
ಖ್ಯಾತ ಉದ್ಯಮಿ ಅಜೀಂ ಪ್ರೇಜ್ ಅವರಿಗೆ ಸೇರಿದ ಜಾಗತಿಕ ಬಂಡವಾಳ ಹೂಡಿಕೆ ಸಂಸ್ಥೆ ಪ್ರೇಮ್‌ಜಿ ಇನ್‌ವೆಸ್ಟ್ ಸಂಸ್ಥೆಯ ಹೆಸರು ದುರ್ಬಳಕೆ ಮಾಡಿಕೊಂಡು ಜನರನ್ನು ವಂಚಿಸುತ್ತಿದ್ದ ಆ್ಯಪ್, ಜಾಲತಾಣಗಳನ್ನು ನಿಷ್ಕ್ರಿಯಗೊಳಿಸುವಂತೆ ದೆಹಲಿ ಹೈಕೋರ್ಟ್ ಈಚೆಗೆ ಆದೇಶಿಸಿದೆ [ಪ್ರೇಮ್‌ಜಿ ಇನ್ವೆಸ್ಟ್‌ಮೆಂಟ್ ಅಡ್ವೈಸರಿ ಮತ್ತಿತರರು ಹಾಗೂ ಪ್ರೇಮ್‌ಜಿಎಕ್ಸ್ ಡಾಟ್ ಕಾಂ ನೋಂದಣಿದಾರರು ಮತ್ತಿತರರ ನಡುವಣ ಪ್ರಕರಣ]
ಪ್ರೇಮ್‌ಜಿ ಇನ್ವೆಸ್ಟ್‌ನ ವಾಣಿಜ್ಯ ಚಿಹ್ನೆಗಳು ಮತ್ತು ಕೃತಿಸ್ವಾಮ್ಯ ಉಲ್ಲಂಘಿಸದಂತೆ ಆ್ಯಪ್, ಜಾಲತಾಣಗಳ ಮಾಲೀಕರಿಗೆ ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಆಗಸ್ಟ್ 18ರಂದು ಹೊರಡಿಸಿದ ಆದೇಶದಲ್ಲಿ ನಿರ್ಬಂಧ ವಿಧಿಸಿದ್ದಾರೆ.
ಅಲ್ಲದೆ ಇದು ಬೇರೆಯವರಿಗೂ ಅನ್ವಯವಾಗುವಂತಹ ಪರಿಣಾಮಾತ್ಮಕ ಪ್ರತಿಬಂಧಕಾಜ್ಞೆಯಾಗಿದ್ದು ಇಂಥದ್ದೇ ಬೇರೆ ಜಾಲತಾಣಗಳು ಪ್ರೇಮ್‌ಜಿ ಇನ್‌ವೆಸ್ಟ್‌ನ ಬೌದ್ಧಿಕ ಆಸ್ತಿ ಉಲ್ಲಂಘಿಸುತ್ತಿರುವುದು ಕಂಡುಬಂದರೆ ಅವುಗಳಿಗೂ ಈ ಪ್ರತಿಬಂಧಕಾಜ್ಞೆ ಅನ್ವಯವಾಗುತ್ತದೆ ಎಂದು ಅದು ಹೇಳಿದೆ.
ಪ್ರೇಮ್‌ಜಿ ಇನ್‌ವೆಸ್ಟ್‌ಗೆ ಸೇರಿದ್ದು ಎಂಬಂತೆಯೇ ಭಾಸವಾಗುವ ನಕಲಿ ವೆಬ್‌ಸೈಟ್‌ಗಳು, ಡೊಮೇನ್‌ಗಳು, ಅಪ್ಲಿಕೇಶನ್‌ಗಳು ಸಾಮಾಜಿಕ ಮಾಧ್ಯಮ/ವಾಟ್ಸಾಪ್ ಮೂಲಕ ವಂಚನೆ ನಡೆಸುತ್ತಿರುವುದನ್ನು ತಡೆಯುವಂತೆ ಕೋರಿ ಸಂಸ್ಥೆ ಅರ್ಜಿ ಸಲ್ಲಿಸಿತ್ತು.
ಆ್ಯಪ್‌ಗಳು ಹಾಗೂ ಜಾಲತಾಣಗಳು ತಮ್ಮ ಬ್ರಾಂಡ್ ಹೆಸರು, ವಾಣಿಜ್ಯ ಹೆಸರು ಹಾಗೂ ವಾಣಿಜ್ಯ ಚಿಹ್ನೆಗಳನ್ನು ಅನಧಿಕೃತವಾಗಿ ಬಳಸುತ್ತಿದ್ದು ಬಳಕೆದಾರರು ತಮ್ಮ ಸಂಸ್ಥೆಯದ್ದೇ ಎಂದು ನಂಬುವಂತೆ ಅವು ಮೋಸಮಾಡುತ್ತಿವೆ ಎಂದು ಸಂಸ್ಥೆ ಅಳಲು ತೋಡಿಕೊಂಡಿತ್ತು.
ವಂಚನೆ ತಡೆಯದಿದ್ದರೆ ಅವರು ಪ್ರೇಮ್‌ಜಿ ಇನ್ವೆಸ್ಟ್ ವರ್ಚಸ್ಸಿಗೆ ಧಕ್ಕೆ ತರುತ್ತಾರೆ ಎಂದ ನ್ಯಾಯಾಲಯ ಅನ್ಯರಿಗೂ ಅನ್ವಯಿಸುವಂತಹ ಪರಿಮಾಣಾತ್ಮಕ ಪ್ರತಿಬಂಧಕಾಜ್ಞೆ ವಿಧಿಸಿತು.
ಅರ್ಜಿದಾರರು ಏಕಪಕ್ಷೀಯ ಆದೇಶ ನೀಡಲು ಅಗತ್ಯವಾದ ವಾದ ಮಂಡಿಸಿದ್ದಾರೆ. ಅನುಕೂಲತೆಯ ಸಮತೋಲನ ಅರ್ಜಿದಾರರ ಪರವಾಗಿಯೇ ಇದ್ದು ಈ ಹಂತದಲ್ಲಿ ಏಕಪಕ್ಷೀಯ ಆದೇಶ ನೀಡದೆ ಹೋದಲ್ಲಿ ಅರ್ಜಿದಾರರಿಗೆ ಸರಿಪಡಿಸಲಾಗದಷ್ಟು ನಷ್ಟ ಉಂಟಾಗುತ್ತದೆ ಎಂದು ತಿಳಿಸಿತು.
ಪ್ರೇಮ್‌ಜಿ ಇನ್‌ವೆಸ್ಟ್ ಪರವಾಗಿ ವಕೀಲರಾದ ಅನುಜ್ ಬೆರ್ರಿ, ಅನುಷಾ ರಮೇಶ್, ಗೌರಿ ಪಸ್ರಿಚಾ ಮತ್ತು ನಿತ್ಯಾ ಜೈನ್ ವಾದ ಮಂಡಿಸಿದರು.