'ಅಂದಾಜ್ ಅಪ್ನಾ ಅಪ್ನಾ' ಚಿತ್ರ ಬೌದ್ಧಿಕ ಆಸ್ತಿ ಹಕ್ಕಿನ ಉಲ್ಲಂಘನೆಗೆ ದೆಹಲಿ ಹೈಕೋರ್ಟ್ ತಡೆ

ನ್ಯಾಯಾಲಯವು ತೇಜ, ಕ್ರೈಮ್ ಮಾಸ್ಟರ್ ಗೋಗೋ, ಅಮರ್ ಮತ್ತು ಪ್ರೇಮ್‌ನಂತಹ ಪಾತ್ರಗಳ ಹೆಸರುಗಳನ್ನು ಅನಧಿಕೃತವಾಗಿ ಬಳಸದಂತೆ ರಕ್ಷಣೆ ನೀಡಿತು.
Andaz Apna Apna, Delhi high court
Andaz Apna Apna, Delhi high court
Published on

ಹಿಂದಿ ಚಲನಚಿತ್ರರಂಗದ ಹಾಸ್ಯ ಪ್ರಕಾರದಲ್ಲಿ ವಿಶಿಷ್ಟ ಸ್ಥಾನಗಗಳಿಸಿರುವ 1994ರ ʼಅಂದಾಜ್ ಅಪ್ನಾ ಅಪ್ನಾʼ ಚಿತ್ರಕ್ಕೆ ಸಂಬಂಧಿಸಿದ ಪಾತ್ರ, ಶೀರ್ಷಿಕೆ, ಸಂಭಾಷಣೆ ಮತ್ತು ಕಲಾತ್ಮಕ ಕೃತಿಗಳು ಸೇರಿದಂತೆ ವಿವಿಧ ಬೌದ್ಧಿಕ ಆಸ್ತಿಗಳನ್ನು ಅನಧಿಕೃತವಾಗಿ ಬಳಸದಂತೆ 30ಕ್ಕೂ ಹೆಚ್ಚು ಪಕ್ಷಕಾರರಿಗೆ ನಿರ್ಬಂಧ ವಿಧಿಸಿ ದೆಹಲಿ ಹೈಕೋರ್ಟ್ ಇತ್ತೀಚೆಗೆ ಮಧ್ಯಂತರ ಆದೇಶ ಹೊರಡಿಸಿದೆ.

ಚಿತ್ರದ ನಿರ್ಮಾಪಕ ವಿನಯ್ ಸಿನ್ಹಾ ಅವರ ಕಾನೂನುಬದ್ಧ ಉತ್ತರಾಧಿಕಾರಿ ಶಾಂತಿ ವಿನಯ್‌ಕುಮಾರ್ ಸಿನ್ಹಾ ಅವರ ಮೂಲಕ ವಿನಯ್ ಪಿಕ್ಚರ್ಸ್ ಸಲ್ಲಿಸಿದ್ದ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತ್ ಬನ್ಸಾಲ್ ಅವರು ಈ ಕುರಿತು ಏಕ ಪಕ್ಷೀಯ ಮಧ್ಯಂತರ ತಡೆಯಾಜ್ಞೆ ನೀಡಿದರು. ಸರಕುಗಳು, ಡಿಜಿಟಲ್ ವಸ್ತುವಿಷಯ, ಡೊಮೇನ್ ಹೆಸರುಗಳು ಮತ್ತು ಎಐ ರೂಪಿತ ವಸ್ತುಗಳ ಮೂಲಕ ಹಕ್ಕುಸ್ವಾಮ್ಯ ಮತ್ತು  ವಾಣಿಜ್ಯ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಅರ್ಜಿದಾರರು ಪರಿಹಾರ ಕೋರಿದ್ದರು.

Also Read
ಬೌದ್ಧಿಕ ಆಸ್ತಿ ಹಕ್ಕು ರಕ್ಷಣೆ: ದೆಹಲಿ ಹೈಕೋರ್ಟ್ ಬಗ್ಗೆ ಅಮೆರಿಕ ಸರ್ಕಾರದ ಅಂಗಸಂಸ್ಥೆ ಮೆಚ್ಚುಗೆ [ಚುಟುಕು]

ದಿವಂಗತ ವಿನಯ್ ಸಿನ್ಹಾ ನಿರ್ಮಿಸಿದ 'ಅಂದಾಜ್ ಅಪ್ನಾ ಅಪ್ನಾ' ಚಿತ್ರ ಇಂದಿಗೂ ಜನಪ್ರಿಯವಾಗಿದ್ದು ಸಾಂಸ್ಕೃತಿಕ ಪ್ರಸ್ತುತತೆಯಿಂದ ಕೂಡಿದೆ. ಚಿತ್ರದ ಶೀರ್ಷಿಕೆ, ಸಾಹಿತ್ಯಿಕ ಮತ್ತು ನಾಟಕೀಯ ಕೃತಿಗಳು ಮತ್ತು ಪಾತ್ರಗಳ ಮೇಲೆ ತಮಗೆ ವಿಶೇಷ ಒಡೆತನ ಇದೆ ಎಂದು ಅರ್ಜಿದಾರರು ಹೇಳಿದ್ದರು.

"ಅರ್ಜಿದಾರರು ಮೇಲ್ನೋಟಕ್ಕೆ ಪ್ರಕರಣ ಸಾಬೀತುಪಡಿಸಿದ್ದಾರೆ. ಪರಿಹಾರ ನೀಡದಿದ್ದರೆ ಸರಿಪಡಿಸಲಾಗದ ನಷ್ಟವ ಅನುಭವಿಸಬೇಕಾಗುತ್ತದೆ " ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Also Read
ಬೌದ್ಧಿಕ ಆಸ್ತಿ ನಾಶ: ದಲಿತ ದಂಪತಿಗೆ ನೀಡಿದ ಪರಿಹಾರ ಎತ್ತಿಹಿಡಿದ ಸುಪ್ರೀಂ ಕೋರ್ಟ್

ಅನಧಿಕೃತ ಉತ್ಪನ್ನಗಳು ಅಧಿಕೃತವಾಗಿ ಪರವಾನಗಿ ಪಡೆದಿವೆ ಎಂದು ಸಾರ್ವಜನಿಕರು ನಂಬುವಂತೆ ಅವರನ್ನು ದಾರಿ ತಪ್ಪಿಸಬಹುದು ಎಂದ ನ್ಯಾಯಾಲಯವು ಈ ಹಿನ್ನೆಲೆಯಲ್ಲಿ ಅನನುಕೂಲವಾಗದಂತೆ ಸಮತೋಲನ ಸಾಧಿಸುವ ನ್ಯಾಯತತ್ವವು ವಾದಿಯ ಪರವಾಗಿ ಇದೆ ಎಂದು ಅಭಿಪ್ರಾಯಪಟ್ಟಿತು.

ಈ ತಡೆಯಾಜ್ಞೆ ಪ್ರತಿಫಲಿತ ಇಲ್ಲವೇ ಮರುನಿರ್ದೇಶಿತ ಯುಆರ್‌ಎಲ್‌ಗಳಿಗೂ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಅಲ್ಲದೆ ಇನ್ನೂ ಯಾರಾದರೂ ಉಲ್ಲಂಘಿಸುವವರು ಇದ್ದರೆ ಅವರ ಹೆಸರನ್ನೂ ಆರೋಪಿಸುವ ಸ್ವಾತಂತ್ರ್ಯವನ್ನು ಅರ್ಜಿದಾರರಿಗೆ ಅದು ನೀಡಿತು.  

'ಅಂದಾಜ್‌ ಅಪ್ನಾ ಅಪ್ನಾ' ಚಲನಚಿತ್ರದ ಪ್ರಮುಖ ಪಾತ್ರಗಳು ಮತ್ತು ಅವುಗಳ ಸಂಭಾಷಣೆಗಳು ಜನಜನಿತವಾಗಿರುವಂತಹದ್ದಾಗಿದ್ದು, ಅವುಗಳನ್ನು ವಾಣಿಜ್ಯಕವಾಗಿ ಬಳಸುತ್ತಿರುವ ಬಗ್ಗೆ ಅರ್ಜಿದಾರರು ಪ್ರಮುಖವಾಗಿ ತಗಾದೆ ಎತ್ತಿದ್ದಾರೆ. ಅವುಗಳ ಬಳಕೆಯ ಕುರಿತಾದ ಬೌದ್ಧಿಕ ಆಸ್ತಿ ಹಕ್ಕಿನ ವಿಶೇಷ ಸ್ವಾಮ್ಯ ತಮ್ಮದಾಗಿದೆ ಎಂದು ಅವರು ಪ್ರತಿಪಾದಿಸಿದ್ದು, ಈ ಕುರಿತು ಕೆಲವು ಉದಾಹರಣೆಗಳನ್ನು ನೀಡಿದ್ದಾರೆ:

  • ಕ್ರೈಮ್‌ ಮಾಸ್ಟರ್‌ ಗೊಗೋ: "ಆಂಖೆ ನಿಖಾಲ್‌ ಕೇ ಗೋಟಿಯಾ ಖೇಲ್ತಾ ಹೂಂ ಮೈ" (ಕಣ್ಣ ಗುಡ್ಡೆ ಕಿತ್ತು ಗೋಲಿಯಾಡುತ್ತೇನೆ) ಎನ್ನುವ ಸಾಲು.

  • ತೇಜ ಎನ್ನುವ ವ್ಯಕ್ತಿ ತಾನೇ ಎಂದು ಎರಡು ಅವಳಿ ಪಾತ್ರಗಳು ವಾದಿಸುವಾಗ ಮುಖದಲ್ಲಿರುವ ಗುರುತನ್ನು ತೋರಿಸುತ್ತಾ ಒಂದು ಪಾತ್ರ ಹೇಳುವ "ತೇಜಾ ಮೈ ಹೂಂ, ಮಾರ್ಕ್‌ ಇದರ್‌ ಹೈ" (ತೇಜ ನಾನೇ, ಗುರುತು ಇಲ್ಲಿದೆ ನೋಡಿ) ಎನ್ನುವ ಸಾಲು.

  • ನಟ ಪರೇಶ್‌ ರಾವಲ್‌ ನಿರ್ವಹಿಸಿದ್ದ ರಾಮ್‌ ಗೋಪಾಲ್‌ ಬಜಾಜ್ ಮತ್ತು ಶ್ಯಾಂ ಗೋಪಾಲ್‌ ಬಜಾಜ್‌ ಎಂಬ ಅವಳಿ ಪಾತ್ರಗಳು.

  • ನಟರಾದ ಆಮಿರ್‌ ಖಾನ್‌ ಮತ್ತು ಸಲ್ಮಾನ್‌ ಖಾನ್‌ ಕ್ರಮವಾಗಿ ನಟಿಸಿದ್ದ ಚಿತ್ರದ ಮುಖ್ಯ ಪಾತ್ರಗಳಾದ ಅಮರ್‌ ಮತ್ತು ಪ್ರೇಮ್‌ ಪಾತ್ರಗಳು.

ಇದಲ್ಲದೆ, ಜನರ ಮನದಲ್ಲಿ ವಿಭಿನ್ನ ಅರ್ಥವನ್ನು ಹೊಮ್ಮಿಸಿದ್ದ ಚಿತ್ರದ ಪ್ರಮುಖ ಪಾತ್ರಗಳು ಬಳಸುತ್ತಿದ್ದ "ಆಯ್‌ಲಾ" ಮತ್ತು "ಉಯ್‌ಮಾ" ಎನ್ನುವ ಉದ್ಗಾರಗಳನ್ನು ವಾಣಿಜ್ಯ ಚಿಹ್ನೆಯಾಗಿ ಬಳಸುತ್ತಿರುವ ಬಗ್ಗೆಯೂ ಅರ್ಜಿದಾರರು ಗಮನಸೆಳೆದಿದ್ದಾರೆ.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Andaz_Apna_Apna
Preview
Kannada Bar & Bench
kannada.barandbench.com