ಶಾರ್ದೂಲ್ ಅಮರಚಂದ್ ಮಂಗಲದಾಸ್ ಕಾನೂನು ಸಂಸ್ಥೆಯ ವಾಣಿಜ್ಯ ಚಿಹ್ನೆ ಉಲ್ಲಂಘಿಸದಂತೆ ಅಪರಿಚಿತರಿಗೆ ದೆಹಲಿ ಹೈಕೋರ್ಟ್ ಆದೇಶ

ಅಪರಿಚಿತರು ತನ್ನ ಹೆಸರು ಮತ್ತು ವಾಣಿಜ್ಯ ಚಿಹ್ನೆ ಬಳಸಿಕೊಂಡು ಜನರಿಗೆ ಲೀಗಲ್ ನೋಟಿಸ್ ಕಳುಹಿಸಿ ಹಣಕ್ಕಾಗಿ ಬೇಡಿಕೆಯಿಡುತ್ತಿದ್ದಾರೆ ಎಂದು ಶಾರ್ದೂಲ್ ಅಮರಚಂದ್ ಮಂಗಲದಾಸ್ ಸಂಸ್ಥೆ ಹೈಕೋರ್ಟ್ ಮೊರೆ ಹೋಗಿತ್ತು.
Shardul Amarchand Mangaldas and Delhi High Court
Shardul Amarchand Mangaldas and Delhi High Court
Published on

ಪ್ರಸಿದ್ಧ ಕಾನೂನು ಸಂಸ್ಥೆ ಶಾರ್ದೂಲ್ ಅಮರಚಂದ್ ಮಂಗಲದಾಸ್  ಹೆಸರು ವಾಣಿಜ್ಯ ಚಿಹ್ನೆಯನ್ನು ಅಪರಿಚಿತರು ಉಲ್ಲಂಘಿಸದಂತೆ ನಿರ್ಬಂಧಿಸಿ ದೆಹಲಿ ಹೈಕೋರ್ಟ್‌ ಈಚೆಗೆ ಆದೇಶ ಹೊರಡಿಸಿದೆ [ಶಾರ್ದೂಲ್ ಅಮರಚಂದ್ ಮಂಗಲದಾಸ್ ಅಂಡ್‌ ಕೋ ಮತ್ತು ಅಪರಿಚಿತರ ನಡುವಣ ಪ್ರಕರಣ ]

ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷ ಡಾ ಶಾರ್ದೂಲ್ ಎಸ್ ಶ್ರಾಫ್ ಅಥವಾ ಸಂಸ್ಥೆಯ ಯಾವುದೇ ಪಾಲುದಾರರು ಇಲ್ಲವೇ ಸದಸ್ಯರ ಹೆಸರು ಅಥವಾ ಚಿತ್ರವನ್ನು ಬಳಸದಂತೆ ಆಗಸ್ಟ್ 7ರಂದು ಹೊರಡಿಸಿದ ಆದೇಶದಲ್ಲಿ, ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರು  ತಿಳಿಸಿದ್ದಾರೆ.

Also Read
ವಾಣಿಜ್ಯ ಚಿಹ್ನೆ ಉಲ್ಲಂಘನೆ: ಭಾರತೀಯ ಕಂಪೆನಿ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಇಲಾನ್ ಮಸ್ಕ್ ಒಡೆತನದ ಟೆಸ್ಲಾ

ಅನಾಮಧೇಯ ವ್ಯಕ್ತಿಗಳ ವಿರುದ್ಧ ಹೊರಡಿಸಲಾಗುವ ಆದೇಶಗಳು (ಜಾನ್‌ ಡೋ ಆದೇಶ) ಅನಾಮಧೇಯ ಪಕ್ಷಕಾರರು ಕಾರ್ಯಾಚರಿಸದಂತೆ ತಡೆಯುತ್ತವೆ. ಪ್ರಕರಣ ಅಥವಾ ವ್ಯಾಜ್ಯದಲ್ಲಿ ಹಲವು ಅಪರಿಚಿತ ವ್ಯಕ್ತಿಗಳು ಭಾಗಿಯಾಗಿದ್ದು ಅವರ ಗುರುತು ಪತ್ತೆ ಹಚ್ಚಲು ಸಾಧ್ಯವಾಗದಿದ್ದಾಗ ಹೊರಡಿಸುವ ಆದೇಶಗಳನ್ನು ಜಾನ್‌ ಡೋ ಆದೇಶಗಳೆಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಬೌದ್ಧಿಕ ಆಸ್ತಿ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಲ್ಲಿ ಇಂತಹ ಆದೇಶಗಳನ್ನು ಹೊರಡಿಸಲಾಗುತ್ತದೆ.

ಕಂಪೆನಿಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವ ನಕಲಿ ಇಮೇಲ್‌ ಐಡಿಗಳನ್ನು ನಿರ್ಬಂಧಿಸುವಂತೆ ಮತ್ತು ಅವುಗಳೊಂದಿಗೆ ಸಂಯೋಜಿತವಾಗಿರುವ ಫೋನ್‌ ಸಂಖ್ಯೆ ಬಹಿರಂಗಪಡಿಸುವಂತೆ ಸರ್ಚ್‌ ಎಂಜಿನ್‌ ಗೂಗಲ್‌ಗೆ ಆದೇಶಿಸಿರುವ ನ್ಯಾಯಾಲಯ  ದೂರವಾಣಿ ಸಂಖ್ಯೆಗಳನ್ನು ನಿಷ್ಕ್ರಿಯಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

Also Read
ಐಕಿಯ ವಾಣಿಜ್ಯ ಚಿಹ್ನೆ ಬಳಸಿ ವಂಚನೆ: ಜಾಲತಾಣ, ಆ್ಯಪ್‌, ವಾಟ್ಸಾಪ್ ಖಾತೆ ತೆರವಿಗೆ ದೆಹಲಿ ಹೈಕೋರ್ಟ್ ಆದೇಶ

ಅಪರಿಚಿತ ವ್ಯಕ್ತಿಗಳು ಸಂಸ್ಥೆಯ ಹೆಸರು, ಲೋಗೋ ಮತ್ತು ಡಾ.ಶ್ರಾಫ್ ಅವರ ಚಿತ್ರವನ್ನು ಬಳಸಿಕೊಂಡು ಜನರಿಗೆ ಲೀಗಲ್‌ ನೋಟಿಸ್‌, ಇಮೇಲ್‌ ಮತ್ತು ಪತ್ರಗಳನ್ನು ಕಳುಹಿಸಿ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಕಂಪೆನಿ ದೂರಿತ್ತು.

ದೊಡ್ಡ ಜನರ ಗುಂಪೇ ಈ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಸಾಧ್ಯತೆ ಇದ್ದು ಸಂಸ್ಥೆಯ ಖ್ಯಾತಿಗೆ ಧಕ್ಕೆ ಒದಗಿದೆ ಎಂದು ವಾದಿಸಲಾಗಿತ್ತು.

Kannada Bar & Bench
kannada.barandbench.com