ಇಂಡಿಯಾ ಟುಡೇ ಸುದ್ದಿಸಂಸ್ಥೆಯ ವಿಡಿಯೋ ಪತ್ರಕರ್ತರೊಬ್ಬರನ್ನು ಬಿಜೆಪಿ ನಾಯಕಿ ಶಾಜಿಯಾ ಇಲ್ಮಿ ನಿಂದಿಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿರುವ ವಿಡಿಯೋವನ್ನು ತೆಗೆದುಹಾಕುವಂತೆ ಹಿರಿಯ ಪತ್ರಕರ್ತ ರಾಜದೀಪ್ ಸರ್‌ದೇಸಾಯಿ ಮತ್ತು ಸುದ್ದಿ ಸಂಸ್ಥೆಗೆ ದೆಹಲಿ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.
ಇಲ್ಮಿ ಅವರು ಹೂಡಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾ. ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರು ಈ ಆದೇಶ ನೀಡಿದರು.
ಮೂಲ ವೀಡಿಯೊವನ್ನು ದಾಖಲೆಯಲ್ಲಿ ಸಲ್ಲಿಸುವಂತೆ ಈ ಹಿಂದಿನ ವಿಚಾರಣೆ ವೇಳೆ ನ್ಯಾಯಾಲಯ ಸರ್‌ದೇಸಾಯಿ ಮತ್ತು ಇಂಡಿಯಾ ಟುಡೇ ಪರ ವಕೀಲರಿಗೆ ಸೂಚಿಸಿತ್ತು.
ಇಂದು ವೀಡಿಯೊ ವೀಕ್ಷಿಸಿದ ಪೀಠ ಇಲ್ಮಿಅವರು ಟಿವಿ ಕಾರ್ಯಕ್ರಮದಿಂದ ಖುದ್ದು ಹೊರನಡೆದ ಬಳಿಕ ವೀಡಿಯೊಗ್ರಾಫರ್ ಈ ದೃಶ್ಯಾವಳಿಗಳನ್ನು ಸೆರೆಹಿಡಿದಿದ್ದಾರೆ. ಈ ಪ್ರಕರಣದಲ್ಲಿ ಇಲ್ಮಿ ಅವರ ಖಾಸಗಿತನದ ವಿಚಾರವೂ ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿತು.
ಸರ್‌ದೇಸಾಯಿ ಪರ ವಕೀಲರು ಪ್ರಕರಣ ಮುಂದೂಡುವಂತೆ ಕೋರಿದ್ದರಿಂದ, ಮಧ್ಯಂತರ ಪರಿಹಾರವಾಗಿ ಇಲ್ಮಿ ಅವರ ಅರ್ಜಿಯಲ್ಲಿ ತೀರ್ಪು ನೀಡುವವರೆಗೆ ಸಾಮಾಜಿಕ ಮಾಧ್ಯಮದಿಂದ ವಿಡಿಯೋವನ್ನು ತೆಗೆದುಹಾಕಬೇಕು ಎಂದು ನ್ಯಾಯಾಲಯ ಸೂಚಿಸಿತು. ಅಲ್ಲದೆ ಉಳಿದ ಬಳಕೆದಾರರು ವಿಡಿಯೋವನ್ನು ಬಳಸದಂತೆ ನ್ಯಾಯಾಲಯ ನಿರ್ಬಂಧ ವಿಧಿಸಿತು.
ಸರ್‌ದೇಸಾಯಿ, ಇಂಡಿಯಾ ಟುಡೇ ಹಾಗೂ ಇತರರಿಗೆ ಈ ಸಂಬಂಧ ನೋಟಿಸ್ ನೀಡಿದ ಹೈಕೋರ್ಟ್ ಆಗಸ್ಟ್ 16 ರಂದು ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿತು.
ಕಾರ್ಗಿಲ್ ವಿಜಯ್ ದಿವಸ್ ಆಚರಣೆ ಸಂಬಂಧದ ರಾಜಕೀಯದ ಕುರಿತು ಇಂಡಿಯಾ ಟುಡೆಯಲ್ಲಿ ಸರ್‌ದೇಸಾಯಿ ಅವರು ಜುಲೈ 26ರಂದು ಏರ್ಪಡಿಸಿದ್ದ ಚರ್ಚಾ ಕಾರ್ಯಕ್ರಮ ಪ್ರಸ್ತುತ ಮೊಕದ್ದಮೆಯ ಮೂಲವಾಗಿದೆ. ಕಾರ್ಯಕ್ರಮದಲ್ಲಿ ಅಗ್ನಿವೀರ್ ಮತ್ತು ರಕ್ಷಣಾ ಪಡೆಗಳ ರಾಜಕೀಯೀಕರಣದ ವಿಷಯಗಳ ಬಗ್ಗೆ ಚರ್ಚಿಸಲಾಗಿತ್ತು. ಚರ್ಚೆ ವಾಗ್ವಾದಕ್ಕೆ ತಿರುಗಿ ಇಲ್ಮಿ ಕಾರ್ಯಕ್ರಮದಿಂದ ಹೊರನಡೆದಿದ್ದರು. ಅಲ್ಲದೆ ಕಾರ್ಯಕ್ರಮದ ಪ್ರಸಾರದ ವೇಳೆ ತನ್ನ ಧ್ವನಿ ಕೇಳದಂತೆ ಮಾಡಲಾಗಿದೆ ಎಂದು ಇಲ್ಮಿ ಸಾಮಾಜಿಕ ಖಾತೆ ಎಕ್ಸ್‌ನಲ್ಲಿ ಅಂದು ರಾತ್ರಿ ಹೇಳಿಕೊಂಡಿದ್ದರು.
ಮರುದಿನ ಬೆಳಿಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ಪ್ರಕಟಿಸಿದ್ದ ಸರ್‌ದೇಸಾಯಿ ಅವರು ಇಲ್ಮಿ ವಿಡಿಯೋ ಪತ್ರಕರ್ತರನ್ನು ನಿಂದಿಸಿದ್ದಾರೆ ಎಂದು ಹೇಳಿದ್ದರು.