ಭಾರತದಲ್ಲಿ 5ಜಿ ತರಂಗಾಂತರ ಬಳಕೆಯ ವಿರುದ್ಧ ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ದೆಹಲಿ ಹೈಕೋರ್ಟ್ ವಜಾಗೊಳಿಸಿದೆ (ಜೂಹಿ ಚಾವ್ಲಾ ವರ್ಸಸ್ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಮಂಡಳಿ ಮತ್ತು ಇತರರು).
ಮಾಧ್ಯಮಗಳ ಮೂಲಕ ಪ್ರಚಾರ ಗಿಟ್ಟಿಸುವ ಉದ್ದೇಶದಿಂದ ಮೊಕದ್ದಮೆ ಹೂಡಿರುವ ಸಾಧ್ಯತೆ ಇದೆ ಎಂದಿರುವ ಪೀಠವು ಚಾವ್ಲಾ ಮತ್ತು ಇತರೆ ಫಿರ್ಯಾದುದಾರರಿಗೆ ರೂ. 20 ಲಕ್ಷ ದಂಡ ವಿಧಿಸಿದೆ. “ಫಿರ್ಯಾದಿಗಳು ಕಾನೂನು ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಅವರಿಗೆ ರೂ. 20 ಲಕ್ಷ ದಂಡ ವಿಧಿಸಲಾಗಿದೆ. ಪ್ರಕರಣದ ವಿಚಾರಣೆಯ ಲಿಂಕ್ ಅನ್ನು ಜೂಹಿ ಚಾವ್ಲಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಪ್ರಚಾರಕ್ಕಾಗಿ ದಾವೆ ಹೂಡಿರುವ ಸಾಧ್ಯತೆ ಇದೆ” ಎಂದು ನ್ಯಾಯಮೂರ್ತಿ ಜೆ ಆರ್ ಮಿಧಾ ಅವರ ನೇತೃತ್ವದ ಏಕಸದಸ್ಯ ಪೀಠ ತೀರ್ಪಿನಲ್ಲಿ ಹೇಳಿದೆ.
“ದೂರು ದೋಷಯುಕ್ತವಾಗಿದ್ದು, ನಿರ್ವಹಣೆಗೆ ಅರ್ಹವಾಗಿಲ್ಲ” ಎಂದು ನ್ಯಾಯಾಲಯ ಹೇಳಿದೆ. “ಅಫಿಡವಿಟ್‌ನಲ್ಲಿರುವ ಕೆಲವೇ ಕೆಲವು ಪ್ಯಾರಾಗಳ ಬಗ್ಗೆ ಮಾತ್ರ ತಮಗೆ ತಿಳಿದಿದೆ. ಅಲ್ಲಿನ ವಿಚಾರಗಳ ಬಗ್ಗೆ ವೈಯಕ್ತಿಕವಾಗಿ ಹೆಚ್ಚಿನ ತಿಳಿವಳಿಕೆ ಇಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ. ಹೀಗಾಗಿ, ದಾವೆಯು ನಿರ್ವಹಣೆಗೆ ಅರ್ಹವಲ್ಲ” ಎಂದು ತೀರ್ಪಿನಲ್ಲಿ ಪೀಠ ಹೇಳಿದೆ.
5ಜಿ ತರಂಗಾಂತರ ಬಳಕೆ ಸುರಕ್ಷತೆಯ ಬಗ್ಗೆ ಪ್ರಮಾಣೀಕರಿಸುವವರೆಗೆ ಅದನ್ನು ಜಾರಿಗೊಳಿಸಲು ಅನುಮತಿಸಬಾರದು ಎಂದು ಜೂಹಿ ಚಾವ್ಲಾ, ವೀರೇಶ್ ಮಲಿಕ್ ಮತ್ತು ಟೀನಾ ವಚನಿ ಅವರು ಹೈಕೋರ್ಟ್‌ನಲ್ಲಿ ದಾಖಲಿಸಿದ್ದ ದಾವೆಯಲ್ಲಿ ವಿವರಿಸಿದ್ದರು.