
ಸೈನಿಕರಿಗೆ ಅಂಗವೈಕಲ್ಯ ಪಿಂಚಣಿ ನೀಡುವುದನ್ನು ಪ್ರಶ್ನಿಸಿ ರಕ್ಷಣಾ ಸಚಿವಾಲಯ ಸಲ್ಲಿಸಿದ್ದ ಸುಮಾರು 300 ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ [ಭಾರತ ಒಕ್ಕೂಟ ಮತ್ತಿತರರು ಹಾಗೂ ನಿವೃತ್ತ ಸೇನಾಧಿಕಾರಿ ಕರ್ನಲ್ ಬಲ್ಬೀರ್ ಸಿಂಗ್ ಇನ್ನಿತರರ ನಡುವಣ ಪ್ರಕರಣ ].
ಸಶಸ್ತ್ರ ಪಡೆಗಳ ನ್ಯಾಯಮಂಡಳಿ (ಎಎಫ್‌ಟಿ) ಹೊರಡಿಸಿದ್ದ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ನವೀನ್ ಚಾವ್ಲಾ ಮತ್ತು ಶಾಲಿಂದರ್ ಕೌರ್ ಅವರಿದ್ದ ವಿಭಾಗೀಯ ಪೀಠ ಸಿಬ್ಬಂದಿ ಅಂಗವೈಕಲ್ಯ ಪಿಂಚಣಿಗೆ ಅರ್ಹರು ಎಂದಿದೆ.
ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಅಂಗವೈಕಲ್ಯ ಪಿಂಚಣಿ ನೀಡುವುದು ಔದಾರ್ಯಕ್ಕಲ್ಲ, ಬದಲಿಗೆ ರಾಷ್ಟ್ರಕ್ಕಾಗಿ ಅವರು ಮಾಡಿದ ತ್ಯಾಗಕ್ಕೆ ಸಲ್ಲಿಸಬೇಕಾದ ಗೌರವ ಎಂದು ನ್ಯಾಯಾಲಯ ಬುದ್ಧಿವಾದ ಹೇಳಿದೆ.
ಇಂತಹ ಪಿಂಚಣಿಯಿಂದ ಸೇವೆಯ ಕಾರಣಕ್ಕೆ ಅಂಗವೈಕಲ್ಯಕ್ಕೆ ತುತ್ತಾದ ಯೋಧನಿಗೆ ನೆರವು, ಆರ್ಥಿಕ ಭದ್ರತೆ ಹಾಗೂ ಘನತೆಯಿಂದ ಬದುಕಲು ಸಾಧ್ಯವಾಗುತ್ತದೆ. ಇದು ಧೈರ್ಯ ಮತ್ತು ಶ್ರದ್ಧೆಯಿಂದ ದೇಶಕ್ಕಾಗಿ ದುಡಿದ ಸೈನಿಕರೆಡೆಗೆ ಪ್ರಭುತ್ವ ನಿರ್ವಹಿಸಬೇಕಾದ ಜವಾಬ್ದಾರಿಯುತ ಕ್ರಮ ಎಂದು ಅದು ವಿವರಿಸಿದೆ.
ಅಂಗವೈಕಲ್ಯಕ್ಕೆ ತುತ್ತಾದ ಸೇನಾ ಸಿಬ್ಬಂದಿ ಸಂಘರ್ಷ ರಹಿತ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದರು ಎಂಬ ಒಂದೇ ಕಾರಣಕ್ಕೆ ಅವರಿಗೆ ಅಂಗವೈಕಲ್ಯ ಪಿಂಚಣಿ ನಿರಾಕರಿಸುವಂತಿಲ್ಲ. ಸೈನಿಕರು ಎದುರಿಸುತ್ತಿರುವ ನಿರಂತರ ದೈಹಿಕ ಮತ್ತು ಮಾನಸಿಕ ಒತ್ತಡವನ್ನು ಸರ್ಕಾರದ ಇಂತಹ ಗ್ರಹಿಕೆ ಗೌಣವಾಗಿಸುತ್ತದೆ ಎಂದು ಪೀಠ ಇದೇ ವೇಳೆ ತಿಳಿಸಿದೆ.
ಅತ್ಯಂತ ಕಠಿಣ ಮತ್ತು ವಿಪರೀತ ಹವಾಮಾನ ಮತ್ತು ಪರಿಸ್ಥಿತಿಗಳಲ್ಲಿ ಕರ್ತವ್ಯ ನಿರ್ವಹಿಸುವ ಸೈನಿಕರಿಗೆ ಬಂದೆರಗಿದ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ನ್ಯೂನತೆಗಳು ಸೇನಾ ಸೇವೆಯ ಕಾರಣಕ್ಕಲ್ಲ ಎಂದು ಸಾಬೀತುಪಡಿಸುವ ಜವಾಬ್ದಾರಿ ವೈದ್ಯಕೀಯ ಮಂಡಳಿಯ (ಆರ್‌ಎಂಬಿ) ಮೇಲಿದೆ ಎಂದು ಅದು ಹೇಳಿದೆ.
ಸೇನಾ ಸಿಬ್ಬಂದಿಯ ನಿಯೋಜನೆಯ ಸ್ಥಳವನ್ನು ಆಧರಿಸಿ ಅವರ ಹಕ್ಕನ್ನು ಸಂಪೂರ್ಣವಾಗಿ ತಿರಸ್ಕರಿಸುವಂತಿಲ್ಲ ಎಂದ ನ್ಯಾಯಾಲಯ, ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿತು.
ಸೇನೆಗೆ ಸಲ್ಲಿಸಿದ ಸೇವೆಯಿಂದಾಗಿ ಅರ್ಜಿದಾರ ಸೈನಿಕರಿಗೆ ಅಂಗವೈಕಲ್ಯ ಉಂಟಾಗಿಲ್ಲ. ಅವರು ಅಂಗವೈಕಲ್ಯ ಪಿಂಚಣಿಗೆ ಅರ್ಹರಲ್ಲ ಎಂದು ರಕ್ಷಣಾ ಸಚಿವಾಲಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಕೇಂದ್ರ ಸರ್ಕಾರದ ಅತ್ಯುನ್ನತ ಕಾನೂನು ಅಧಿಕಾರಿ ಅಟಾರ್ನಿ ಜನರಲ್ ಆರ್ ವೆಂಟಕರಮಣಿ ಸಚಿವಾಲಯದ ಪರವಾಗಿ ವಾದ ಮಂಡಿಸಿದರು.