
ಮೂವತ್ತಾರು ವರ್ಷಗಳ ಹಿಂದೆ ಮೂರ್ಛೆ ರೋಗಕ್ಕೆ ತುತ್ತಾಗಿ ಸೇವೆಯಿಂದ ಬಿಡುಗಡೆಯಾಗಿದ್ದ ಯೋದನಿಗೆ ಅಂಗವೈಕಲ್ಯ ಪಿಂಚಣಿ ಮತ್ತು ಬಾಕಿ ಹಣವನ್ನು ಪಾವತಿಸಲು ಸುಪ್ರೀಂ ಕೋರ್ಟ್ ಇತ್ತೀಚೆಗೆ ಭಾರತೀಯ ಸೇನೆಗೆ ಆದೇಶಿಸಿದೆ [ಬಿಜೇಂದರ್ ಸಿಂಗ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಿನ ಪ್ರಕರಣ].
ಜನವರಿ 1996 ರಿಂದ ಜೀವನಪರ್ಯಂತ ಜಾರಿಗೆ ಬರುವಂತೆ ಬಿಜೇಂದರ್ ಸಿಂಗ್ ಅವರಿಗೆ ಅಂಗವೈಕಲ್ಯ ಅಂಶದ ಆಧಾರದಲ್ಲಿ 50% ಅಂಗವೈಕಲ್ಯ ಪಿಂಚಣಿಯ ನೀಡುವಂತೆ ಸೇನೆಗೆ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಆದೇಶಿಸಿತು.
"ಬಾಕಿ ಪಾವತಿ ಮಾಡುವವರೆಗೆ ವಾರ್ಷಿಕ 6% ದರದಲ್ಲಿ ಬಡ್ಡಿ ಇರುತ್ತದೆ. ಮೇಲಿನ ನಿರ್ದೇಶನಗಳನ್ನು ಇಂದಿನಿಂದ ಮೂರು ತಿಂಗಳೊಳಗೆ ಪ್ರತಿವಾದಿಗಳು ಪಾಲಿಸಬೇಕು" ಎಂದು ನ್ಯಾಯಾಲಯ ಆದೇಶಿಸಿದೆ.
ಸಿಯಾಚಿನ್ ಹಿಮನದಿ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಿದ್ದರಿಂದ ತನಗೆ ಮೂರ್ಛೆ ರೋಗ ಆರಂಭವಾಯಿತು ಎಂದು ಸಿಂಗ್ ಹೇಳಿದ್ದರು; ಆದರೆ ಹೇಳಿಕೆಯನ್ನು ಸೇನೆ ತಿರಸ್ಕರಿಸಿತ್ತು.
ಸಶಸ್ತ್ರ ಪಡೆಗಳ ನೈತಿಕ ಸ್ಥೈರ್ಯಕ್ಕೆ ಸಂಪೂರ್ಣ ಮತ್ತು ಎದೆಗುಂದಿಸದಂತಹ ರಕ್ಷಣೆ ಅಗತ್ಯ. ಯಾವುದೇ ನ್ಯೂನತೆಗೆ ಪರಿಹಾರ ದೊರೆಯದೆ ಸೇವಾವಧಿ ಕಳೆದುಕೊಂಡರೆ ಆಗ ಈ ನೈತಿಕ ಸ್ಥೈರ್ಯ ತೀವ್ರವಾಗಿ ಕುಸಿಯುತ್ತದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿತು.
ಸೇವೆಗೆ ಸೇರುವ ಸಮಯದಲ್ಲಿ ಸದಸ್ಯರು ಯಾವುದೇ ನಿರ್ದಿಷ್ಟ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವೈದ್ಯಕೀಯ ಮಂಡಳಿಯ ವರದಿ ಇಲ್ಲದಿದ್ದರೆ, ಸೇನೆಗೆ ಸಲ್ಲಿಸಿದ ಸೇವೆಯ ಕಾರಣದಿಂದಾಗಿ ಸದಸ್ಯರು ಆ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಊಹಿಸಬೇಕು ಎಂದು ಕಾನೂನು ಸ್ಪಷ್ಟವಾಗಿ ಹೇಳುತ್ತದೆ ಎಂದು ನ್ಯಾಯಾಲಯ ವಿವರಿಸಿದೆ.
"ಆದ್ದರಿಂದ, ಈ ರೋಗ ಸೇನಾ ಸೇವೆಯಿಂದ ಉಂಟಾಗುವುದಿಲ್ಲ ಅಥವಾ ಉಲ್ಬಣಗೊಂಡಿಲ್ಲ ಎಂದು ಸಾಬೀತುಪಡಿಸುವ ಹೊರೆ ಸಂಪೂರ್ಣವಾಗಿ ಉದ್ಯೋಗದಾತರ ಮೇಲೆ ಇರುತ್ತದೆ. ಇದಲ್ಲದೆ, ಸಶಸ್ತ್ರ ಪಡೆಗಳ ಸದಸ್ಯರನ್ನು ಸೇವೆಯಿಂದ ಅಮಾನ್ಯಗೊಳಿಸಲಾದ ಯಾವುದೇ ಕಾಯಿಲೆ ಅಥವಾ ಅಂಗವೈಕಲ್ಯವು 20% ಕ್ಕಿಂತ ಹೆಚ್ಚಿದೆ ಎಂದು ಭಾವಿಸಿ 50% ಅಂಗವೈಕಲ್ಯ ಪಿಂಚಣಿ ಒದಗಿಸಬೇಕಾಗುತ್ತದೆ" ಎಂದು ನ್ಯಾಯಾಲಯ ಹೇಳಿದೆ.