕ್ಕೆ ಈಗಾಗಲೇ ನಿರ್ಬಂಧಿಸಲಾಗಿದೆ ಎಂಬ ಓಪನ್‌ ಎಐ ಹೇಳಿಕೆಯನ್ನು ನ್ಯಾಯಮೂರ್ತಿ ಅಮಿತ್ ಬನ್ಸಾಲ್ ಅವರು ಇದೇ ವೇಳೆ ದಾಖಲಿಸಿಕೊಂಡಿದ್ದಾರೆ.

Also Read
ಎಐ ಮಾದರಿಗಳ ಮೂಲಕ ವಸ್ತುವಿಷಯ ನಕಲು: ಮೈಕ್ರೋಸಾಫ್ಟ್, ಓಪನ್ ಎಐ ವಿರುದ್ಧ ಮೊಕದ್ದಮೆ ಹೂಡಿದ ನ್ಯೂಯಾರ್ಕ್ ಟೈಮ್ಸ್

ಚಾಟ್‌ಜಿಪಿಟಿಯಂತಹ ಎಐ ಮಾದರಿಗಳ ಹಕ್ಕುಸ್ವಾಮ್ಯ ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ವಸ್ತುವಿಷಯದ ಬಳಕೆಗೆ ಸಂಬಂಧಿಸಿದ ಸಮಸ್ಯೆಯ ಪ್ರಾಮುಖ್ಯತೆಯನ್ನು ಪರಿಗಣಿಸಿ, ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯನ್ನು ನೇಮಿಸುವುದಾಗಿ ನ್ಯಾಯಾಲಯ ಹೇಳಿದೆ.

ಚಾಟ್‌ಜಿಪಿಟಿ ವಿರುದ್ಧ ಮಧ್ಯಂತರ ನಿರ್ದೇಶನಗಳನ್ನು ಕೋರಿ ಎಎನ್‌ಐ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಓಪನ್‌ಎಐಗೆ ನೋಟಿಸ್ ನೀಡಿದೆ.

ಚಾಟ್‌ಜಿಪಿಟಿ ಎಂಬುದು ಓಪನ್‌ ಎಐ ಅಭಿವೃದ್ಧಿಪಡಿಸಿರುವ  ಕೃತಕ ಬುದ್ಧಿಮತ್ತೆ ಚಾಟ್‌ಬಾಟ್ ಆಗಿದ್ದು ಅದು ತನ್ನ ಬಳಕೆದಾರರ ಪ್ರಶ್ನೆಗಳಿಗೆ ಉತ್ತರಿಸುತ್ತದೆ.

ಎಎನ್‌ಐ ಪರ ಹಾಜರಾದ ವಕೀಲ ಸಿದ್ದಾಂತ್ ಕುಮಾರ್, ಕೇವಲ ಸುದ್ದಿ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿದೆ ಎಂದು, ಓಪನ್‌ ಎಐ ಅದನ್ನು ಬಳಸುವ ಇಲ್ಲವೇ ಸಂಗ್ರಹಿಸುವ ಅದರ ಪ್ರತಿಗಳನ್ನು ಮಾಡಿ ಸಂಗ್ರಹಿಸಿಕೊಳ್ಳುವ ಹಕ್ಕು ಪಡೆಯುವುದಿಲ್ಲ ಎಂದು ವಾದಿಸಿದರು. ಅಲ್ಲದೆ ಚಾಟ್‌ ಜಿಪಿಟಿ ಸುಳ್ಳು ಮಾಹಿತಿಯನ್ನು ನೀಡುತ್ತಿದೆ ಎಂದು ಎಎನ್‌ಐ ದೂರಿತು.

ಚಾಟ್‌ಜಿಪಿಟಿ ಎಎನ್‌ಐ ಮಾಹಿತಿ ಸಂಗ್ರಹಿಸದಂತೆ ಎಎನ್‌ಐನ ಜಾಲತಾಣವನ್ನು ನಿರ್ಬಂಧಿಸುವುದಾಗಿ ಓಪನ್‌ ಎಐ ಹೇಳಿದೆಯಾದರೂ ಎಎನ್‌ಐನ ವಸ್ತುವಿಷಯವನ್ನು ಬೇರೆ ಜಾಲತಾಣಗಳು ಇಲ್ಲವೇ ಸುದ್ದಿ ಸಂಸ್ಥೆಗಳು ಬಳಸಿಕೊಂಡಿರುವುದರಿಂದ ಪ್ರಾಯೋಗಿಕ ತೊಂದರೆ ಇದೆ ಎಂದು ಕುಮಾರ್‌ ಹೇಳಿದರು. ಈ ನಿರ್ದಿಷ್ಟ ಸಮಸ್ಯೆಯನ್ನು ನಂತರ ಪರಿಶೀಲಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.

"ಉಳಿದ ವಿಚಾರಗಳ ಬಗ್ಗೆ ನ್ಯಾಯಾಲಯ ತೀರ್ಪು ನೀಡುತ್ತದೆ" ಎಂದು ನ್ಯಾಯಮೂರ್ತಿ ಬನ್ಸಾಲ್ ಸ್ಪಷ್ಟಪಡಿಸಿದ್ದಾರೆ.

Also Read
ಸಂಶೋಧನೆ, ಕರಡು ರಚನೆಗೆ ಎಐ ಬಳಸಿಕೊಳ್ಳಬಹುದೇ ವಿನಾ ಅದು ನ್ಯಾಯಾಧೀಶರ ಸ್ಥಾನ ತುಂಬದು: ನ್ಯಾ. ಕೌಲ್

ಹಕ್ಕುಸ್ವಾಮ್ಯ ಉಲ್ಲಂಘನೆಯ ಆರೋಪದ ಮೇಲೆ ಭಾರತೀಯ ಮಾಧ್ಯಮ ಸಂಸ್ಥೆಯಾದ ಎಎನ್‌ಐ ಚಾಟ್‌ ಜಿಪಿಟಿ ವಿರುದ್ಧ ಮೊಕದ್ದಮೆ ಹೂಡಿರುವ ಮೊದಲ ನಿದರ್ಶನ ಇದಾಗಿದೆ.

 ಇತ್ತೀಚೆಗೆ ತರಬೇತಿ ನೀಡಲೆಂದು ತನ್ನ ವಸ್ತುವಿಷಯವನ್ನು ಬಳಸುತ್ತಿರುವ ಓಪನ್‌ ಎಐ ವಿರುದ್ಧ ಅಮೆರಿಕದ ಪತ್ರಿಕೆ ನ್ಯೂಯಾರ್ಕ್‌ ಟೈಮ್ಸ್‌ ಮೊಕದ್ದಮೆ ಹೂಡಿತ್ತು. ಮೈಕ್ರೋಸಾಫ್ಟ್‌ನ ಕೊಪೈಲಟ್‌ ಮತ್ತು ಗೂಗಲ್‌ನ ಬಾರ್ಡ್ ಎಐ ಸಹ ಇದೇ ಸಮಸ್ಯೆಯ ಮೇಲೆ ಮೊಕದ್ದಮೆ ಎದುರಿಸಿವೆ.

Kannada Bar & Bench
kannada.barandbench.com