ಪ್ರಸಿದ್ಧ ಶೂ ತಯಾರಿಕೆ ಕಂಪೆನಿ ಪೂಮಾದ ವಾಣಿಜ್ಯ ನಾಮ ಮತ್ತು ಅದರ ನೆಗೆಯುವ ಚಿರತೆಯ ಚಿಹ್ನೆಯ ಶೂಗಳನ್ನು ಮಾರಾಟ ಮಾಡಿದ್ದಕ್ಕಾಗಿ ಆಗ್ರಾ ಮೂಲದ ಶೂ ತಯಾರಕ ಸಂಸ್ಥೆಯೊಂದು ಪೂಮಾಗೆ ಗೆ ₹10 ಲಕ್ಷ ನಷ್ಟ ಪರಿಹಾರ ನೀಡಬೇಕು ಎಂದು ದೆಹಲಿ ಹೈಕೋರ್ಟ್ ಈಚೆಗೆ ಆದೇಶಿಸಿದೆ.
ಕುಂಕುಮ್ ಶೂಸ್ ಹೆಸರಿನಲ್ಲಿ ವ್ಯಾಪಾರ ಮಾಡುತ್ತಿದ್ದ ಆಗ್ರಾ ಮೂಲದ ಪ್ರತಿವಾದಿ ಅಶೋಕ್ ಕುಮಾರ್ ಪೂಮಾದ ಬ್ರಾಂಡ್ ಮಹತ್ವ ತಿಳಿದಿದ್ದರೂ ಉದ್ದೇಶಪೂರ್ವಜಕವಾಗಿ ಅದರ ನಕಲಿ ಉತ್ಪನ್ನ ತಯಾರಿಸಿ ಮಾರಾಟ ಮಾಡುವ ಮೂಲಕ ಪೂಮಾ ಬಗ್ಗೆ ಗ್ರಾಹಕರಿಗೆ ಇರುವ ಸದ್ಭಾವನೆ ಮತ್ತು ಅದರ ಖ್ಯಾತಿಯ ಮೇಲೆ ಸವಾರಿ ಮಾಡಲು ಯತ್ನಿಸಿದ್ದಾರೆ ಎಂದು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಹೇಳಿದ್ದಾರೆ.
ಸ್ಥಳೀಯ ಆಯುಕ್ತರ ವರದಿಯ ಪ್ರಕಾರ, ಕುಂಕುಮ್ ಶೂಸ್ ನಕಲಿ ಪೂಮಾ ಶೂಗಳನ್ನು ಮಾರಾಟ ಮಾಡಿ ಸುಮಾರು ₹18 ಲಕ್ಷದಿಂದ ₹19 ಲಕ್ಷದವರೆಗೆ ಲಾಭ ಗಳಿಸಿದೆ. ಹೀಗಾಗಿ ಪ್ರತಿವಾದಿ ₹10 ಲಕ್ಷ ನಷ್ಟ ಪರಿಹಾರ ಮತ್ತು ₹2 ಲಕ್ಷ ದಂಡ ಪಾವತಿಸುವಂತೆ ಪೂಮಾ ಪರ ತೀರ್ಪು ನೀಡಲು ದಾವೆ ಅರ್ಹವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಕಡಿಮೆ ಗುಣಮಟ್ಟದ ವಸ್ತುಗಳ ಮೇಲೆ ಪೂಮಾ ವಾಣಿಜ್ಯ ಚಿಹ್ನೆ ಬಳಸಿಉವುದರಿಂದ ಪೂಮಾದ ಶಾಸನಬದ್ಧ ಮತ್ತು ಸಾಮಾನ್ಯ ಕಾನೂನು ಹಕ್ಕುಗಳನ್ನು ಉಲ್ಲಂಘಿಸಿದಂತಾಗುವುದಲ್ಲದೆ ಅದರ ಬ್ರಾಂಡ್ ಈಕ್ವಿಟಿಗೆ ಧಕ್ಕೆ ಬರಲಿದ್ದು ಅದರ ಮೌಲ್ಯ ದುರ್ಬಲಗೊಳ್ಳಲಿದೆ ಎಂದು ಕೂಡ ಪೀಠ ಹೇಳಿದೆ.
"ತಪಾಸಣೆ ಮಾಡದೆ ಬಿಟ್ಟರೆ ಅಂತಹ ಉಲ್ಲಂಘನೆಯು ಗ್ರಾಹಕರ ಹಿತಾಸಕ್ತಿಗಳಿಗೆ ವಿರುದ್ಧವಾಗಿಬಿಡುತ್ತದೆ. ಏಕೆಂದರೆ ಅದನ್ನು ಬಳಸುವ ಸಾರ್ವಜನಿಕರು ನಕಲಿ ಉತ್ಪನ್ನ ಖರೀದಿಸಿ ಮತ್ತು ಫಿರ್ಯಾದಿಯ ಬ್ರಾಂಡ್ ಉತ್ಪನ್ನಗಳೆಂದು ಭಾವಿಸಿ ಹೆಚ್ಚಿನ ಬೆಲೆ ಪಾವತಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ, ಇಂತಹ ನಕಲಿ ಉತ್ಪನ್ನಗಳ ಮಾರಾಟವು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ” ಎಂದು ಅದು ವಿವರಿಸಿದೆ.
ಜೊತೆಗೆ ಪ್ರತಿವಾದಿ ವಿಚಾರಣೆಯಿಂದ ದೂರವಿರಲು ನಿರ್ಧರಿಸಿದ್ದರಿಂದ, ನ್ಯಾಯಾಲಯ ಶಾಶ್ವತ ತಡೆಯಾಜ್ಞೆ ವಿಧಿಸಿತು. ಪೂಮಾ ಪರವಾಗಿ ವಕೀಲರಾದ ರಂಜನ್ ನರುಲಾ ಮತ್ತು ಶಶಿ ಪಿ ಓಜಾ ವಾದ ಮಂಡಿಸಿದರು. ಆರೋಪಿ ಅಶೋಕ್ ಕುಮಾರ್ ಪರ ಯಾರೂ ಹಾಜರಾಗಿರಲಿಲ್ಲ.