ಸೇನಾಧಿಕಾರಿ ವಿರುದ್ಧ ಮಾನಹಾನಿಕರ ವರದಿ: ₹2 ಕೋಟಿ ಪರಿಹಾರ ನೀಡಲು 'ತೆಹಲ್ಕಾʼ ಪತ್ರಕರ್ತರಿಗೆ ದೆಹಲಿ ಹೈಕೋರ್ಟ್ ಆದೇಶ

ಕುಟುಕು ಕಾರ್ಯಾಚರಣೆ ಬಳಿಕ ಸೇನಾ ವಿಚಾರಣೆ ನಡೆದಿತ್ತು. ಆಗ ಮೇಜರ್ ಜನರಲ್ ಎಂ ಎಸ್ ಅಹ್ಲುವಾಲಿಯಾ ಅವರು ಸೇನಾಧಿಕಾರಿಯಾಗಿರಲು ಯೋಗ್ಯರಲ್ಲ ಎಂದು ಪರಿಗಣಿಸಲಾಗಿತ್ತು.
Tehelka
Tehelka
Published on

ಭಾರತೀಯ ಸೇನೆಯ ಮಾಜಿ ಅಧಿಕಾರಿ ಮೇಜರ್ ಜನರಲ್ ಎಂ ಎಸ್ ಅಹ್ಲುವಾಲಿಯಾ ಅವರು ಹೂಡಿದ್ದ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತರಾದ ತರುಣ್ ತೇಜ್‌ಪಾಲ್‌, ಅನಿರುದ್ಧ ಬಹಲ್, ಮ್ಯಾಥ್ಯೂ ಸ್ಯಾಮ್ಯುಯೆಲ್ ಹಾಗೂ ಸುದ್ದಿ ಜಾಲತಾಣ ತೆಹೆಲ್ಕಾ ₹ 2 ಕೋಟಿ ಪರಿಹಾರ ನೀಡಬೇಕು ಎಂದು ದೆಹಲಿ ಹೈಕೋರ್ಟ್‌ ಶುಕ್ರವಾರ ಆದೇಶಿಸಿದೆ [ಮೇಜರ್‌ ಜನರಲ್‌ ಎಂ ಎಸ್‌ ಅಹ್ಲುವಾಲಿಯಾ ಮತ್ತು ತೆಹಲ್ಕಾ.ಕಾಂ ನಡುವಣ ಪ್ರಕರಣ].

ಘಟನೆ ನಡೆದು ಸುಮಾರು 22 ವರ್ಷಗಳ ಬಳಿಕ ತೀರ್ಪು ಪ್ರಕಟವಾಗಿದೆ. 2001ರಲ್ಲಿ  ʼಆಪರೇಷನ್ ವೆಸ್ಟ್ ಎಂಡ್ ʼ ಎಂಬ ಕುಟುಕು ವೀಡಿಯೊ ಕಾರ್ಯಾಚರಣೆ ನಡೆಸಿದ್ದ ತೆಹಲ್ಕಾ, ರಕ್ಷಣಾ ವ್ಯವಹಾರಗಳಿಗೆ ಸಂಬಂಧಿಸಿದಂತೆ ಅಹ್ಲುವಾಲಿಯಾ ಲಂಚ ಸ್ವೀಕರಿಸಿದ್ದಾರೆ ಎಂಬುದಾಗಿ ಆರೋಪಿಸಿತ್ತು. ಈ ವೀಡಿಯೊ ತೆಹೆಲ್ಕಾ ಡಾಟ್‌ ಕಾಂ ಮತ್ತು ಜೀ ಟಿವಿ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಿತ್ತು.

ಕುಟುಕು ಕಾರ್ಯಾಚರಣೆ ಬಳಿಕ ಸೇನಾ ವಿಚಾರಣೆ ನಡೆದು ಅಹ್ಲುವಾಲಿಯಾ ಅವರನ್ನು ಸೇವೆಯಿಂದ ವಜಾಗೊಳಿಸಲು ನಿರ್ಧರಿಸಲಾಗಿತ್ತು. ಆದರೂ ಅಂದಿನ ಸೇನಾ ಮುಖ್ಯಸ್ಥರು ತಮ್ಮ ವಿವೇಚನಾಧಿಕಾರ ಬಳಸಿ ʼ(ದಾಖಲಿಸಬಹುದಾದ) ತೀವ್ರ ಅಸಮಾಧಾನದ ತೀರ್ಪು ನೀಡಿ ಸೇನಾಧಿಕಾರಿಯಾಗಿರಲು ಯೋಗ್ಯರಲ್ಲ' ಎಂದು ಪರಿಗಣಿಸಿದ್ದರು.

ಅಹ್ಲುವಾಲಿಯಾ ಹಣದ ಬೇಡಿಕೆ ಇಡದಿದ್ದರೂ ತೆಹಲ್ಕಾ ಮತ್ತು ಅದರ ಪತ್ರಕರ್ತರು ಅವರ ವಿರುದ್ಧ ಮಾನನಷ್ಟ ಉಂಟಾಗುವಂತಹ ವರದಿಗಳನ್ನು ಪ್ರಕಟಿಸಿದ್ದಾರೆ ಎಂದು ವಿವರವಾದ ಆದೇಶದಲ್ಲಿ, ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ತಿಳಿಸಿದ್ದಾರೆ.

ಪ್ರಕರಣದಲ್ಲಿ ಕ್ಷಮೆ ಯಾಚಿಸುವಂತೆ ಸೂಚಿಸುವುದು ಅಪ್ರಸ್ತುತವಾಗುತ್ತದೆ. ಅವರು ಈಗಾಗಲೇ ಸೇನಾ ವಿಚಾರಣೆ ಅನುಭವಿಸಿದ್ದಾರೆ. ಅವರನ್ನು ಸೇನಾಧಿಕಾರಿಯಾಗಲು ಅರ್ಹರಲ್ಲ ಎಂದು ಘೋಷಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

Also Read
ತೆಹಲ್ಕಾ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ ಅವರನ್ನು ಗೋವಾ ನ್ಯಾಯಾಲಯ ಖುಲಾಸೆಗೊಳಿಸಿದ್ದೇಕೆ?

ಅಹ್ಲುವಾಲಿಯಾ ಅವರು ಬ್ಲೂ ಲೇಬಲ್‌ ವಿಸ್ಕಿ ಮತ್ತು ₹ 10 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದಾಗಿ ತೆಹಲ್ಕಾದ ವೀಡಿಯೊ ಬಿಂಬಿಸಿದೆ. ಆರೋಪಗಳಿಂದ ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯೊದಗಿದ್ದು ತಮ್ಮ ನಡವಳಿಕೆ ಹಾಗೂ ಖ್ಯಾತಿಗೆ ಧಕ್ಕೆ ಒದಗಿದೆ. ನನ್ನ ಪೂರ್ಣ  ಹೇಳಿಕೆಗಳನ್ನು ವೀಡಿಯೊದಲ್ಲಿ ತೋರಿಸಿಲ್ಲ ಎಂದು ಸೇನಾಧಿಕಾರಿ ದೂರಿದ್ದರು.

ವಾದ ಆಲಿಸಿದ ನ್ಯಾಯಾಲಯ ಅಹ್ಲುವಾಲಿಯಾ ಅವರು ಸೈನ್ಯದಲ್ಲಿ ಮೇಜರ್ ಜನರಲ್ ಹುದ್ದೆ ಅಲಂಕರಿಸಿದ್ದ ಪ್ರತಿಷ್ಠಿತ ವ್ಯಕ್ತಿಯಾಗಿದ್ದರು. ಅವರು ರೂ 50,000 ಲಂಚ  ಕೇಳಿ ಪಡೆದರು ಎಂಬ ಸುಳ್ಳು ಆರೋಪಕ್ಕಿಂತ ಬೇರೊಂದು ಮಾನನಷ್ಟ ಅಪಖ್ಯಾತಿ ಇರಲಾರದು ಎಂದಿದೆ.

“ಪ್ರತಿವಾದಿಯ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಲಂಚ ಸ್ವೀಕರಿಸಲು ಒಪ್ಪದ ಪ್ರಾಮಾಣಿಕ ಸೇನಾಧಿಕಾರಿಯ ಖ್ಯಾತಿಗೆ ಗಂಭೀರ ಹಾನಿ ಉಂಟುಮಾಡುವಂತಹ ಇದಕ್ಕಿಂತ ನಿರ್ಲಜ್ಜ ಪ್ರಕರಣ ಬೇರೊಂದು ಇರಲಾರದು” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆದರೆ ಪ್ರಕರಣದ ಉಳಿದ ಪ್ರತಿವಾದಿಗಳಾದ ಜೀ ಮತ್ತು ಸುಭಾಷ್ ಚಂದ್ರ ಅವರ ವಿರುದ್ಧದ ಮಾನನಷ್ಟ ಕೃತ್ಯ ಸಾಬೀತಾಗಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.

Kannada Bar & Bench
kannada.barandbench.com