ಗೆಟ್ ಔಟ್ ಅಲೈವ್ ವಿತ್ ಬೇರ್ ಗ್ರಿಲ್ಸ್ ಕಾರ್ಯಕ್ರಮ ಹಕ್ಕುಸ್ವಾಮ್ಯ ಉಲ್ಲಂಘಿಸಿದೆ ಎಂದು ಅರ್ಮಾನ್ ಶರ್ಮಾ ಎಂಬ ಭಾರತೀಯ ಬರಹಗಾರ ಮತ್ತು ನಿರ್ಮಾಪಕರು ಸಲ್ಲಿಸಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಶುಕ್ರವಾರ ಬ್ರಿಟಿಷ್ ಸಾಹಸಿ ಬೇರ್ ಗ್ರಿಲ್ಸ್ ಮತ್ತಿತರರಿಗೆ ಸಮನ್ಸ್ ಜಾರಿ ಮಾಡಿದೆ [ಅರ್ಮಾನ್ ಶಂಕರ್ ಶರ್ಮಾ ಅಲಿಯಾಸ್ ಸಮೀರ್ ಶಂಕರ್ ಭಟ್ಟಾಚಾರ್ಯ ಮತ್ತು ಬೇರ್ ಗ್ರಿಲ್ಸ್ ಇನ್ನಿತರರ ನಡುವಣ ಪ್ರಕರಣ].
ಮನರಂಜನಾ ಕಂಪನಿ ವಾರ್ನರ್ ಬ್ರದರ್ಸ್, ಡಿಸ್ಕವರಿ, ಟಿವಿ ವಾಹಿನಿ ನ್ಯಾಷನಲ್ ಜಿಯಾಗ್ರಫಿ ಹಾಗೂ ಓಟಿಟಿ ವೇದಿಕೆ ಹಾಟ್‌ಸ್ಟಾರ್‌ಗೂ ನ್ಯಾ. ಅಮಿತ್ ಬನ್ಸಾಲ್ ಅವರ ಪೀಠ ಸಮನ್ಸ್ ನೀಡಿದೆ. ಈ ಮಧ್ಯೆ ಗ್ರಿಲ್ ಪರ ವಕೀಲರ ಮನವಿ ಹಿನ್ನೆಲೆಯಲ್ಲಿ ನ್ಯಾಯಾಲಯ ಕಕ್ಷಿದಾರರನ್ನು ಮಧ್ಯಸ್ಥಿಕೆಗೆ ಉಲ್ಲೇಖಿಸಿತು. ದೆಹಲಿ ಹೈಕೋರ್ಟ್ ಜನವರಿ 17, 2023 ಕ್ಕೆ ಮಧ್ಯಸ್ಥಿಕೆ ಕೇಂದ್ರಕ್ಕೆ ಪ್ರಕರಣವನ್ನು ವಹಿಸಿದೆ. ನ್ಯಾಯಾಲಯ ಫೆಬ್ರವರಿ 22 ರಂದು ಮೊಕದ್ದಮೆಯನ್ನು ಆಲಿಸಲಿದೆ.
ಚಿತ್ರ ಕಥೆಗಾರ, ಬರಹಗಾರ ಟಿವಿ ಹಾಗೂ ಸಿನಿಮಾ ನಿರ್ಮಾಪಕರಾಗಿರುವ ತಾವು 2009ರಲ್ಲಿ ಬರೆದ ʼಆಖ್ರಿ ಧಮ್ ತಕ್ʼ ರಿಯಾಲಿಟಿ ಕಾರ್ಯಕ್ರಮವನ್ನು 2013ರಲ್ಲಿ ಆರಂಭವಾದ ʼಗೆಟ್ ಔಟ್ ಅಲೈವ್ ವಿತ್ ಬೇರ್ ಗ್ರಿಲ್ಸ್ ಶೋʼ ಅನುಕರಿಸಿದೆ ಎಂದು ಅರ್ಮಾನ್ ವಾದಿಸಿದ್ದಾರೆ.
ತಾವು ಹಕ್ಕು ಸ್ವಾಮ್ಯ ಪಡೆದಿದ್ದ ಕಾರ್ಯಕ್ರಮದ ಬರೆಹವನ್ನು ಡಿಸ್ಕವರಿ ವಾಹಿನಿಗೆ ಸಲ್ಲಿಸಲಾಗಿತ್ತು. ಆದರೆ ತನ್ನ ರಿಯಾಲಿಟಿ ಕಾರ್ಯಕ್ರಮ ಪರಿಕಲ್ಪನೆಯ ಅಗತ್ಯಗಳನ್ನು ಪೂರೈಸುತ್ತಿಲ್ಲ ಎಂದು ವಾಹಿನಿ ಹೇಳಿತ್ತು. ಆದಾಗ್ಯೂ, ಆಘಾತಕಾರಿಯಾಗಿ, ಮಾರ್ಚ್ 2022 ರಲ್ಲಿ ಪ್ರತಿವಾದಿಗಳು ತಮ್ಮ ಹಕ್ಕುಸ್ವಾಮ್ಯ ಉಲ್ಲಂಘಿಸಿರುವುದು ತಿಳಿದು ಬಂತು. ಕಾರ್ಯಕ್ರಮವನ್ನು ಪ್ರತಿವಾದಿ ನಂ. 1, 2 ಮತ್ತು 4 ನಿರ್ಮಿಸುತ್ತಿದ್ದು ಇದು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದೆ. ತಾವು ಕೃತಿಸ್ವಾಮ್ಯ ಹೊಂದಿರುವ ಕಾರ್ಯಕ್ರಮದಂತೆಯೇ ಗ್ರಿಲ್ಸ್ ಅವರ ಕಾರ್ಯಕ್ರಮ ಇದೆ" ಎಂದು ಅರ್ಜಿಯಲ್ಲಿ ದೂರಲಾಗಿದೆ.