
ಆರ್ಯನ್ ಖಾನ್ ನಿರ್ದೇಶನದ ನೆಟ್‌ಫ್ಲಿಕ್ಸ್ ವೆಬ್ ಸರಣಿ 'ದ ಬಾ***ಡ್ಸ್ ಆಫ್ ಬಾಲಿವುಡ್' ನಲ್ಲಿ ತಮ್ಮನ್ನು ಹೋಲುವಂತೆ ಚಿತ್ರಿಸಿರುವ ದೃಶ್ಯಗಳಿಗೆ ತಡೆ ನೀಡಿ ಅವುಗಳನ್ನು ತೆಗೆದುಹಾಕಬೇಕು ಎಂದು ಕೋರಿ ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿ ಸಮೀರ್ ವಾಂಖೆಡೆ ಅವರು ಹೂಡಿರುವ ಮಾನಹಾನಿ ಮೊಕದ್ದಮೆಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಬುಧವಾರ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್, ನೆಟ್‌ಫ್ಲಿಕ್ಸ್, ಗೂಗಲ್, ಎಕ್ಸ್ ಕಾರ್ಪ್ ಹಾಗೂ ಮೆಟಾ ಸಂಸ್ಥೆಗಳಿಗೆ ಸಮನ್ಸ್ ಜಾರಿ ಮಾಡಿದೆ [ಸಮೀರ್ ಜ್ಞಾನದೇವ್ ವಾಂಖೆಡೆ ಮತ್ತು ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ಸ್ ಪ್ರೈ. ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ].
ನ್ಯಾಯಮೂರ್ತಿ ಪುರುಷೀಂದ್ರ ಕುಮಾರ್ ಕೌರವ್ ಅವರು ಪ್ರತಿವಾದಿಗಳಿಗೆ ಸಮನ್ಸ್ ಜಾರಿ ಮಾಡಿ ಪ್ರತಿಕ್ರಿಯೆ ಕೇಳಿದರು. ಪ್ರತಿಕ್ರಿಯೆ ಪಡೆಯದೆ ಸಾಮಾನ್ಯವಾಗಿ ತಡೆಯಾಜ್ಞೆ ನೀಡುವುದಿಲ್ಲ ಎಂದು ಅವರು ಹೇಳಿದರು. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 30ರಂದು ನಡೆಯಲಿದೆ.
ಮುಂಬೈನಲ್ಲಿ 2021ರಲ್ಲಿ ನಡೆದ ಮಾದಕವಸ್ತು ವಿರೋಧಿ ಕಾರ್ಯಾಚರಣೆ ವೇಳೆ ಮಾದಕವಸ್ತು ನಿಯಂತ್ರಣ ದಳದ ವಲಯ ನಿರ್ದೇಶಕರಾಗಿದ್ದ ವಾಂಖೆಡೆ ಅವರು ಬಾಲಿವುಡ್ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಅವರನ್ನು ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯಿದೆಯಡಿ ಬಂಧಿಸಿದ್ದರು. ಪ್ರಕರಣ ದೇಶಾದ್ಯಂತ ಸಂಚಲನ ಉಂಟು ಮಾಡಿತ್ತು.
ಪ್ರಸಕ್ತ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಆರ್ಯನ್ ಖಾನ್ ನಿರ್ದೇಶನದ 'ದ ಬಾ***ಡ್ಸ್ ಆಫ್ ಬಾಲಿವುಡ್' ವೆಬ್ ಸರಣಿಯಲ್ಲಿ ತನ್ನನ್ನು ಹೋಲುವ ಪಾತ್ರವಿದ್ದು ಆ ಪಾತ್ರದ ಮೂಲಕ ತನ್ನನ್ನು ಅಪಹಾಸ್ಯ ಮಾಡಲಾಗಿದೆ ಎಂದು ಸಮೀರ್ ವಾಂಖೆಡೆ ದೂರಿದ್ದಾರೆ.
ವಾಂಖೆಡೆ ಅವರು ಮಾನಹಾನಿಕರ ವಿಷಯವನ್ನು ತೆಗೆದುಹಾಕುವಂತೆ ಮತ್ತು ತಮ್ಮ ಬಗ್ಗೆ ಯಾವುದೇ ಮಾನಹಾನಿಕರ ಹೇಳಿಕೆಗಳನ್ನು ನೀಡುವುದು, ಪ್ರಕಟಿಸುವುದು ಮತ್ತು ಪ್ರಸಾರ ಮಾಡುವುದನ್ನು ತಡೆಯಲು ತಡೆಯಾಜ್ಞೆ ನೀಡುವಂತೆ ಕೋರಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಂಬಂಧಿತ ವಿಷಯವನ್ನು ರಚಿಸುವ ಅನಾಮಧೇಯ ವಸ್ತು ವಿಷಯ ಸೃಷ್ಟಿಕರ್ತರು, ನಿರೂಪಕರು, ಪ್ರಕಾಶಕರ ವಿರುದ್ಧವೂ ಅವರು ತಡೆಯಾಜ್ಞೆ ಬಯಸಿದ್ದರು.
ಪ್ರಕರಣದ ಸಂಬಂಧ ನಟ ಶಾರುಖ್ ಖಾನ್ ಮತ್ತು ಅವರ ಪತ್ನಿ ಗೌರಿ ಖಾನ್ ಒಡೆತನದ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್, ನೆಟ್‌ಫ್ಲಿಕ್ಸ್, 'ಎಕ್ಸ್' ಕಾರ್ಪ್, ಗೂಗಲ್, ಮೆಟಾ ಮತ್ತು ಆರ್‌ಪಿಜಿ ಲೈಫ್‌ಸ್ಟೈಲ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಮಾಧ್ಯಮ ಸಂಸ್ಥೆ ವಿರುದ್ಧ ವಾಂಖೆಡೆ ಮಾನನಷ್ಟ ದಾವೆ ಹೂಡಿದ್ದು ₹2 ಕೋಟಿ ಪರಿಹಾರ ಕೋರಿದ್ದಾರೆ.